ಅಂತ ಹಾಗೆ ಮಾಡಿರಲಿಲ್ಲ. ಮನೆಯಲ್ಲಿ ಗಂಡಸರಾರೂ ಸಂಧ್ಯಾವಂದನೆಯನ್ನು ಮಾಡುತ್ತಿರಲಿಲ್ಲ. ಸ್ವಂತ ಖುಷಿಯಿಂದ ಸೀತು ಹಾಗೆ ಮಾಡಿಕೊಂಡಿದ್ದ. ಸಾಯಂಕಾಲದ ವೇಳೆಯಲ್ಲಿ ವಾಕಿಂಗ್ ಹೋದ ಅನ್ನಿ, ಒಬ್ಬನೇ ಹೋಗುತ್ತಿದ್ದ. ದೊಡ್ಡ ಮರದಡಿಯಲ್ಲಿ ಒಂಟಿಯಾಗಿ ಅರ್ಧಗಂಟೆ ಮುಕ್ಕಾಲು ಗಂಟೆ ಕೂರುತ್ತಿದ್ದ. ಹಾಗೆ ಕೂತು ಪದ್ಯ ಬರೆದ ಅಂತಲೇ ! ಉಹೂ ಸುಮ್ಮನೆ ಕುಳಿತಿರುತ್ತಿದ್ದ. ಯಾವ ಗಾಢವಾದ ಆಲೋಚನೆಯಿತ್ತೋ, ಭಗವಂತ ಒಬ್ಬ ಬಲ್ಲ. ಬೇಜಾರಿಲ್ಲದೆ ಸೀತು ಕೂತಿರುತ್ತಿದ್ದ.
ಇಂತಹ ವಿಚಿತ್ರ ವರ್ತನೆಗಳನ್ನು ಬಿಟ್ಟರೆ, ಮಿಕ್ಕಂತೆ, ಸೀತು ಚೂಟಿಯಾಗಿದ್ದ. ಮನೆಯವರ ಮೆಚ್ಚುಗೆಯನ್ನು ಗಳಿಸಿಕೊಂಡಿದ್ದ. ಮಾಸ್ತರಗಳಿಗೆ ಪ್ರಿಯಶಿಷ್ಯನಾಗಿದ್ದ. ಮಿತಭಾಷಿಯಾಗಿದ್ದರೂ ಸರಸಭಾಷಿ.
ಬೇರೆ ಊರಿನಲ್ಲಿ ಕಾಲೇಜು ಸೇರಬೇಕಾಯಿತು; ಎಸ್.ಎಸ್.ಎಲ್.ಸಿ. ಆದಮೇಲೆ. ಕಾಲೇಜು ಹಾಸ್ಟೆಲಿನಲ್ಲಿ ಸ್ಥಳವೂ ದೊರಕಿತು. ಕಾಲೇಜು ಹಾಸ್ಟೆಲಿನಲ್ಲಿದ್ದರೂ ಏಕಾಂಗಿಯಾಗಿರುವ ಪ್ರವೃತ್ತಿಯನ್ನು ಬದಲಾಯಿಸಲಿಲ್ಲ. ಅವನಿಗೆ ಸಿಕ್ಕ ರೂಂಮೇಟ್ ಆದರೋ ತುಂಬಾ ನಗು ಸರಸಿ. ಆದರೂ ಇವನನ್ನು ಒಲಿಸಿಕೊಳ್ಳುವುದಕ್ಕಾಗಲೀ, ಮಾತಿಗೆ ಎಳೆಯುವುದಕ್ಕಾಗಲೀ, ಅವನಿಗೆ ಸಾಧ್ಯವಾಗಲಿಲ್ಲ. ಹೀಗೆ ಅವ ಪ್ರಯತ್ನವನ್ನು ಮಾಡಿದಾಗ, ಸೀತು ಮುಖವನ್ನು ಸಿಂಡರಿಸಿ ಕೊಂಡಿದ್ದ. 'ಮುಟ್ಟಿದರೆ ಮುನೀ ಕಣೋ ನೀನು' ಎಂದು ಹೇಳೀ ರೂಂಮೇಟ್ ಅಲಕ್ಕಾದ.
ಎರಡನೆಯ ವರ್ಷದ ಬಿ.ಎ. ಅಲ್ಲಿ ಸೀತು ಓದುತ್ತಿದ್ದ. ಕ್ಲಾಸಿಗೆ ಹೋಗುವುದಕ್ಕೆ ಮುಂಚೆ, ತೆಗೆದುಕೊಂಡು ಹೋಗಬೇಕಾದ ಪುಸ್ತಕಗಳನ್ನು ಎತ್ತಿಟ್ಟುಕೊಳ್ಳುವಾಗ ತುಂಬಾ ನಿಧಾನಿಸಲು ಆರಂಭಿದ. ಇವತ್ತು ಕ್ಷೌರವನ್ನು ಮಾಡಿಕೊಳ್ಳಲೋ, ನಾಳಿನ ತನಕ ತಡೆಯುತ್ತದೆಯೋ ಎಂಬುದನ್ನು ನಿರ್ಧರಿಸಲು ಕಷ್ಟಪಡತೊಡಗಿದ. 'ಇಷ್ಟು ಸಣ್ಣ ವಿಷಯಕ್ಕೆಲ್ಲಾ ಯಾಕೆ ತೊಂಚಾವಂಚ ಪಡುತ್ತೀಯೋ' ಎಂದು ರೂಂಮೇಟ್ ಹೇಳಿದುದು ಯಾವ ಪ್ರಯೋಜನವನ್ನೂ ಮಾಡಲಿಲ್ಲ.
ಅಂತರ ವಿಶ್ವವಿದ್ಯಾಲಯಗಳ ಟೆನ್ನಿಸ್ ಚಾಂಪಿಯನ್‌ಷಿಪ್ಪನ್ನು ರೂಂಮೇಟ್ ಗಳಿಸಿದ. ಕಾಲೇಜಿನ ವಿದ್ಯಾರ್ಥಿಗಳು ಅದೆಷ್ಟೋ ಸಂಭ್ರಮಪಟ್ಟರು. ಹಾಸ್ಟೆಲಿನ ವಿದ್ಯಾರ್ಥಿಗಳನಕ ಕುಣಿದು ಕುಪ್ಪಳಿಸಿ ಹಬ್ಬ ಮಾಡಿದರು. ಆದರೆ ಸ್ವಂತ ರೂಂಮೇಟ್ ಆಗಿದ್ದ ಸೀತು ಯಾವ ಸಡಗರವನ್ನಾಗಲೀ, ಸಂತೋಷವನ್ನಾಗಲೀ ವ್ಯಕ್ತಪಡಿಸಲಿಲ್ಲ. ನಿರ್ಲಿಪ್ತನಂತೆ ನಡೆದುಕೊಂಡ.