ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೨೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೨೧೬

ಮನಮಂಥನ

ಉತ್ಸಾಹವಿರಲಿಲ್ಲ.

“ಅವಳಿಗೂ ಷಾಕ್‌ ಟೀಟ್‌ಮೆಂಟ್‌ ಕೊಡಿಸಬೇಕು ಎಂದು ನೀವು ಹೇಳಿದರೆ, ಮನೋವೈದ್ಯರ ಬಳಿಗೆ ಅಗತ್ಯವಾಗಿ ಕರೆದುಕೊಂಡು ಹೋಗುತ್ತೀನಿ' ಎಂದ.

ಸಾವಂದಪ್ಪನ ಬಾಳಿನಲ್ಲಿ ಇಷ್ಟೆಲ್ಲಾ ಕಷ್ಟ ದುಃಖಗಳು ಸಂಭವಿಸಿವೆ ಎಂದು ಯಾರೂ ಹೇಳುವಂತಿರಲಿಲ್ಲ. ನಗುನಗುತ್ತಲೇ ಇರುತ್ತಿದ್ದ. ತನ್ನ ವ್ಯಾಪಾರವನ್ನು ಮಾಡಿಕೊಂಡೇ ಇದ್ದ, ಎಂದರೆ ಏನು ? ಇವನೇನು ಸ್ಥಿತಪ್ರಜ್ಞನೆ ? ಹೆಂಡತಿಗೆ ಮೊದಲಿನಿಂದಲೂ ಸ್ಕಿಜೋಫ್ರೆನಿಯಾ ಆದರೆ ಪ್ರಾಯದ ಬಾಳಿನಲ್ಲಿ ಹೆಂಡತಿಯ ಆ ಬೇನೆಯು ಗಂಡನಿಗೆ ಪತ್ತೆಯಾಗಲೇ ಇಲ್ಲ. ಹೆಂಗಸರ ನಡವಳಿಕೆಯಲ್ಲಿ ಇವೆಲ್ಲಾ ಸಾಮಾನ್ಯ ಎಂದುಕೊಂಡಿದ್ದ. ಮಕ್ಕಳಾದ ಮೇಲೆ, ಮಾನಸಿಕ ಆಸ್ಪತ್ರೆಗೆ ಹೋಗುವುದು ಅನಿವಾರ್ಯವಾದಾಗ, ನನ್ನ ಹೆಂಡತಿಗೆ ಮನೋರೋಗವಿದೆ, ಎಂದು ಅವನಿಗೆ ತಿಳಿಯಬಂತು. ಆದರೆ ಆ ವೇಳೆಗೆ ಅವ ಒಗ್ಗಿ ಹೋಗಿದ್ದ ಆ ವಿಚಿತ್ರ ನಡವಳಿಕೆಗಳಿಗೆ. ವ್ಯಾಪಾರಸ್ಥ ; ಹೊರ ಊರುಗಳಿಗೆ ವಾರಕ್ಕೆ ನಾಲೈದು ದಿನಗಳು ಹೋಗಿ ಬರಬೇಕಾಗಿತ್ತು. ಕಾರಣ ಮನೆಯ ಕಾರ್ಪಣ್ಯಗಳನ್ನು ಅಷ್ಟಾಗಿ ಹಚ್ಚಿಕೊಳ್ಳಬೇಕಾಗಿರಲಿಲ್ಲ. ಅವನೇ ಅಂದ 'ಬೇಕಾದರೆ, ಡಾಕ್ಟರೇ, ನನ್ನ ದೊಡ್ಡಕ್ಕನನ್ನು ಕರೆದುಕೊಂಡು ಬತ್ತೀನಿ. ಸಕ್ಕೂಬಾಯಿ ಮನೆಯಲ್ಲಿ ಹೇಗೆ ಆಡುತ್ತಾಳೆ, ನಡೆದು ಕೊಳ್ಳುತ್ತಾಳೆ, ಎಲ್ಲವನ್ನೂ ಆಕೆ ಚೆನ್ನಾಗಿ ಬಲ್ಲಳು” ಎಂದ. ಹಾಗೇ ಮಾಡಪ್ಪ ಎಂದೆ. ತಾತ್ಕಾಲಿಕವಾಗಿ ಉಪಶಮನದ ಚಿಕಿತ್ಸೆಯನ್ನು ನಡೆಸಿದೆ.

ಸಾವಂದಪ್ಪನ ದೊಡ್ಡ ಅಕ್ಕ ಬಂದಳು. ಸುಮಾರು ಅರವತ್ತರ ಪ್ರಾಯ. ಭಾರೀ ಬಂಗಾರದ ಬಳೆಗಳನ್ನು ಹಾಕಿಕೊಂಡಿದ್ದಳು. ಶ್ರೀಮಂತರಂತೆ ಕಾಣಿಸುತ್ತಿದ್ದಳು. ಸಕ್ಕೂಬಾಯಿಯ ವಿವರಗಳನ್ನು ಕೇಳಿದೆ. ಅದನ್ನು ಹೇಳುಕ್ಕೇ ಬಂದೆ. ಸಾವಂದಪ್ಪ ಹೇಳಿದ, ನೀವು ಮಾತಾಡಬೇಕು ಅಂದಿರಂತೆ. ಹೇಳೋದೇನಿದೆ, ಡಾಕ್ಟರೇ ! ಇವಳಮ್ಮನಿಗೂ ಹುಚ್ಚು, ಇವಳಿಗೂ ಹುಚ್ಚು, ಇವಳ ಅಣ್ಣನಿಗೂ ಹುಚ್ಚು, ಹುಚ್ಚಾಸ್ಪತ್ರೆಗೆ ಸೇರಿಸಪ್ಪಾ ! ಇನ್ನು ಬೇರೆ ಕಾಯಿಲೆ ಯಾವುದೂ ಇಲ್ಲ ಅಂತ ಹೇಳಿದೆ. ನನ್ನ ತಮ್ಮನಿಗೆ ಏನೋ ಆಸೆ. ಮಗಳಿಗೆ ಗಂಟಲು ನೋವು, ಅದು ಸರಿಹೋದರೆ, ಚೆನ್ನಾಗುತ್ತಾಳೆ ಅಂತ' ಎಂದಳು.


ತಮ್ಮನ ಹೆಂಡತಿ, ಮಕ್ಕಳ ಮೇಲೆ, ದೊಡ್ಡ ಅತ್ತಿಗೆಗೆ ಅಷ್ಟೇನೂ ಆದರವು ಇರಬೇಕಾಗಿಲ್ಲ ಎನ್ನುವುದು ಎಲ್ಲರಿಗೂ ತಿಳಿದ ವಿಷಯ. ಕಾರಣ, ಆಕೆಯು ಹೇಳಿದ್ದನ್ನು ಸಮರ್ಥಪಡಿಸಲು, ಮಿಕ್ಕ ಪ್ರಶ್ನೆಗಳನ್ನು ಎಳ್ಳಂಬಳಸೆಯಾಗಿ ಕೇಳಿದೆ.