೧೯೭
ಭಾವವು ಇದೆ ಎಂಬುದು ಕಾಗದದ ಒಕ್ಕಣೆಯಿಂದ ತಿಳಿದು ಬಂದಿತು. ಅದರಿಂದಲೇ ಈ ಡಿಪ್ರೆಷನ್ ಶುರುವಾಯಿತು ಎಂದು ಹೇಳಲು ಬರುವಂತಿಲ್ಲ. ಡಿಪ್ರೆಷನ್ ಪ್ರಾರಂಭವಾದ ಮೇಲೆ, ತಳಮಳದ ಮನಸ್ಸು ಯಾವುದಾದರೂ ಒಂದು ಕುಂಟು ನೆಪವನ್ನು ಹಿಡಿದುಕೊಂಡು, ಅದರಿಂದ ನನಗೆ ಹೀಗಾಯಿತು ಎಂದು ಆತಂಕಪಡಲು ಶುರು ಮಾಡುತ್ತದೆ. ಆದಕಾರಣ ಅಪರಾಧ ಮನೋಭಾವದ ಕಾರಣಗಳನ್ನು ಪತ್ತೆ ಹಚ್ಚಲು ವೈದ್ಯರು ತೊಡಗುವುದಿಲ್ಲ.
ಭಾಮಾಳ ಮನಸ್ಸು ಮೂಲತಃ ಭದ್ರವಾಗಿದೆ, ದೃಢವೂ ಆಗಿದೆ, ಎನ್ನುವುದು ಕಾಗದಗಳ ಸಮಂಜಸೆಯಿಂದಲೇ ವ್ಯಕ್ತವಾಗಿತ್ತು. ಮನೆಯ ದೇವರಲ್ಲಿ ತುಂಬಾ ನಂಬಿಕೆಯನ್ನು ಹೊಂದಿರುವವಳು ಎನ್ನುವುದೂ ಸ್ಪಷ್ಟವಾಗಿತ್ತು. ಆಕೆಯ ಡಿಪ್ರೆಷನ್ ಎಲ್ಲಾ ತುಂಬಾ ಲಘುವಾದುದು ; ಬೇರೂರಿ ಬೆಳೆದಿಲ್ಲ ಎನ್ನುವುದೂ ಖಚಿತವಾಗಿತ್ತು.
ಆದಕಾರಣ ಡಿಪೊಷನನ್ನು ನಿವಾರಿಸಿ ಉತ್ಸಾಹವನ್ನು ಬರಿಸುವ ಔಷಧಿಗಳನ್ನು ಸಾಕಷ್ಟು ಪ್ರಮಾಣದಲ್ಲಿ ಬಳಸಲಾಯಿತು. ಹಲವಾರು ವಾರಗಳಿಂದ ಸರಿಯಾಗಿ ನಿದ್ರೆ ಮಾಡದೆ, ಸಾಕಷ್ಟು ಉಣ್ಣದೆ ದೇಹವು ಬಳಲಿರುತ್ತದೆ. ಆದಕಾರಣ ಜೀರ್ಣಕಾರಿಯಾದ ಔಷಧಿಗಳನ್ನು ಮತ್ತು ರಕ್ತವೃದ್ಧಿಯಾಗುವ ಮದ್ದುಗಳನ್ನು ಕೊಡಲಾಯಿತು.
ಹಾಗೂ ಮೂರು ನಾಲ್ಕು ದಿನಗಳು, ಮನಸ್ಸು ಎಂದರೇನು? ಅದರ ತಳಮಳಕ್ಕೆ ಕಾರಣಗಳ್ಯಾವುವು? ಅತಿ ಉತ್ಸಾಹವಾಗಲೀ ನಿರುತ್ಸಾಹವಾಗಲೀ ಹೇಗೆ ಉಂಟಾಗುತ್ತದೆ? ಇವನ್ನು ಯಾವ ರೀತಿಯಲ್ಲಿ ರೋಗಿಯು ನಿವಾರಿಸಿಕೊಳ್ಳಬಹುದು ; ಔಷಧಿಗಳು ಯಾವ ರೀತಿಯಲ್ಲಿ ರೋಗಿಗೆ ಸಹಾಯ ಮಾಡುತ್ತವೆ; ಇವನ್ನೆಲ್ಲಾ ಕೂಲಂಕಷವಾಗಿ ವಿವರಿಸಲಾಯಿತು. ಪ್ರೌಢ ಓದುವಿಕೆಯನ್ನು ಸಾಧಿಸಿದ್ದಾಕೆ ಹೇಳಿದುದನ್ನು ಕೇಳಿ ತಿಳಿದುಕೊಂಡಳು. ಅರ್ಥವಾಗದೆ ಇದ್ದುದನ್ನು ನಾಚಿಕೆ ಪಡದೆ ಕೇಳಿ ತಿಳಿದುಕೊಂಡಳು.
ಜತೆಗೆ, ಮನೆ ದೇವರು ಹಯಗ್ರೀವನಿಗೆ ಕಾಣಿಕೆಯನ್ನು ಕಟ್ಟಿಟ್ಟಳು ನಂಬಿಕೆಯಿಂದ.
ಒಂದು ವಾರದ ನಂತರ, ನಗುನಗುತ, ಮಗುವನ್ನು ಕರೆದುಕೊಂಡು ಬಂದಳು. ಶನಿಕಾಟವೆಲ್ಲಾ ಪರಿಹಾರವಾಯಿತು, ಈಗ ಎಂದಿನಂತೆ ನಿಜ ಮನುಷ್ಯಳಾಗಿದ್ದೀನಿ. ಎರಡು ಮೂರು ವರ್ಷಗಳ ಹಿಂದೆಯೇ ಚಿಕಿತ್ಸೆಗೆಂದು ಬರಬೇಕಾಗಿತ್ತು. ಔಷಧಿಗಳ ನೆರವಿಲ್ಲದೆ ಗುಣವಾಗುತ್ತಿತ್ತೇನೋ, ಆಗಲೇ ಇದನ್ನೆಲ್ಲಾ