೧೯೧
ಆದ ಗಂಡನೇ ಸಿಗಬೇಕು. ಕೇವಲ ಪಿ. ಯು. ಸಿ. ಆಗಿದ್ದರೆ ಯಾರಾದರೂ ಮದುವೆಯನ್ನು ಮಾಡಿಕೊಳ್ಳಬಹುದು' ಎಂದು ತಾಯ್ತಂದೆಯರ ನಂಬಿಕೆ. ಆದಕಾರಣ ಆಕೆ ಮನೆಯಲ್ಲಿ ಕೂತಿದ್ದಾಳೆ. ಬೆಳೆದ ಹೆಣ್ಣು, ಹೊರಗಡೆ ತುಂಬಾ ಅಡ್ಡಾಡಬಾರದು.
ಎರಡು ವರ್ಷಗಳ ಹಿಂದೆ ಇರಬೇಕು ; ನಿದ್ರೆಯು ಸರಿಯಾಗಿ ಬರುವುದಿಲ್ಲ. ಎಂದು ಅವಳು ಹೇಳತೊಡಗಿದ್ದು, 'ಕೆಟ್ಟ ಕೆಟ್ಟ ಕತೆ ಪುಸ್ತಕಗಳನ್ನು ಸದಾ ಓದುವ ಚಾಳಿಯನ್ನು ಬಿಟ್ಟು, ಮೈಬಗ್ಗಿಸಿ ಮನೆ ಕೆಲಸವನ್ನು ಮಾಡಿದರೆ, ನಿದ್ರೆಯೂ ಬರುತ್ತೆ, ಮುಂದೆ ಗಂಡನ ಮನೆಯಲ್ಲಿ ಒಳ್ಳೆಯ ಹೆಸರನ್ನೂ ಪಡೆಯಬಹುದು ಎಂದು ಅಮ್ಮ ಅಲವತ್ತುಕೊಂಡಳು. ನಿದ್ರೆ ಬರುಲ್ಲ ಅಂತ ಆನಂತರ ಕುಮುದ ಹೇಳಲಿಲ್ಲ. ರಾತ್ರಿಯೆಲ್ಲಾ ಕಂಬಳಿಯ ಮುಸುಕು ಹಾಕಿಕೊಂಡು ಜಾಗರಣೆ ಮಾಡುತ್ತಿದ್ದಳು. ಮಧ್ಯಾಹ್ನದ ಹೊತ್ತಿನಲ್ಲಿ ಪುಸ್ತಕವನ್ನು ಹಿಡಿದು ಮೂಲೆಯಲ್ಲಿ ಕೂರಲಾರಂಭಿಸಿದಳು. ಅರ್ಧ ಗಂಟೆಯಾದರೂ ಪುಸ್ತಕದ ಹಾಳೆಯನ್ನು ಮುಂದಕ್ಕೆ ಮಗುಚುತ್ತಿರಲಿಲ್ಲ. 'ಬಟ್ಟೆಯನ್ನಾದರೂ ಒಗೆಯಬಾರದೇನೇ' ಎಂದು ಅಮ್ಮ ರೇಗಿದಾಗ, ಹುಬ್ಬು ಗಂಟಿಕ್ಕಿಕೊಂಡು ಬಟ್ಟೆ ಒಗೆಯುವುದಕ್ಕೆ ಹೋಗುತ್ತಿದ್ದಳು. ಬಟ್ಟೆಗಳಿಗೆ ಸೋಪು ಹಚ್ಚಲು ಅರ್ಧ ಗಂಟೆ ತೆಗೆದುಕೊಳ್ಳುತ್ತಿದ್ದಳು. ಇದನ್ನು ಕಂಡ ಅಮ್ಮ ನಿನಗೆ ಕೆಲಸ ಹೇಳುವುದೂ ಒಂದೇ, ಸೂಳೆ ಕೈಲಿ ಜೋಳ ಕುಟ್ಟಿಸುವುದೂ ಒಂದೇ ; ಬಾ ಈ ಕಡೆಗೆ ನಾನೇ ಬೇಗ ಮುಗಿಸ್ತೀನಿ, ಮುಂದೆ ಹ್ಯಾಗೆ ಬಾಳೀಯೆ ನೀನು' ಎಂದು ಸಿಡುಕುತ್ತಿದ್ದಳು. ಹಲವಾರು ಬಾರಿ ಹೀಗಾದ ಮೇಲೆ, ಒಮ್ಮೆ ಪಾತ್ರೆಗಳನ್ನು ನಿಧಾನವಾಗಿ ಕುಮುದ ಗಲಬರಿಸುತ್ತಿದ್ದಾಗ, ಅಮ್ಮ ಯಥಾ ಪ್ರಕಾರ ಟೀಕಿಸಿದಳು. ಕುಮುದ ರೇಗಿದಳು. ಕೈಲಿದ್ದ ಪಾತ್ರೆಯನ್ನು ಅಮ್ಮನ ಮುಖಕ್ಕೆ ಎಸೆದು, ತನ್ನ ಕೊಠಡಿಗೆ ಹೋಗಿ ಬಾಗಿಲು ಮುಚ್ಚಿಕೊಂಡಳು. ಅವತ್ತಿನಿಂದ ಹುಬ್ಬುಗಂಟು ಅವಳ ಮೇಲೆ ಶಾಶ್ವತವಾಯಿತು. ಸಂಜೆಯ ಹೊತ್ತಿಗೆ ಅಪ್ಪ ಮನೆಗೆ ಹಿಂದಿರುಗಿದರು. ವಿಷಯವನ್ನೆಲ್ಲಾ ಹೆಂಡತಿಯಿಂದ ತಿಳಿದುಕೊಂಡರು. ಕುಮುದನ ಕೊಠಡಿಯ ಬಳಿಗೆ ಹೋಗಿ ತುಂಬಾ ಆದರದ ಮಾತುಗಳಿಂದ ; 'ಬಾಗಿಲು ತೆಗಿ ಕುಮುದ ; ನಿಮ್ಮಮ್ಮನ ಜಾಯಮಾನ ಗೊತ್ತಿಲ್ಲವೇ ಲೊಟಕದೇ ಇದ್ದರೆ ಉಂಡನ್ನ ಅವಳಿಗೆ ಮೈ ಹತ್ತುಲ್ಲ. ಎಲ್ಲಿ ಬಾಗಿಲು ತೆಗೆ' ಎಂದರು. ಕೊಠಡಿಯ ಬಾಗಿಲನ್ನು ಕುಮುದ ತೆಗೆದಳು. ಹೋಗಿ ಮಂಚದ ಮೇಲೆ ಬಿಮ್ಮಂತ ಕೂತಳು. ಧುಮುಗುಡುತ್ತಿತ್ತು ಅವಳ ಮುಖ. ಹತ್ತು ಹದಿನೈದು ನಿಮಿಷಗಳು ಅಪ್ಪ ತುಂಬಾ ಪ್ರಯತ್ನಪಟ್ಟರು. 'ಏಳಮ್ಮಾ ! ನನ್ನ ಜತೇಲಿ ಕೂತು