ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೨೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೨೦೮
ಮನಮಂಥನ

ಮಗನನ್ನು ನೋಡಲು ತಿಂಗಳೊಪ್ಪತ್ತು ಆದ ನಂತರ, ತಂದೆಯು ಆಸ್ಪತ್ರೆಗೆ ಹೋದಾಗ, ವೈದ್ಯರು ಅವರೊಂದಿಗೆ ಕೂತು ಬೇನೆಯ ಸ್ವರೂಪವನ್ನು ವಿವರಿಸಿದರು.

'ನಿಮ್ಮ ಹುಡುಗನ ಪ್ರಕೃತಿಯು ಒಂಟಿತನವನ್ನು ಬಯಸುವಂತಹುದು. ಬಾಲ್ಯದಲ್ಲಿ ಸಮವಯಸ್ಕರೊಂದಿಗೆ ನಲಿದಾಡುವ ಸ್ವಾಭಾವಿಕ ಪ್ರವೃತ್ತಿಯೂ ಅವನಲ್ಲಿ ಕಡಿಮೆಯಾಗಿತ್ತು. ಮನೆಯ ಯಜಮಾನರು, ನೀವು, ಶಿಸ್ತು ಶಿಕ್ಷೆ ಇವುಗಳಿಂದಲೇ ಹುಡುಗರು ಬೆಳೆದು ಬಾಳಲು ಸಮರ್ಥರಾಗುವುದು ಎಂದು ನಂಬಿದ್ದೀರಿ. ಮನೆಯವರೆಲ್ಲರೂ ನಿಮ್ಮನ್ನು ಕಂಡರೆ ಭಯಪಡುತ್ತಾರೆ. ಸೀತುವು ಕೂಡ ಹೆದರಿಕೆಯಿಂದಲೇ ನಿಮ್ಮನ್ನು ನೋಡುತ್ತಿದ್ದ, ಬಾಲ್ಯದಿಂದಲೂ, ನಿಮ್ಮ ಮನೆಯಾಕೆಯು ಹಳೆಯ ಕಾಲದ ಸಾಂಪ್ರದಾಯಸ್ಥರು. ಓದುಬರಹಗಳಲ್ಲಿ ಆಕೆಗೆ ಅಭ್ಯಾಸವಿಲ್ಲ. ಆಕೆಯೂ ನೀವೂ ಮಾತಿಗೆ ಮಾತು ಆಡಿ ವಿರಸವಾದಾಗ, ಸೀತುವು ಹೆದರಿ ಹೆದರಿ ಮುದುಡಿಕೊಳ್ಳುತ್ತಿದ್ದ. ಹಾಗಾದಾಗಲೆ ಅವ, ಹೆದರಿಸುವ ಹೊರ ಪರಿಸ್ಥಿತಿಯನ್ನು ಮರೆಯಲು, ತನ್ನ ಮನಸ್ಸಿನೊಳಗೆ ತಾನೇ ಕಲ್ಪಿಸಿಕೊಳ್ಳಬಹುದಾದ, ಹೆದರಿಕೆಯು ಇರದ, ಊಹಾಲೋಕದಲ್ಲಿ ಮಗ್ನನಾಗತೊಡಗುತ್ತಿದ್ದ. ಒಂಟಿತನವನ್ನು ಬಯಸುವ ಪ್ರವೃತ್ತಿಯೂ ಇತ್ತು. ಹೀಗಾಗಿ ತನ್ನ ಸೃಷ್ಟಿಯಾದ ಮನಸ್ಸಿನ ಊಹಾಪ್ರಪಂಚದಲ್ಲಿ ಹೆಚ್ಚು ಹೆಚ್ಚು ಕಾಲ ಕಳೆಯುವುದನ್ನು ರೂಢಿಮಾಡಿಕೊಂಡಿದ್ದ. ಮನಸ್ಸಿನೊಳಗಿನ ಪ್ರಪಂಚ, ಹೊರಗಿನ ಪ್ರಪಂಚ, ಹೀಗೆ ಎರಡು ಪ್ರಪಂಚಗಳಲ್ಲಿ ಅವನು ಜೀವಿಸುತ್ತಿದ್ದ. ಹೈಸ್ಕೂಲಿನಲ್ಲಿ ಓದು ಮುಗಿಸುವ ತನಕ, ಮನೆಯಲ್ಲೇ ಇದ್ದುದರಿಂದ ಕೂಡ, ಈ ಎರಡೂ ಪ್ರಪಂಚಗಳಲ್ಲಿ ಅವ ನೆಮ್ಮದಿಯಿಂದ ಇರಲು ಸಾಧ್ಯವಾಗಿತ್ತು.

ಕಾಲೇಜಿಗೆ ಸೇರಿದಾಗ, ಮನೆಯನ್ನು ಬಿಟ್ಟು, ಹಾಸ್ಟೆಲಿನಲ್ಲಿ ವಾಸಿಸಬೇಕಾಯಿತು. ಮನೆಯಲ್ಲಿದ್ದ ರಕ್ಷಣೆಯು ತಪ್ಪಿತು ; ಇನ್ನೆಲ್ಲ ಜವಾಬ್ದಾರಿಯೂ ನನ್ನದು ಎನ್ನುವುದು ಅವನ ಅನುಭವಕ್ಕೆ ಕಠಿಣವಾಗಿತ್ತು. ಜತೆಗೆ ಪೌಗಂಡ ವಯಸ್ಸು, ದೇಹದ ಅಗತ್ಯಗಳ ಆಸೆ ಆಕಾಂಕ್ಷೆಗಳು, ಅವನ ಅರಿವಿಗೆ ಕಾಣಿಸಿಕೊಳ್ಳದೆಯೇ, ಅವ್ಯಕ್ತವಾಗಿ ಒತ್ತಡವೀಯಲಾರಂಭಿಸಿದ್ದುವು. ಅಂತಹ ಅಪೇಕ್ಷೆಗಳನ್ನು, ID Compulsions ಎನ್ನುತ್ತಾರೆ. ಇವೆಲ್ಲವನ್ನೂ ಹೊರಪ್ರಪಂಚದ ಬಾಳಿನಿಂದ ಈಡೇರಿಸಿಕೊಳ್ಳಬೇಕು. ನಾಚಿಕೆ ಮತ್ತು ಸಂಕೋಚದ ಪ್ರವೃತ್ತಿಯಿದ್ದ ಸೀತುವಿಗೆ ಹೊರಪ್ರಪಂಚದಲ್ಲಿ ಮೆರೆದಾಡಲು ಸಾಧ್ಯವಿರಲಿಲ್ಲ. ಒಳಮನಸ್ಸಿನ ಊಹಾಲೋಕದಲ್ಲಿ ಅವನ್ನೆಲ್ಲಾ ಸಾಂತ್ವನಗೊಳಿಸಬೇಕಾಯಿತು. ಈ ಜಂಝಾಟದಲ್ಲಿ,