ಮನಮಂಥನ
ಪ್ರಯೋಜನವಾಗುತ್ತದೆಯೋ, ಅಷ್ಟೂ ಸುಖವು ತಾಯ್ತಂದೆಯರಿಗೂ ದೊರಕುತ್ತದೆ. ಸೋದರ ಸೋದರಿಯರ ಪ್ರೇಮವೂ ಅವರುಗಳೆಲ್ಲರ ಬಾಳಿಗೆ ಹಿತಕೊಡುತ್ತವೆ. ಗಂಡನ ಕಷ್ಟಕ್ಕೆ ಹೆಂಡತಿಯು ಅಯ್ಯೋ ಎಂದರೆ ; ಗಂಡನಿಗಾದ ಅವಮಾನವು ತನ್ನದು ಎಂದು ನಡೆದುಕೊಂಡರೆ ; ಗಂಡ ಹೆಂಡರ ಪ್ರೇಮವೂ ಬಲಿಯುತ್ತದೆ. ಸಂಸಾರವೂ ಸುಖಮಯವಾಗುತ್ತದೆ. ಸಮಾಜದಲ್ಲಿ ಏನು ಅನ್ಯಾಯವಾದರೂ, ಮನೆಗೆ ಬಂದಾಗ ಹೆಂಡತಿಯ ನೆರವು ಮತ್ತು ಸಹಾನುಭೂತಿಯು ದೊರಕುತ್ತದೆ ಎಂದು ಗಂಡಸು ಆಸೆಪಡುತ್ತಾನೆ. ಹೆಂಡತಿಯೂ ಹಾಗೆಯೇ ! ಒಬ್ಬರಿಗೊಬ್ಬರು ನೆರವಾದರೆ ಇಬ್ಬರಿಗೂ ಸುಖ, ಸಂಸಾರವು ಚೆಂದ. ದೈಹಿಕ ಸಂಬಂಧವಿಲ್ಲದಿದ್ದರೂ, ರಕ್ತ ಸಂಬಂಧವಿರದಿದ್ದರೂ ; ಮಾನವರ ನಡುವೆ ಆತ್ಮೀಯತೆಯು ಬೆಳೆದಾಗ, ಒಲವೂ ಮೂಡುತ್ತದೆ. ಪವಿತ್ರ ಸ್ನೇಹದ ತಳಹದಿಯೇ ಇದು. ಇವೆಲ್ಲಾ ನಿದರ್ಶನಗಳಲ್ಲಿಯೂ, ಬಾಳಿನಲ್ಲಿ ಹಿತವನ್ನು ಪಡೆಯಬೇಕಾದರೆ, ತೃಪ್ತಿಯನ್ನು ಹೊಂದಬೇಕಾದರೆ ಭಾವನೆಗಳು ಅತಿ ಮುಖ್ಯವಾದ ಪಾತ್ರವನ್ನು ವಹಿಸುವುದನ್ನು ಕಾಣಬಹುದು.
ಆದರೆ ಪ್ರೀತಿ, ಅನುಕಂಪ, ಸಹಾನುಭೂತಿ, ಇತ್ಯಾದಿ ಭಾವನಾ ಅನುಭವಗಳನ್ನು, ಪ್ರದರ್ಶಿಸಬೇಕಾದರೆ, ಯೋಚನೆಗಳನ್ನೂ ಮನಸ್ಸು ಮಾಡಬೇಕು. ಸಹಜವಾಗಿ ಯೋಚನೆಗಳು ತಾವಾಗಿಯೇ ಮೂಡಿ ಆದರವನ್ನು ಕಾಣಿಸಬಹುದು. ಅಥವಾ ಪ್ರಯತ್ನಪಟ್ಟು ಬುದ್ಧಿಯನ್ನು ಉಪಯೋಗಿಸಿ ಹಾಗೆ ಮಾಡಬಹುದು. ಭಾವನೆಗಳೂ, ಬುದ್ಧಿಯ ಚಾಕಚಕ್ಯತೆಯೂ ಪರಸ್ಪರವಾಗಿದ್ದರೆ ಬಾಳು ಹಸನಾಗುತ್ತದೆ.
ಆದರೆ ರಘುಪತಿಯಲ್ಲಿ ಭಾವನೆಗಳು ಮರೆಯಾಗಹತ್ತಿದುವು. ಮಾಯವೂ ಆದುವು. ಹೀಗಾಗುತ್ತಿದೆ ; ಇದು ಸರಿಯಲ್ಲ ; ಎಂದು ರಘುಪತಿಗೆ ತಿಳಿಯಿತು. ಆದರೆ ದುಃಖವಾಗಲಿಲ್ಲ. ತಪ್ಪು ಮಾಡಿದೆ ಎನ್ನುವ ಭಾವನೆಯೂ ಬರಲಿಲ್ಲ. ಇವೆಲ್ಲದಕ್ಕೂ ಉದಾಸೀನನಾಗಿದ್ದ.
ಅಂದರೆ ಅವನ ಮನಸ್ಸಿನಲ್ಲಿ, ಭಾವನೆಗಳನ್ನು ಕಾಣಿಸುವ ಭಾಗಕ್ಕೂ ; ಯೋಚಿಸುವ ಭಾಗಕ್ಕೂ, ಮಧ್ಯೆ ಇರಬೇಕಾದ ಸಂಪರ್ಕವು ಮುರಿದು ಬಿದ್ದಿತ್ತು. ಆದುದರಿಂದಲೇ ಅವ ಉದಾಸೀನನಾಗಿದ್ದ. ಮನಸ್ಸಿನ ಮುಖ್ಯವಾದ ಎರಡು ಭಾಗಗಳಿಗೂ ಸಂಪರ್ಕವು ಹರಿದುದರಿಂದ, ಮನಸ್ಸು ಛಿದ್ರವಾಯಿತು ; ಹೋಳಾಯಿತು ; ಎನ್ನಬಹುದು. ಈ ತೆರನ ಮಾನಸಿಕ ಅವ್ಯವಸ್ಥೆಗಳನ್ನು ಸ್ಕಿಜೋಫ್ರೆನಿಯಾ ಎಂದು ಹೆಸರಿಸುತ್ತಾರೆ.