ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೨೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೧೮೬

ಮನಮಂಥನ

ಪೂರ್ಣವಾಗಿ ಗುಣಹೊಂದುತ್ತಾನೆ. ಇದನ್ನು ಧೈರ್ಯವಾಗಿ ಖಂಡಿತವಾಗಿ ಹೇಳುತ್ತೇನೆ. ಓದಿದವರು, ಲೋಕಾನುಭವವುಳ್ಳವರು ನೀವು. ಏನಾದರೂ ಮಾಡಿ, ರಾಮಣ್ಣನನ್ನು ನಮ್ಮ ಆಸ್ಪತ್ರೆಯಲ್ಲಿ ಕೆಲವು ವಾರಗಳಿರುವಂತೆ ಏರ್ಪಾಡು ಮಾಡಬೇಕು. ನಿಮ್ಮ ಅತ್ತೆಯನ್ನು ಒಪ್ಪಿಸಬೇಕು. ಆಕೆ ಏನಾದರೂ ಮೊಂಡು ಹಿಡಿದುಕೊಂಡು, ಮಾನಸಿಕ ಆರೋಗ್ಯದ ಆಸ್ಪತ್ರೆಗೆ ಸೇರಿಸುವುದಿಲ್ಲ ಎಂದು ಹಳೆಯ ಕಂದಾಚಾರದ ಮೂಢ ಭಾವನೆಯಿಂದ ಹಠವನ್ನು ಹಿಡಿದರೆ, ರಾಮಣ್ಣನ ಭವಿಷ್ಯವು ಅನಿಶ್ಚಿತವಾಗುತ್ತದೆ.

ಈಗ ಕೆಲವು ಔಷಧಿಗಳನ್ನು ವಿಧಾಯಿಸುತ್ತೇನೆ. ಒಂದೆರಡು ದಿನಗಳು ಮನೆಯಲ್ಲಿ ರಾಮಣ್ಣ ಅವನ್ನು ಸೇವಿಸಲಿ, ಉದ್ವೇಗವು ಸ್ವಲ್ಪ ಕಡಿಮೆಯಾಗುತ್ತದೆ. ಆ ವೇಳೆಗೆ ಅವರ ತಾಯಿಯೂ ಒಪ್ಪವಂತೆ ಮಾಡಿ, ಆಸ್ಪತ್ರೆಗೆ ಬಂದು ಸೇರಿಕೊಳ್ಳಲು ಎಲ್ಲ ವ್ಯವಸ್ಥೆಯನ್ನೂ ಮಾಡುತ್ತೇನೆ. ಕೆಲವೇ ವಾರಗಳಲ್ಲಿ ಭಗವಂತನ ಕೃಪೆಯಿಂದ ಸ್ವಾಸ್ಥ್ಯವನ್ನು ಪಡೆದ ರಾಮಣ್ಣನನ್ನು ಮನೆಗೆ ಕಳುಹಿಸಿಕೊಡುತ್ತೇನೆ.

ಇನ್ನೊಂದು ಮುಖ್ಯ ವಿಷಯ, ಮರೆತಿದ್ದೆ. ಅದನ್ನೂ ಹೇಳುತ್ತೇನೆ. ಇನ್ಸೂರೆನ್ಸ್ ಕಚೇರಿಯ ಮುಖ್ಯಾಧಿಕಾರಿಗಳು ನನಗೆ ನಿಕಟ ಸ್ನೇಹಿತರು. ತುಂಬಾ ವಿಶಾಲ ಮನಸ್ಸಿನವರು, ಆತ. ನನ್ನ ಮಾತಿನಲ್ಲಿ ಅವರಿಗೆ ಗೌರವವಿದೆ. ಕೃತಜ್ಞತಾ ಭಾವನೆಯನ್ನೂ ನನ್ನ ವಿಷಯದಲ್ಲಿ ಹೊಂದಿದ್ದಾರೆ. ಅವರಿಗೆ ಹೇಳುತ್ತೇನೆ, 'ರಾಮಣ್ಣನಿಗೆ ಆರು ತಿಂಗಳು ರಜೆ ಕೊಡಿ ಎಂದು. ಆ ಅವಧಿಯಲ್ಲಿ ರಾಮಣ್ಣನನ್ನ ಸ್ವಸ್ಥಪಡಿಸುವ ಹೊಣೆ ನನ್ನದು. ಅನಂತರ ಅವ ಆ ಕಚೇರಿಯಲ್ಲಿ, ಆಫೀಸರಾಗಿ ಕೆಲಸವನ್ನು ಮಾಡಿಯೇ ಮಾಡುತ್ತಾನೆ. ಅರಿಯದ ಅವರೂ ಇವರೂ ಹೇಳಿದುದನ್ನು ಕೇಳಿಕೊಂಡು, ಮಂತ್ರ ಮಾಟ ಮಾಡಿಸಹೋಗದೆ, ಸೂಕ್ತ ಚಿಕಿತ್ಸೆಯನ್ನು ಮಾಡಿಸಿ; ದೇವರು ಒಳ್ಳೆಯದನ್ನು ಕರುಣಿಸುತ್ತಾನೆ.'

ಎದೆಯಾಳದಿಂದ ಈ ರೀತಿ ಮನೋವೈದ್ಯರು ನುಡಿದುದು, ಭಾವನ ಮೇಲೆ ತುಂಬಾ ಪರಿಣಾಮವನ್ನುಂಟುಮಾಡಿತು. ಹೆಂಡತಿಯ ಸಹಾಯವನ್ನು ಗಳಿಸಿ ಅತ್ತೆಯ ಒಪ್ಪಿಗೆಯನ್ನು ಪಡೆದು, ರಾಮಣ್ಣನನ್ನು ಆರೆಂಟು ವಾರ ಆಸ್ಪತ್ರೆಯಲ್ಲಿ ಇರಿಸಲಾಯಿತು. ಶ್ರದ್ಧೆಯಿಂದ ಮನೋವೈದ್ಯರು ನಡೆಸಿದ ಚಿಕಿತ್ಸೆಯು ಘೋರವಾಗಿ ಕಂಡರೂ ರಾಮಣ್ಣನ್ನು ಗುಣಪಡಿಸಿತು.

ಈಗವ, ಇನ್ಸೂರೆನ್ಸ್ ಕಚೇರಿಯ ಮುಖ್ಯಸ್ಥನಾಗಿದ್ದಾನೆ. ಇಪ್ಪತ್ತು ವರ್ಷಗಳ ಸಫಲ ಸೇವೆಯನ್ನು ಸಲ್ಲಿಸಿ, ಆ ಪದವಿಯನ್ನು ಪಡೆದಿದ್ದಾನೆ.