ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೨೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೧೯೨

ಮನಮಂಥನ

ಏನಾದರೂ ತಿನ್ನುವೆಯಂತೆ, ಬೆಳೆಯುವ ಹುಡುಗಿಯರು ಹೀಗೆ ಉಪವಾಸ ಇರಬಾರದು' ಅಂತ ಇನ್ನಿಲ್ಲದ ಹಾಗೆ ಹೇಳಿದರು. ಕಲ್ಲಿನ ಪ್ರತಿಮೆಯಾದರೂ ಉತ್ತರವನ್ನು ಕೊಡುತ್ತಿತ್ತೇನೋ, ಆದರೆ ಕುಮುದ ಜಪ್ಪಯ್ಯ ಅನ್ನಲಿಲ್ಲ ; ಬೆಳಗಿನಿಂದ ದುಡಿದು ಬಂದಿದ್ದರು ತಂದೆ. ಅವರಿಗೂ ಅತಿ ಬೇಜಾರಾಯಿತು. ಮಗಳ ಕೆನ್ನೆಗೆ ಒಂದೇಟನ್ನು ಬಲವಾಗಿ ಬಿಗಿದು 'ಎಲ್ಲಾದರೂ ಹಾಳಾಗಿ ಹೋಗು' ಎಂದು ಬೈದು ತಮ್ಮ ಕೊಠಡಿಗೆ ಹೋದರು ; ಸಿಡಿಮಿಡಿ ಗುಟ್ಟುತ್ತಾ.

ದೆವ್ವ ಹಿಡಿದವಳಂತೆ ಕುಮುದ ಕೂತಲ್ಲೇ ಕೂತಿದ್ದಳು. ಆಳಲಿಲ್ಲ, ಮಾತಾಡಲಿಲ್ಲ. ಎರಡು ದಿನಗಳಾದುವು ಒಂದು ತುತ್ತು ಅನ್ನ ತಿನ್ನಿಸುವುದಕ್ಕೆ, ಅಮ್ಮನ ಸಲಹೆಯ ಮೇರೆ ಅಪ್ಪ ಹೋಗಿ ಮಂತ್ರವಾದಿಯನ್ನು ಕರೆದುಕೊಂಡು ಬಂದರು. ಘೋರವಾದ ಪೂಜೆಯನ್ನು ಉಗ್ರವಾಗಿ ಮಂತ್ರವಾದಿಯು ಹಾಕಿದ. 'ದೆವ್ವವನ್ನು ಬಿಡಿಸಿದ್ದೇನೆ. ಇದೇ ಕೇರಿಯಲ್ಲಿ ಸತ್ತಿದ್ದ ಬಾಣಂತಿಯ ದೆವ್ವ ಬಂದು ಮೆಟ್ಟಿಕೊಂಡಿತ್ತು. ಬಡಿದು ಬಿಡಿಸಿ, ತಿರುಗಿ ಬರದ ಹಾಗೆ ದಿಗ್ಧಂಧನವನ್ನು ಹಾಕಿದ್ದೀನಿ.' ಎಂದು ಹೇಳಿ ಜೋಳಿಗೆಯನ್ನು ಭರ್ತಿ ಮಾಡಿಕೊಂಡು ಅವ ಹೊರಟುಹೋದ.

ಆಮೇಲೆ ನಾಲೈದು ದಿನ ಎಲ್ಲರ ಜತೆ ಕುಮುದ ಊಟ ಮಾಡಿದಳು. ತಿಂಡಿ ತಿಂದಳು, ಕಾಫಿ ಕುಡಿದಳು. ಆದರೆ ಒಂದು ಮಾತಿಲ್ಲ. ಒಂದು ನಗುವಿಲ್ಲ. ಬೆಪ್ಪು ಬಡಿದವಳಂತಿದ್ದಳು. ಮಾತನಾಡಿಸಲು ತಾಯ್ತಂದೆಯರಿಗೆ ಭಯ. ಏನು ಮಾತಾಡಿದರೆ ತಿರುಗಿ ಕೆರಳುತ್ತಾಳೋ ಎನ್ನುವ ಭಯ. ಎರಡು ಮೂರು ವರ್ಷಗಳಾದರೂ ಕುಮುದಳ ನಡವಳಿಕೆಯಲ್ಲಿ ಯಾವ ರೀತಿಯ ಬದಲಾವಣೆಯೂ ಆಗಲಿಲ್ಲ.

ಈ ಅವಧಿಯಲ್ಲಿ ಬೇಗ ಮದುವೆಯನ್ನು ಮಾಡಿದರೆ ಅವಳಿಗೆ ಗುಣವಾಗುತ್ತದೆ ಎಂದು ಯೋಚಿಸಿ ವರಾನ್ವೇಷಣೆಯನ್ನು ಜರೂರಾಗಿ ಮಾಡತೊಡಗಿದರು. ಆರೆಂಟು ವರಗಳೂ ಬಂದು ಹೆಣ್ಣನ್ನು ನೋಡಿಕೊಂಡು ಹೋಗಿದ್ದರು. ಬಂದವರೆದುರಿಗೆ ಕುಮುದ ಮನೆಯವರ ಮಾನವನ್ನು ತೆಗೆಯಲಿಲ್ಲ. ಆದರೆ ವಯಸ್ಸಿಗೆ ಬಂದ ಹೆಣ್ಣಿನ ಚಾಲೂಕನ್ನು ಬೀರಲಿಲ್ಲ. ವರದಕ್ಷಿಣೆಯ ಮೊತ್ತ ಹುಡುಗಿಯ ವಯಸ್ಸು, ರೂಪ, ವಿದ್ಯೆ, ಇತ್ಯಾದಿ ಹಲವಾರು ಕಾರಣಗಳಿಂದ ಯಾವ ಗಂಡೂ ಒಪ್ಪಿಕೊಳ್ಳಲಿಲ್ಲ.

ವಿನಾಕಾರಣ ಸಿಡುಕುವುದು ಹೆಚ್ಚಾಯಿತು. ಗಂಟೆಗಳ ಕಾಲ ಕೂತಲ್ಲೇ ಕೂತು ಏನನ್ನೋ ಗಾಢವಾಗಿ ಯೋಚಿಸುತ್ತಿರುವಂತಿರುವುದು, ಹತ್ತು ಬಾರಿ