ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೨೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೧೯೬

ಮನಮಂಥನ

ಮುತ್ತಿನ ಮಣಿಯಂತಹ ಇಬ್ಬರು ಮಕ್ಕಳು, ಸಭ್ಯಸ್ಥ ಗಂಡ, ದಂಪತಿಗಳಿಬ್ಬರೂ ದುಡಿದರೆ ಸಂಸಾರವನ್ನು ಸುಖವಾಗಿ ನಿಭಾಯಿಸಬಹುದು. ಆದಕಾರಣ ಇಬ್ಬರೂ ದುಡಿಯುತ್ತಿದ್ದರು.

ಕಳೆದ ಒಂದೆರಡು ವರ್ಷಗಳಿಂದ ಎಂತದೋ ಬೇಜಾರು, ಯಾವುದೋ ಭಯಂಕರ ನಿರುತ್ಸಾಹ ಅವಳನ್ನು ಮುತ್ತಿಕೊಂಡಿತ್ತು. ವಾರವಾರಕ್ಕೆ ಹೆಚ್ಚುತ್ತ ಹೋಯಿತು. ಕಲ್ಲುಗುಂಡಿನ ಹಾಗಿದ್ದೀನಿ, ನನಗೆ ಏನು ಆಗುತ್ತೆ ಎಂದರೆ ನಾಚಿಕೆಗೇಡು ಅಂತ ತನ್ನ ತಳಮಳವನ್ನು ಇತರರಿಗೆ ಅಂದರೆ ಗಂಡನಿಗೂ ಕೂಡ ತಿಳಿಸಲಿಲ್ಲ. ಆದರೆ ಈಗ ಕೆಲವು ವಾರಗಳಿಂದ ಕೆಲಸಕ್ಕೆ ರಾಜೀನಾಮೆ ಕೊಡಬೇಕು, ಪಾಠ ಕಲಿಸಲು ಸಾಧ್ಯವೇ ಇಲ್ಲ, ಎನ್ನುವ ತೀವ್ರ ಸ್ಥಿತಿಗೆ ಇಳಿದಿದ್ದಳು. ತಿಂಗಳಿಗೆ ಬರುತ್ತಿದ್ದ ನಾಲ್ಕುನೂರು ಚಿಲ್ಲರೆ ವರಮಾನವನ್ನು ಕಳೆದುಕೊಂಡರೆ ಸಂಸಾರವನ್ನು ನಡೆಸುವುದು ಹೇಗೆ ಎನ್ನುವ ವ್ಯವಹಾರಿಕ ಅರಿವು ಸ್ಪಷ್ಟವಾಗಿಯೇ ಇತ್ತು. ಚಾಕರಿಗೆ ರಾಜೀನಾಮೆ ಕೊಡುತ್ತೇನೆ ಎಂದು ಗಂಡನಿಗೆ ಒಮ್ಮೆ ಹೇಳಿದಳು. 'ಸುಸ್ತಾಗಿದ್ದರೆ ಎರಡು ದಿನ ರಜ ತೆಗೆದುಕೋ, ಅಥವಾ ಡಾಕ್ಟರ ಬಳಿಗೆ ಹೋಗಿ ಮದ್ದು ತೆಗೆದುಕೋ, ರಾಜೀನಾಮೆಯನ್ನು ಕೊಡುವಂತಹುದು ಏನಾಗಿದೆ' ಎಂದು ಅವ ಅಭಿಪ್ರಾಯ ಕೊಟ್ಟಿದ್ದ. ನ್ಯಾಯವೇ ಅನ್ನಿಸಿತು, ಭಾಮಾಳಿಗೆ. ಪರೀಕ್ಷೆಗಳ ಸಮಯ, ರಜ ತೆಗೆದುಕೊಳ್ಳುವಂತಿಲ್ಲ. ಆದಕಾರಣ ಡಾಕ್ಟರ ಸಲಹೆಯನ್ನು ಪಡೆಯಹೋಗಿದ್ದಳು.

ತುಂಬಾ ಕಾತರ ತುಂಬಿದ ಮುಖ, ಕೆಟ್ಟ ಕನಸನ್ನು ಕಂಡು ಎದ್ದವರ ಹಾಗೆ ಬೆದರಿದ್ದಳು. ಹೇಳಿದ್ದನ್ನೇ ಹೇಳುತ್ತಿದ್ದಳು. ಒಂದು ಪಂಜೆಯನ್ನೂ ಪೂರ್ಣ ಮಾಡಿ ಮುಗಿಸುತ್ತಿರಲಿಲ್ಲ. ಅರ್ಧ ಹೇಳಿದ ಕೂಡಲೇ ಬೇರೆ ಇನ್ನಾವುದನ್ನೋ ಹೇಳಲಾರಂಭಿಸುತ್ತಿದ್ದಳು. 'ನಿನಗಾಗುವುದನ್ನೆಲ್ಲಾ ವಿವರವಾಗಿ ಬರೆದುಕೊಂಡು ಬಾಮ್ಮಾ ಅದನ್ನು ಓದಿದ ಮೇಲೆ ಅಗತ್ಯವಾದ ಪರೀಕ್ಷೆಗಳನ್ನು ಮಾಡಿದರಾಯಿತು' ಎಂದರು, ಡಾಕ್ಟರು. ಮೂರು ನಾಲ್ಕು ಹಾಳೆಗಳನ್ನು ಬರೆದು ತುಂಬಿ ಭಾಮಾ ತಂದಳು. ಅವುಗಳಿಂದಲೇ ಮೊದಲ ಪ್ಯಾರಾವನ್ನು ಸಂಗ್ರಹಿಸಲಾಗಿದೆ.

ಭಾಮಾಗೆ ಡಿಪ್ರೆಷನ್ ಪ್ರಾರಂಭವಾಗಿತ್ತು. ನಿಖರವಾಗಿ ಈ ಕಾರಣಗಳಿಂದ ಅಥವಾ ಸಂಭವಿಸಿದ ಘಟನೆಗಳಿಂದ, ಅವಳಿಗೆ ಈ ಸ್ಥಿತಿಯು ಒದಗಿತು ಎಂದು ಹೇಳಬರುವಂತಿರಲಿಲ್ಲ. ಮಧ್ಯಮ ವರ್ಗದ ಸಾಮಾನ್ಯ ಸಂಸಾರ. ಮೂವತ್ತೈದು ಮೂವತ್ತಾರರ ಹೆಂಗಸು, ಲೋಕಾನುಭವವಿದ್ದ ಜಾಣ ಹೆಂಗಸು.

ಯಾವುದೋ ಒಂದು ತಪ್ಪು ಮಾಡಿದ್ದೇನೆ ಎನ್ನುವ ಅಪರಾಧ ಮನೋ