ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೨೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಸ್ಕಿಜೋಫೊನಿಯಾಗಳು

೨೧೭

ಕೆಲವು ದಿನಗಳು, ಎರಡು ತಾಸು, ಸಕ್ಕೂಬಾಯಿಯು ಕೆಟ್ಟ ಕೆಟ್ಟದಾಗಿ ಅರಚಿಕೊಳ್ಳುತ್ತಿದ್ದಳೆಂದು ತಿಳಿದುಬಂದಿತು. ತನ್ನ ಪಾಡಿಗೆ ತಾನು ಏನೇನೋ ಅಸಂಬದ್ಧವಾಗಿ ಮಾತನಾಡುವುದು, ಹೀಗೆಲ್ಲಾ ಆಗಿಂದಾಗ್ಗೆ ಮಾಡುತ್ತಿದ್ದಳಂತೆ.

'ಏನು ಮಾಡೋದು, ಡಾಕ್ಟರೇ? ಒಬ್ಬಳೇ ಮಗಳೂ ನನಗೆ, ಅವಳನ್ನು ನನ್ನ ತಮ್ಮನಿಗೆ ಕೊಟ್ಟು ಮದುವೆ ಮಾಡಿದರೆ, ಮನೆ ಆಸ್ತಿ ಮನೆಯಲ್ಲೇ ಉಳಿಯುತ್ತ ಅಂತ ಅಂದುಕೊಂಡೆ. ಮಗಳು ಹಾಗಾದಳು ಅಂದರೆ, ಅವಳ ಮಕ್ಕಳೂ ಹೀಗಾಗ ಬೇಕೇ, ಎಲ್ಲಾ ನಮ್ಮ ಖರ್ಮ'

ಎಂದು ಕೊನೆಗೆ ಹೇಳಿದಳು.

ಸ್ಕಿಜೋಫೊನಿಯಾ ಪ್ರವೃತ್ತಿ ಇದ್ದವರಲ್ಲಿ, ತಮ್ಮ ತಮ್ಮಲ್ಲೇ ಮದುವೆ ಮಾಡಿದರೆ, ಅಂತಹ ಪ್ರವೃತ್ತಿಯು ಮಕ್ಕಳಲ್ಲಿ ಹೆಚ್ಚಾಗಿ ಕಾಣಬರುತ್ತದೆ. ಮದುವೆಯನ್ನು ಮಾಡಬೇಕಾದಾಗ, ಈ ವಿಷಯವನ್ನು ಜನರು ನೆನಪಿನಲ್ಲಿಟ್ಟುಕೊಳ್ಳ ಬೇಕು. ಸಂಶಯವು ಉಂಟಾದರೆ, ಮನೋವೈದ್ಯರ ಸಲಹೆಯನ್ನು ಪಡೆಯಬೇಕು. ಸಂಸಾರ ಗುಟ್ಟು ಎಂದು ಪೆಚ್ಚುಪೆಚ್ಚಾಗಿ ಮುಚ್ಚಿಟ್ಟುಕೊಂಡರೆ ಜೀವಾವಧಿ ನರಳಬೇಕಾಗಬಹುದು. ಸಂಸಾರ ಗುಟ್ಟು ಎಂದು ಗಾದೆಯನ್ನು ಕಟ್ಟಿದ ಅನುಭಾವಿಗಳು ರೋಗ ರಟ್ಟು ಎಂದೂ ಹೇಳಿದರು. ಜೋಪೊನಿಯಾ ಒಂದು ರೋಗ, ಅದನ್ನು ರಟ್ಟು ಮಾಡಬೇಕು, ಎಂದರೆ ಡಂಗೂರ ಸಾರಬೇಕು ಅಂತಲ್ಲ. ಮನೋವೈದ್ಯರ ಬಳಿಗೆ ಹೋಗಿ, ಇದ್ದುದನ್ನು ಮರೆಮಾಚದೆ ಹೇಳಬೇಕು. ಆಗ ಬೇನೆಯ ದುಷ್ಪರಿಣಾಮಗಳನ್ನು ಸಾಕಷ್ಟು ಹತೋಟಿಯಲ್ಲಿಡಬಹುದು. ಸಂಪೂರ್ಣವಾಗಿ ವಾಸಿ ಮಾಡುತ್ತೇವೆ. ಎಂದು ಮನೋವೈದ್ಯರು ಹೇಳುವುದಿಲ್ಲ. ಆದರೂ ಸಾಕಷ್ಟು ನೆಮ್ಮದಿಯಿಂದ ಬಾಳನ್ನು ಸಾಗಿಸುವಂತೆ ಮಾಡಲು ಸಾಧ್ಯ.

ರಘುಪತಿಯ ರಜ

'ಕೆಲಸಕ್ಕೆ ಸೇರಿ, ಬಹಳ ವರ್ಷಗಳೂ ಕೆಲಸಕ್ಕೆ ಸರಿಯಾಗಿ ಹೋಗುತ್ತಿದ್ದೆ. ನಂತರ ಒಂದೊಂದು ದಿನ ರಜ ಹಾಕುತ್ತಿದ್ದೆ. ಬರಬರುತ್ತಾ ಎರಡು ದಿನಗಳು ನಂತರ ಮೂರು ದಿನ ರಜ ಹಾಕುವುದು ಪ್ರಾರಂಭವಾಯಿತು. ಬೆಳಗ್ಗೆ ಏಳುವುದಕ್ಕೆ ಮುಜುಗರವಾಗುತ್ತಿತ್ತು, ಅಷ್ಟೆ.

ನಂತರ ಮದುವೆಯಾಯಿತು. ಮದುವೆಯಾದ ಮೇಲೆ ಹೆಂಡತಿಯೊಬ್ಬಳು ಜತೆಗೆ ಬರುತ್ತಾಳೆ. ಹೇಗೆ ನೋಡಿಕೊಳ್ಳುವುದು ಎಂಬ ಭಯ ಕಾಡುತ್ತಿತ್ತು.