ಮನಮಂಥನ
ಮೂಲಕ ಕಳಿಸಬೇಕು ಎಂದು ಹೇಳಿದ್ದರು. ಜವಾಬ್ದಾರಿಯ ಇಂತಹ ಕೆಲಸವನ್ನು ಮಾಚಯ್ಯ ಹಿಂದೆ ಎಷ್ಟೋ ಬಾರಿ ಅಣಿಯಾಗಿ ಮಾಡಿದ್ದ. ಆದರೆ ಈ ಸರ್ತಿ ಏನಾಯಿತೋ? ಸಂಜೆ ನಾಲ್ಕರ ವೇಳೆಗೆ ಸಾಹೇಬರು ಬಂದು, ಅಂಚೆಗೆ ಅವನ್ನು ಕಳಿಸಿದೆಯಾ ಎಂದು ಕೇಳಿದಾಗ, ಅವು ಮಾಚಯ್ಯನ ಮೇಜು ಮೇಲೇ ಇದ್ದವು. ಎಲ್ಲರೆದುರಿಗೂ ಸಾಹೇಬರು ಮಾಚಯ್ಯನನ್ನು ಸಿಕ್ಕಾಪಟ್ಟೆ ಬೈದರು. ಮಾಚಯ್ಯನಿಗೆ ತುಂಬಾ ಅವಮಾನವಾಗಿತ್ತು ; ಮುಖ ಇಳಿದುಹೋಯಿತು ; ಯಾಕೆ ಹೀಗೆ ಮಾಡಿದೆ, ಏಕೆ ಮರತೆ ಎನ್ನುವುದು ಅವನಿಗೆ ತಿಳಿದಿದ್ದರೆ, ಸಮಂಜಸವಾದ ನೆಪವನ್ನಾದರೂ ಹೂಡುತ್ತಿದ್ದ. ಈಗ ಮಂಕು ಹಿಡಿದವನಂತೆ ಸಾಹೇಬರೆದುರು ನಿಂತಿದ್ದ. ಬಾಯಿ ತೆರೆಯಲೇ ಇಲ್ಲ.
ಅಂದು ಮನೆಗೆ ಹಿಂತಿರುಗಿದಾಗ, ಕೆಲಸದಿಂದ ನನ್ನನ್ನು ತೆಗೆದುಹಾಕಬಹುದು ಎಂದು ಖಿನ್ನನಾಗಿದ್ದ.
ಮನೆಗೆ ಬಂದು ಕೊಠಡಿಯಲ್ಲಿ ಒಬ್ಬನೇ ಕುಳಿತಾಗ, ಬಿಕ್ಕಿಬಿಕ್ಕಿ ಅಳತೊಡಗಿದ.
ಅಳುವನ್ನು ತಡೆದುಕೊಳ್ಳಲು ಎಷ್ಟೆಷ್ಟೋ ಪ್ರಯತ್ನಪಟ್ಟಿದ್ದ. ಆದರೆ ಅಳುವು ಉಕ್ಕುತ್ತಲೇ
ಇತ್ತು. ಎಂಟು ಹತ್ತು ನಿಮಿಷಗಳಾದ ಮೇಲೆ, ಸ್ನೇಹಿತನು ಬಂದು ಬಾಗಿಲು
ತಟ್ಟಿದಾಗ, ಅಳುವು ನಿಂತಿತು. ಎದ್ದು ಹೋಗಿ ಬಾಗಿಲನ್ನು ತೆಗೆದ. ಕೆಂಪೇರಿದ್ದ
ಹಾಗೂ ದುಗುಡದಿಂದ ಮುದುಡಿದ್ದ ಇವನ ಮುಖವನ್ನು ಕಂಡು, 'ಏನಾಯ್ಕ,
ಮಾಚಯ್ಯ, ನಿನಗೆ' ಎಂದು ಸ್ನೇಹಿತನು ಕೇಳಿದ. ಒಳಗೆ ಬಂದು ಸ್ನೇಹಿತನೊಂದಿಗೆ
ಕೂರುವ ವೇಳೆಗೆ ತಿರುಗಿ ಬುಳುಬುಳು ಆಳಲಾರಂಭಿಸಿದ. ಸುಮಾರು ಅರ್ಧ
ಗಂಟೆಯಾದನಂತರ, ಸ್ನೇಹಿತನಿಗೆ ಮಾಚಯ್ಯನ ತಾಪತ್ರಯದ ವಿವರಗಳು
ತಿಳಿದುವು. 'ಹೆಗಲ ಮೇಲೆ ಕೋವಿ ಹಾಕಿಕೊಂಡು ಕಾಡಿನಲ್ಲಿ ಒಬ್ಬನೇ ಹುಲಿ
ಷಿಕಾರಿಗೆ ಹೋಗುವ ಗಂಡು ನೀನು; ಇದಕ್ಕೆಲ್ಲಾ ಅಳಬೇಕೇನೋ? ಅಲ್ಪ ಸ್ವಲ್ಪ
Nervous Breakdown ಆಗಿರಬೇಕು. ನಾಳೆ ಬೆಳಿಗ್ಗೆ ನನ್ನ ಜತೆಯಲ್ಲಿ ಬಾ.
ಡಾಕ್ಟರ ಸಲಹೆ ಪಡೆಯೋಣ' ಎಂದು ಸ್ನೇಹಿತ ಹೇಳಿದ. ಅವನನ್ನು ಬೀಳ್ಕೊಡುವ
ವೇಳೆಗೆ ಮಾಚಯ್ಯ ಸ್ವಲ್ಪ ಸಮಾಧಾನದಿಂದಿದ್ದ.
ಮಾರನೆಯ ದಿನ ಮನೋವೈದ್ಯರ ಬಳಿಗೆ ಮಾಚಯ್ಯನನ್ನು ಸ್ನೇಹಿತ ಕರೆದುಕೊಂಡು ಹೋದ. ಅಳುವನ್ನೂ ದುಗುಡವನ್ನೂ ಮಾಚಯ್ಯನಲ್ಲಿ ಕಂಡಮೇಲೆ, ಈ ವಿಷಯಗಳನ್ನು ತಕ್ಕಮಟ್ಟಿಗೆ ತಿಳಿದುಕೊಂಡಿದ್ದ ಸ್ನೇಹಿತ, ಮನೋವೈದ್ಯರಲ್ಲಿಗೆ ಹೋಗುವುದು ಸೂಕ್ತ ಎಂದು ನಿರ್ಧರಿಸಿದ್ದ.