ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೨೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ವಾಸ್ತವಿಕತೆಯ ಅರಿವು ಮಾಯವಾದ ಬೇನೆಗಳು

೧೮೩

ತೀರಿಕೊಂಡನಂತರ, ಮಗನನ್ನು ತಾಯಿಯು ಮುದ್ದಿಸುವುದು ವಿಪರೀತವಾಯಿತು. ತನ್ನ ಮಗ ಮಾಡಿದುದೇ ಸರಿ, ಅವನಷ್ಟು ಜಾಣ ಇನ್ನು ಯಾರಿದ್ದಾರೆ ಎನ್ನುವ ಮನೋಭಾವ ತಾಯಿಯದು. ವಿಚಿತ್ರವಾಗಿ ನಡೆದುಕೊಂಡರೂ, ವಿನಾಕಾರಣ ಸಿಡುಕಿದರೂ ತಾಯಿಯು ಯಾಕಪ್ಪ ಹೀಗಾಡುತ್ತಿ ಎಂದು ಕೇಳದೆ ಕೇವಲ ಮುದ್ದುಗರೆಯುವುದರಲ್ಲಿ ಮಗ್ನಳಾಗಿದ್ದಳು. ಊಟಕ್ಕೆ ಕುಳಿತಿದ್ದಾಗ ಒಮ್ಮೆ ಸಂಡಿಗೆಯನ್ನು ತಾಯಿ ಬಡಿಸಿದಳು. ಸಂಡಿಗೆ ಅಂದರೆ ರಾಮಣ್ಣನಿಗೆ ಮೊದಲಿನಿಂದಲೂ ಪ್ರಾಣ. ಆದರೆ ಅವತ್ತು ಒಂದು ಸಂಡಿಗೆಯನ್ನು ತೆಗೆದುಕೊಂಡು 'ನೋಡಮ್ಮಾ, ಇದನ್ನು ಸ್ಯಾಟಲೈಟ್ ತರಹ ಹೋಗುವಂತೆ ಬೀಸುತ್ತೀನಿ' ಎಂದು ಸೂರಿನತ್ತ ರೊಯ್ಯಂತ ಬೀಸಿದ. ಮುದುಕಿಗೆ ಸ್ಯಾಟಲೈಟ್ ಅಂದರೇನು ಎನ್ನುವುದು ತಿಳಿಯದು. ಸಂಡಿಗೆಯು ಕರಕಲಾಯಿತೇನೋ, ಅದಕ್ಕೇ ಹಾಗೆ ರೇಗಿರಬೇಕು ಎಂದು ಸಮಾಧಾನ ಮಾಡಿಕೊಂಡಳು. ಮಗನಿಗೆ ಏನಾದರೂ ಆಗಿರಬಹುದೋ ಎನ್ನುವ ಯೋಚನೆಯೇ ಆಕೆಗೆ ಬರಲಿಲ್ಲ. ನೌಕರರ ವಿಲಾಸೀ ನಾಟಕ ಸಂಸ್ಥೆಯು, ಮಾನ್ಯ ಮಂತ್ರಿಗಳ ಸಮ್ಮುಖದಲ್ಲಿ ನಾಟಕವೊಂದನ್ನು ಆಡಿದರು. ರಾಮಣ್ಣನು ಯಾವ ಪಾತ್ರವನ್ನೂ ವಹಿಸಿರಲಿಲ್ಲ. ವಂದನಾರ್ಪಣೆಯನ್ನು ಮಾಡುವ ಕೆಲಸ ಅವನದು. ವಂದನಾರ್ಪಣೆಯನ್ನು ಮಾಡತೊಡಗಿದಾಗ ಲಕ್ಷಣವಾಗಿಯೇ ಆರಂಭಿಸಿದ. ಆದರೆ ಮೂರು ನಾಲ್ಕು ನಿಮಿಷಗಳಲ್ಲಿ ಏನನ್ನೋ ಆಡಲಾರಂಭಿಸಿದ. ಐದು ನಿಮಿಷವಾಯಿತು, ಹತ್ತು ನಿಮಿಷವಾಯಿತು, ನಿಲ್ಲಿಸಲೇ ಒಲ್ಲ. ದೊಡ್ಡ ಪರದೆಯನ್ನು ಇಳಿಬಿಟ್ಟು ರಾಮಣ್ಣನನ್ನು ಪಕ್ಕಕ್ಕೆ ಎಳೆದುಕೊಂಡು ಹೋಗಬೇಕಾಯಿತು. ಸಹೋದ್ಯೋಗಿ ಪ್ರೊಬೇಷನರು 'ರಾಮಣ್ಣ, ಒಂದು ವಾರ ರಜ ತೆಗೆದುಕೊಂಡು ವೈದ್ಯರ ಸಲಹೆಯನ್ನು ಪಡೆಯುವುದು ಒಳ್ಳೆಯದು' ಎಂದು ಮನೆಗೆ ಕರೆದುಕೊಂಡುಹೋಗಿ ಬಿಡುವಾಗ ಸಲಹೆ ಮಾಡಿದ, ಮನೆಯೊಳಕ್ಕೆ ರಾಮಣ್ಣನೊಡನೆ ಹೋಗಿ ಅವನ ತಾಯಿಗೂ ಇದೇ ಮಾತನ್ನು ಒತ್ತಾಯಪೂರ್ವಕವಾಗಿ ಹೇಳಿದ.

ತಾಯಿಗೆ ಗಾಬರಿಯಾಯಿತು. ತಾರು ಕೊಟ್ಟು ಹಿರಿಯ ಮಗಳು, ಅಳಿಯನನ್ನು ಕರೆಸಿದಳು. ಮಾರನೆಯ ಸಂಜೆಯ ವೇಳೆಗೆ ಅವರು “ಏನಾಯಿತೋ' ಎಂದು ಗಾಬರಿಯಾಗಿ ಬಂದಿಳಿದರು. ಅಳುತ್ತಾ ತಾಯಿಯು ಮಗಳಿಗೆ ರಾಮಣ್ಣನ ವಿಚಿತ್ರ ನಡವಳಿಕೆಯನ್ನೂ ಅವನ ಸ್ನೇಹಿತ ಹಿಂದಿನ ರಾತ್ರಿ ಹೇಳಿದುದನ್ನೂ ಅಡಿಗೆಯ ಮನೆಯ ಬಾಗಿಲು ಮುಚ್ಚಿಕೊಂಡು ಗುಟ್ಟಿನಲ್ಲಿ ಹೇಳಿದಳು. ಹಿರಿಯಕ್ಕನು ಹೊರಕ್ಕೆ ಬಂದಮೇಲೆ ರಾಮಣ್ಣನನ್ನು ಮಾತನಾಡಿಸಿದಳು, ಯೋಗಕ್ಷೇಮದ