ನನಗೆ ಸಂಶಯವಿರುತ್ತಿದೆ. ಹೀಗಂದೆ ಎಂದು ಏನೂ ತಿಳಿದುಕೊಳ್ಳಬೇಡಿ. ನಿಮ್ಮಲ್ಲಿ ಪೂರ್ಣ ನಂಬಿಕೆಯು ನನಗಿದೆ' ಎಂದರು.
ಸ್ಪಷ್ಟವಾಗಿ ಹೀಗೆ ತಂದೆಯು ನುಡಿದುದರಿಂದ ವೈದ್ಯರಿಗೆ ಸಂತೋಷವೇ ಆಯಿತು. ತಾವು ಹೇಳಿದುದು ಅರ್ಥವಾಗಿದೆ. ನ್ಯಾಯವೆಂದು ಕಂಡುಬಂದ ಸಂದೇಹಗಳನ್ನು ಅವ ಹೇಳಿಕೊಳ್ಳುತ್ತಿದ್ದಾನೆ ಎನ್ನುವುದೂ ಗೊತ್ತಾಯಿತು. ಅವರಂದರು ; 'ನೀವು ಹೇಳಿದ್ದೆಲ್ಲಾ ದಿಟವೇ, ರಾಯರೇ ! ಸೀತುವಿನ ಮನಸ್ಸು ಜಾಣತನದ ಕಾರ್ಯಗಳನ್ನು ಮಾಡುವ ಸಾಮರ್ಥ್ಯವನ್ನು ಮೊದಲೂ ಪಡೆದಿತ್ತು. ಈಗಲೂ ಪಡೆದಿದೆ. ರೂಢಿಸಿ ಕಲಿತುಕೊಂಡ ಕೈ ಚಳಕವಾಗಲೀ, ಜ್ಞಾಪಕ ಶಕ್ತಿಯಾಗಲೀ ಅಚ್ಚಳಿಯದೇ ಉಳಿದುಕೊಂಡಿದೆ.
ಆದರೆ ಹೊರಪ್ರಪಂಚದ ನಡವಳಿಕೆಗಳಲ್ಲಿ, ಯಾವುದಾದರೂ ನಿರ್ಧಾರ ಮಾಡಿ ಕಾರ್ಯ ನಡೆಸಬೇಕು. ಇದನ್ನು ಸಾಧಿಸುವ ಮನಸ್ಸಿನ ಭಾಗವು, ಒಳ ಮತ್ತು ಹೊರಪ್ರಪಂಚಗಳ ಮಧ್ಯೆ ಸಾಮರಸ್ಯವಿದ್ದರೆ ಮಾತ್ರ ಯಶಸ್ವಿಯಾಗಿ ಕೆಲಸವನ್ನು ಮಾಡಬಲ್ಲದು, ಅಲ್ಲೇ ಬಿರುಕುಂಟಾಗಿತ್ತು. ಹಾಗಾಗಿ ಯಾವ ನಿರ್ಧಾರವನ್ನು ಮಾಡಬೇಕಾದರೂ, ಅವನು ತೊಳಲಾಡುವಂತಾಯಿತು. ಹೀಗಾಗಿ ಅವ ಮಂದ ಬುದ್ಧಿಯವನಂತೆ ಕೆಲವೊಮ್ಮೆ ಕಾಣಿಸುತ್ತಿದ್ದ. ಆದರೆ ನಿಜವಾಗಲೂ ಚೂಟಿತನವು ಕಳೆದುಹೋಗಿರಲಿಲ್ಲ.
ಇದೇ ಕಾರಣದಿಂದ ಭಾವನಾ ಪ್ರದರ್ಶನದಲ್ಲೂ ಅವನು ವಿಚಿತ್ರವಾಗಿದ್ದ.
ಹೊರಪ್ರಪಂಚದ ಅರಿವು ಆದಾಗ, ಅದಕ್ಕೆ ತಕ್ಕ ಪ್ರತಿಕ್ರಿಯೆಯನ್ನು ಭಾವನೆಗಳಲ್ಲಿ
ಹೂಡಲೇಬೇಕು. ಮನಸ್ಸಿನ ಆ ಭಾಗವು ಒಡೆದು ಹೋಳಾದುದರಿಂದ, ನಿರೀಕ್ಷಿತ
ಪ್ರತಿಕ್ರಿಯೆಯನ್ನು ಅವ ತೋರಿಸಲು ಆಗುತ್ತಿರಲಿಲ್ಲ. ಆದಕಾರಣ, Callous,
ನಿರ್ಲಿಪ್ತನಂತೆ, ನಡೆದುಕೊಳ್ಳುತ್ತಿದ್ದ.
ಈಗ ಎಲ್ಲವೂ ಅರ್ಥವಾಯಿತೇ? ಜಾಣತನವೂ ಸ್ಮರಣಶಕ್ತಿಯೂ ಇದ್ದು,
ಸ್ಕೀಜೋಫ್ರೆನಿಯಾದ ಮುನ್ಸೂಚನೆಗಳೂ ಕಾಣಬರುತ್ತವೆ.
'ನಾಲ್ಕು ವಾರಗಳ ಚಿಕಿತ್ಸೆಯಿಂದ ಸೀತುವಿನಲ್ಲಿ ತುಂಬಾ ಗುಣ ಉಂಟಾಗಿದೆ. ಇಷ್ಟು ಬೇಗ ಇಷ್ಟರಮಟ್ಟಿಗೆ ಗುಣ ಹೊಂದುತ್ತಾನೆ ಎಂದು ನಾನು ನಿರೀಕ್ಷಿಸಿರಲಿಲ್ಲ. ಇನ್ನೊಂದು ಎರಡು ವಾರಗಳಲ್ಲಿ ಮನೆಗೆ ಹಿಂತಿರುಗಿ ಕಳಿಸುತ್ತೇನೆ, ಕಾಲೇಜು ವಿದ್ಯಾಭ್ಯಾಸವನ್ನು ಮುಂದುವರಿಸಲಿ. ಎಲ್ಲರಂತೆ ಅವನೂ ಬಾಳಲು ಸಾಧ್ಯ ; ಸ್ವಲ್ಪ ಎಚ್ಚರಿಕೆಯನ್ನು ವಹಿಸಿದರೆ ಸಾಕು.'
ಎಂದು ವೈದ್ಯರು ಹೇಳಿದರು. ಸೀತುವನ್ನು ವಾರ್ಡಿನಲ್ಲಿ ನೋಡಹೋದರು,