೧೯೫
ಬೇಜಾರು ತುಂಬಿದ ಭಾಮಾ
'ಬೇಜಾರು ; ಏನು ಮಾಡಲಿ, ಕೆಲಸ ಬಿಡಲೇ? ಬಿಟ್ಟರೆ ಹೇಗೆ? ಆಗ ಮಾತ್ರ ಆತಂಕವೆಲ್ಲ ಮಾಯವಾಗುತ್ತದೆಯೆ? ತಲೆ ಚಿಟ್ಟು ಬೇಜಾರು ! ನಾನು ಸದೃಹಿಣಿ ಆಗಬಲ್ಲೆನೆ? ಅವರ ಸಂಬಳದಲ್ಲೇ ನೆಮ್ಮದಿಯಾಗಿರಬಲ್ಲೆನೆ? ಹೇಗೆ ಮಾಡುವುದು? ಮಾನಸಿಕ ತಳಮಳಕ್ಕೆ ಕಾರಣವೇನು? ಎಲ್ಲಿಗೆ ಹೋಗುವುದು? ಕುಳಿತಿದ್ದರೆ ಕುಳಿತೇ ಇರುವ ಅನ್ನಿಸುತ್ತದೆಯಲ್ಲ ! ನಿದ್ದೆ ಬಂದಹಾಗಾಗುತ್ತದೆ. ಆದರೆ ಈಗ ಮಲಗಲು ಸಾಧ್ಯವೇ? ಹಾಗೂ ಸಾಧ್ಯವಿದ್ದಾಗ ಮಲಗಿದರೆ ನಿದ್ದೆ ಬರುವುದಿಲ್ಲ. ಈ ಮಾನಸಿಕ ತಳಮಳ ನನ್ನನ್ನು ಚಿತ್ರವಧೆ ಮಾಡುತ್ತಿದೆ. ಇದಕ್ಕೆಲ್ಲಾ ನನ್ನ Weak-mind ಕಾರಣವೇ? ನಾನಷ್ಟು ಹೇಡಿಯೇ? ಎಲ್ಲಿಗೆ ಓಡಿಹೋಗಲಿ? ಮಗುವಿನ ಗತಿಯೇನು? ದೇವರೇ ಕಾಪಾಡಬೇಕು. ಗೆಲುವು ಎನ್ನುವುದು ನನ್ನ ಜೀವನದಲ್ಲಿ ಮೂಡುವುದೇ ಇಲ್ಲವೇ? ನನ್ನ ಡಾಕ್ಟರ್, ಸಲಹೆ ಕೊಡಲಾರರೇ? ನೋಡೋಣ. ತಾಳಿದವನು ಬಾಳಿಯಾನು. ಶ್ರೀನಿವಾಸ ಹಯಗ್ರೀವ ಕಾಪಾಡು. ಹೇಗೋ April ಓಡಿ ಬಂದು ಬಿಡಲಿ, ಏನಾದರೂ ಸರಿಯೇ ಕೆಲಸ ಬಿಡುವೆನು. ಅಲ್ಲಿಯ ತನಕ ಹೇಗಾದರೂ ಉತ್ಸಾಹ ಹುಟ್ಟಿಸಿಕೊಳ್ಳಬೇಕಲ್ಲ. ಡಾಕ್ಟರ್ ಏನಾದರೂ ಮಾಡಿ ನನ್ನ ಈ ಮಾನಸಿಕ ಸಾವನ್ನು ಹೋಗಲಾಡಿಸಿ. ಇಲ್ಲದಿದ್ದರೆ ಚಿರಂತನ ಸಾವಾದರೂ ಬರಲಿ. ಈ ತುಂಡು ಸಾವು ಸಾಧ್ಯವಿಲ್ಲ. ಎಲ್ಲರಿಗೂ ಬೇಜಾರು ; ನನಗೂ ಇಷ್ಟವಿಲ್ಲ. ಇದು ಬಹಳವಾಗಿ ಸೋಮಾರಿತನವೇ ಆಗಿದ್ದಲ್ಲಿ ನನ್ನನ್ನು ಇಷ್ಟು ಕಾಡುತ್ತಿರಲಿಲ್ಲ. ಈ ಒತ್ತಡ ಸಂಜೆಯ ಹೊತ್ತಿಗೆ ಕಡಿಮೆಯಾಗುತ್ತದೆ. ಆದರೆ ಬೆಳಿಗ್ಗೆ ನನ್ನ ಕೈಲಿ ತಡೆಯಲು ಸಾಧ್ಯವಿಲ್ಲ. ಈ ನಿರುತ್ಸಾಹ ನನ್ನನ್ನು ಸಂಪೂರ್ಣ ನಿತ್ರಾಣಳನ್ನಾಗಿ ಮಾಡಿಬಿಡುತ್ತಿದೆ.
ಸ್ವಲ್ಪಾನೂ ಬುದ್ಧಿ ಇಲ್ಲವೇ, ಅಷ್ಟು ಪೆದ್ದೇ? ಇಷ್ಟೆಲ್ಲಾ ಹೇಗೆ ಓದಿದೆ. ಹೇಗಾದರಾಗಲಿ ಹೇಳಿಬಿಡೋದು. ಹೋದರೆ ಹೋಯಿತು. ಚೆನ್ನಾಗಿರುವುದಿಲ್ಲ. ತಪ್ಪೇನಿಲ್ಲ. ಅದು ಇಷ್ಟಕ್ಕೆಲ್ಲಾ ಕಾರಣವೇ? ಮರೆತುಬಿಡು. ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿತಂದೆ ತಾಯಿಗಳ ಪ್ರೀತಿ ಅವಶ್ಯಕ. ಅವರು ತಾನೇ ಏನು ಮಾಡಲು ಸಾಧ್ಯ ಪಾಪ ನನ್ನಂತಹ ಹೇಡಿ ಜತೆಗೆ ಹೇಗೆ ಹೆಣಗಬೇಕು?'
ಭಾಮಾ ಬರೆದು ತಂದ ಕಾಗದಗಳಿಂದ ಮೇಲೆ ಕಾಣಿಸಿರುವುದನ್ನು ಉದಹರಿಸಿದ್ದೇನೆ. ಎಂ.ಎ., ಬಿ.ಇಡಿ., ಮಾಡಿ ಕಾಲೇಜಿನಲ್ಲಿ ಅಧ್ಯಾಪಕಿಯಾಗಿದ್ದಾಳೆ.