ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೨೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ವಾಸ್ತವಿಕತೆಯ ಅರಿವು ಮಾಯವಾದ ಬೇನೆಗಳು

೨೦೧

ಮನೋವೈದ್ಯರು ಪರೀಕ್ಷಿಸಿದ ನಂತರ ಹೇಳಿದರು :

'ಒಂಟಿಯಾಗಿ ಕೆಲವು ತಿಂಗಳುಗಳು ಇದ್ದಾಗಲೇ ನಿಮಗೆ ಲಘು ಡಿಪ್ರೆಷನ್ ಪ್ರಾರಂಭವಾಗಿತ್ತು. ನಿಮ್ಮ ತಾಯಿಯವರಿಗೆ ಆಗಿಂದಾಗ್ಗೆ ಭೂತದ ಕಾಟ ಬಡಿಯುತ್ತಿತ್ತು ಎಂದಿರಿ. ಪ್ರಾಯಶಃ ಮನಃಸ್ವಾಸ್ಥ್ಯವು ಆಗಾಗ್ಗೆ ಕೆಡುತ್ತಿದ್ದಿರಬೇಕು. ಅಂತಹುವನ್ನು ಭೂತಚೇಷ್ಟೆ ಎಂದು ಹಿಂದಿನ ಕಾಲದವರು ಹೇಳುತ್ತಿದ್ದರು. ಡಿಪ್ರೆಷನ್ ಶುರುವಾದಾಗ, ಮನಸ್ಸು ವಿಹ್ವಲವಾಗುತ್ತದೆ. ಸ್ಮರಣಶಕ್ತಿಯು ಅಸ್ತವ್ಯಸ್ತವಾಗುತ್ತದೆ. ಒಂದೊಂದು ಬಾರಿ ತಪ್ಪು ಮಾಡಿದಾಗಲೂ, ಮುಂದೇನಪ್ಪ ಗತಿ ಎನ್ನುವ ಭಯವು ಹೆಚ್ಚಾಗುತ್ತ ಹೋಗುತ್ತದೆ. ಭಯದಿಂದ ಆತಂಕ ; ಆತಂಕದಿಂದ ಭಯ ; ಎರಡೂ ಕೂಡಿಕೊಂಡು ನಿರುತ್ಸಾಹವು ಬೆಳೆಯುತ್ತದೆ. ಎಲ್ಲರೆದುರಿಗೂ ಅವಮಾನವಾದರೆ ನಿರುತ್ಸಾಹ, ಮತ್ತು ಆತಂಕಗಳು ಅತಿಯಾಗುತ್ತವೆ.

ಆದರೆ ನಿಮ್ಮಲ್ಲಿ ಡಿಪ್ರೆಷನ್ ಬಹಳ ಲಘುಸ್ವರೂಪದ್ದು. ಖಂಡಿತವಾಗಿ ಇದನ್ನು ಕೆಲವು ವಾರಗಳಲ್ಲಿ ಗುಣಪಡಿಸಬಹುದು. 'ಇವತ್ತಿನಿಂದಲೇ ಚಿಕಿತ್ಸೆಯನ್ನು ಆರಂಭಿಸೋಣ' ಎಂದು.

'ಕೆಲಸಕ್ಕೆ ರಜ ತೆಗೆದುಕೊಂಡು, ಚಿಕಿತ್ಸೆ ಮಾಡಿಸಿಕೊಂಡರೆ ಒಳ್ಳೆಯದಲ್ಲವೆ?' ಎಂದು ಸ್ನೇಹಿತ ಕೇಳಿದ.


'ಒಬ್ಬರೇ ಮನೆಯಲ್ಲಿರುವುದಕ್ಕಿಂತ, ಕೆಲಸದ ಮೇಲಿರುವುದು ವಾಸಿ, ಅಥವಾ ಊರಿಗೆ ಹೋಗಿ ಎಲ್ಲರ ಜತೆಯಲ್ಲೂ ಮನೆಯಲ್ಲಿದ್ದುಕೊಂಡು ಚಿಕಿತ್ಸೆಯನ್ನು ಮಾಡಿಸಿಕೊಳ್ಳುತ್ತೇನೆ ಎನ್ನುವುದಾದರೆ ಹಾಗೂ ಮಾಡಬಹುದು. ಮಾಡಬೇಕಾದುದನ್ನು ವಿಶದವಾಗಿ ಬರೆದುಕೊಡುತ್ತೇನೆ” ಎಂದರು ವೈದ್ಯರು.

'ನಮ್ಮನೆ ಇರುವುದು ಹಳ್ಳಿಯೊಂದರಲ್ಲಿ, ವೈದ್ಯರ ನೆರವಿಗೆ ಆರು ಮೈಲಿ ಹೋಗಬೇಕು. ಈ ಅವಸ್ಥೆಯಲ್ಲಿ ನಾನಿರುವುದನ್ನು, ನಮ್ಮನೆಯವರು ನೋಡುವುದು ಬೇಡ. ಇಲ್ಲೇ ಇದ್ದು ಕೆಲಸಕ್ಕೆ ಹೋಗುತ್ತಾ ಚಿಕಿತ್ಸೆಯನ್ನು ಪಡೆಯುತ್ತೇನೆ' ಎಂದು ಮಾಚಯ್ಯ ಹೇಳಿದ.

ಒಂದು ವಾರದೊಳಗೆ ಮಾಚಯ್ಯ ಗೆಲುಮುಖನಾದ. 'ಮುಕ್ಕಾಲುಪಾಲು ನನ್ನ ತಳಮಳವೆಲ್ಲಾ ಹೋಯಿತು, ಸಾರ್ ! ಈಗ ಅಷ್ಟಾಗಿ ಮರೆಯುವುದಿಲ್ಲ. ಆತಂಕವೂ ಮನಸ್ಸಿನಲ್ಲಿಲ್ಲ, ಕೆಲಸ ಮಾಡುವಾಗ ಇತ್ತಿಂದೀಚೆಗೆ ಇದ್ದ, “ಯಾವ ತಪ್ಪು ಮಾಡಿಬಿಡುತ್ತೇನೋ ಎನ್ನುವ ಭಯವೂ ಮುತ್ತುವುದಿಲ್ಲ. ಹಸಿವೂ ಸರಿಯಾಗಿ ಆಗುತ್ತಿದೆ. ನಿದ್ರೆಯೂ ಬರುತ್ತಿದೆ' ಎಂದು ವರದಿ ಒಪ್ಪಿಸಿದ.