ನೋಡುತ್ತವೆ ; ಈ ಕಾಲದ ಕಾಲೇಜು ಹುಡುಗರು; ಮೀಸೆ ಬಂದ ವಯಸ್ಸು; ಏನೇನು ಕೆಟ್ಟ ಅಭ್ಯಾಸ ಮಾಡಿಕೊಂಡಿದ್ದಾನೋ? ದೇಹಾರೋಗ್ಯವನ್ನು ಕೆಟ್ಟ ಕೆಟ್ಟದಾಗಿ ಕೆಡಿಸಿಕೊಂಡಿದ್ದಾನೋ ಏನೋ' ಎಂದು ತಂದೆಯು ರೇಗಿ ನುಡಿದರು.
ಇವನ ವಿಚಿತ್ರ ವರ್ತನೆ, ಸರಿಹೋದರೆ, ಇವನ ಮದುವೆಯನ್ನು ನಂಜನ ಗೂಡಿನಲ್ಲಿ ನಂಜುಂಡೇಶ್ವರನ ಸನ್ನಿಧಿಯಲ್ಲಿ ಮಾಡುತ್ತೇವೆ ಎಂದು ತಾಯಿ ಮುಡುಪು ಕಟ್ಟಿಟ್ಟಳು. ಇದೊಂದೇ ಮುಂಜಾಗ್ರತಾ ಹಾಗೂ ಚಿಕಿತ್ಸಾ ಕ್ರಮ, ಅವರು ಕೈಗೊಂಡುದು.
ಊರಿನ ದೊಡ್ಡರಸ್ತೆಯ ತುದಿಯಲ್ಲಿ ಎಳನೀರನ್ನು ಮಾರಲು ಒಕ್ಕಲು ಮಗ ಕುಳಿತಿದ್ದ. ಅಲ್ಲಿ ಜನರ ಓಡಾಟವು ಹೆಚ್ಚು ಮೂರು ದಿಕ್ಕುಗಳಲ್ಲಿರುವ ಮೂರು ಊರುಗಳಿಗೆ ಹೋಗುವ ದಾರಿಗಳು ಅಲ್ಲಿಂದಲೇ ಕವಲೊಡೆಯುತ್ತಿದ್ದುವು. ಮಧ್ಯಾಹ್ನ ಹನ್ನೊಂದರ ಸಮಯ, ಅದರ ಬಳಿ ಸೀತು ನಡೆದು ಹೋಗುತ್ತಿದ್ದ. ಒಂಟಿಯಾಗಿದ್ದ. 'ಎಳನೀರು ಬೇಕಾ ಸೋಮೀ' ಎಂದು ಒಕ್ಕಲು ಮಗ ಕೇಳಿದ. 'ನನ್ನ ಯಾಕೋ ಕೇಳಿ : ನಿನಗೇನು ಕೊಬ್ಬೋ' ಎಂದು ಸೀತು ವಿನಾಕಾರಣ ರೇಗಿದ. ಅಷ್ಟೇ ಅಲ್ಲ. ಒಕ್ಕಲು ಮಗನನ್ನು ಹೊಡೆಯಹೋದ. ಹತ್ತಿರದಲ್ಲಿ ಎಳ ನೀರನ್ನು ಕೊಚ್ಚುವ ಮಚ್ಚಿತ್ತು. ಅದನ್ನು ತೆಗೆದುಕೊಂಡು ಹೊಡೆಯಹೋದ. ಒಕ್ಕಲು ಮಗ ಸರಂತ ಮರದ ಹಿಂದಕ್ಕೆ ನುಣುಚಿಕೊಂಡ. ಸೀತು ಹೊಡೆದ ಏಟು ಮರಕ್ಕೆ ಬಿತ್ತು. ಹಾದಿಯಲ್ಲಿ ಹೋಗುತ್ತಿದ್ದ ಗಾಡಿಯವರೂ ಇತರರೂ ಅಲ್ಲಿ ಗುಂಪು ನೆರೆದರು, ಒಕ್ಕಲು ಮಗನಿಗೆ ನೆರವಾಗಿ, ಸೀತುವನ್ನು ಹಿಡಿಯಹೋದರು. ಅವನಿನ್ನೂ ಹೊಡೆದಾಡುವುದಕ್ಕೆ ಹಾತೊರೆಯುತ್ತಿದ್ದ. ಎಲ್ಲರೂ ಒಟ್ಟುಗೂಡಿ ಸೀತುವನ್ನು ಹಿಡಿದು ಕೈಕಾಲು ಕಟ್ಟಿ ಹಾಕಿದರು. ನಾಲ್ಕು ಬಿಗಿದರು. 'ಇವನಿಗೆಲ್ಲೋ ಹುಚ್ಚು ಹಿಡಿದಿದೆ. ಯಾರ ಮನೆಯವನೋ. ಇಂತಹವರನ್ನೆಲ್ಲಾ ಆಸ್ಪತ್ರೆಗೆ ಸೇರಿಸದೆ, ಹೀಗೆ ಬೇಕಾಬಿಟ್ಟಿ ಬಿಟ್ಟರೆ, ಯಾರಿಗಾದರೂ ಅಪಾಯ ಆಗೇ ಆಗುತ್ತೆ' ಎಂದು ಮಂದಿ ಮಾತನಾಡಿಕೊಂಡರು. ಈ ಗಲಾಟೆಯಲ್ಲಿ ಸೀತುವಿಗೆ ಆಗಿದ್ದ ಪೆಟ್ಟು ಮತ್ತು ಗಾಯಗಳನ್ನು ಯಾರೂ ಗಮನಿಸಲೇ ಇಲ್ಲ.
ಅದೇ ರಸ್ತೆಯಲ್ಲಿ ಆ ವೇಳೆಗೆ ಸೀತುವಿನ ತಂದೆಯು ಕಚೇರಿಗೆ ಹೋಗುತ್ತಿದ್ದರು. ಜನ ಕೂಡಿದ್ದನ್ನು ಕಂಡು ಏನಾಗಿದೆಯೋ ಎಂದು ನೋಡಲು ಅಲ್ಲಿಗೆ ಹೋದರು, ಸೀತುವನ್ನು ಕಂಡರು. ಅವನ ಅವಸ್ಥೆಯನ್ನು ಕಂಡು ಅವರ ಕರುಳು ಹಿಂಡಿದಂತಾಯಿತು. ಪರಿಚಯಸ್ಥರ ನೆರವಿನಿಂದ ರೇಗಾಡುತ್ತಿದ್ದ