ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೨೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೨೨೨

ಮನಮಂಥನ

ಈ ಬೇನೆಯಿಂದ ರಘುಪತಿಯು ಹದಿನೈದು ಹದಿನಾರು ವರ್ಷಗಳಿಂದಲೂ ನರಳುತ್ತಿದ್ದಾನೆ. ಈ ಅವಧಿಯಲ್ಲಿ ಕೆಲವು ದಿನಗಳನ್ನು ಕಾಲೇಜಿನಲ್ಲಿ ಕಳೆದ. ಪರೀಕ್ಷೆಯಲ್ಲಿ ಉತ್ತೀರ್ಣನಾಗಲಿಲ್ಲ. ನಂತರ ಚಾಕರಿಗಾಗಿ ಕೆಲವು ಕಾಲ ಒದ್ದಾಡಿದ. ಕೆಲಸ ಸಿಕ್ಕಿತು, ಒಂದೆರಡು ವರ್ಷಗಳು ನೆಮ್ಮದಿಯಿಂದ ಕೆಲಸ ಮಾಡಿಕೊಂಡಿದ್ದಂತೆಯೇ ಇದ್ದ. ಮದುವೆಗೂ ಒಪ್ಪಿದ. ತಂದೆತಾಯಿಗಳೊಡನಿದ್ದ ಸಂಬಂಧವು ಸಡಿಲಗೊಂಡಿತು. ತದನಂತರ ಸ್ಕಿಜೋ ಪ್ರವೃತ್ತಿಯು ಹೆಚ್ಚಾಯಿತು. ರಜೆ ತೆಗೆದುಕೊಳ್ಳುವುದೂ ಅತಿಯಾಯಿತು. ಭಾವನೆಗಳೂ ಕ್ಷಯಿಸುತ್ತ ಹೋದುವು. ಕಡೆಯ ಈ ಹಂತವನ್ನು ಮುಟ್ಟುವ ತನಕ, ರಘುಪತಿಗೆ ಈ ಬೇನೆ ಇದೆ, ಅಥವಾ ಇರಬಹುದು ಎಂಬುದೂ ತಿಳಿಯುತ್ತಿರಲಿಲ್ಲ ; ವೈದ್ಯರ ಸೂಕ್ಷ್ಮ ಪರೀಕ್ಷೆಗೆ ಒಳಪಡದೇ ಇದ್ದರೂ ಅಂದರೆ ಬೇನೆಯು ಇದ್ದರೂ ಅವ ಎಲ್ಲರಂತೆಯೇ ಇದ್ದ ಹೊರ ನೋಟಕ್ಕೆ: ಎನ್ನಬಹುದು. ವರ್ಷಾನುಗಟ್ಟಲೆ ಇರುವ ಈ ಬೇನೆಯು, ಸ್ವಲ್ಪಸ್ವಲ್ಪವಾಗಿಯಾದರೂ, ಖಂಡಿತವಾಗಿ, ವ್ಯಕ್ತಿತ್ವವನ್ನು ನಾಶಪಡಿಸುತ್ತ ಹೋಗುತ್ತದೆ. ಸಂಸಾರದಲ್ಲಿ ಅಥವಾ ಸಮಾಜದಲ್ಲಿ ವ್ಯಕ್ತಿಯ ವರ್ತನೆಯಿಂದ ಧಕ್ಕೆ ಆಗುವಂತಾದಾಗ, ಮನೋವೈದ್ಯರ ನೆರವನ್ನು ಪಡೆಯುವಂತಾಗುತ್ತದೆ. ಅಂತಹ ಹಂತದಲ್ಲೂ ಚಿಕಿತ್ಸೆಯು ಸಾಕಷ್ಟು ಯಶಸ್ವಿಯಾಗುತ್ತದೆ.

ರಘುಪತಿಯು ಚಿಕಿತ್ಸೆಯನ್ನು ಪಡೆದ ; ಉತ್ತಮ ರೀತಿಯ ಚಿಕಿತ್ಸೆ. ಕೆಲವು ತಿಂಗಳುಗಳಲ್ಲಿ ಗುಣಮುಖನಾದ. ಈಗ ತಿರುಗಿ ಕೆಲಸಕ್ಕೆ ಹೋಗುತ್ತಿದ್ದಾನೆ. ರಜ ತೆಗೆದುಕೊಳ್ಳುವ ಗೀಳು ಬಿಟ್ಟುಹೋಗಿದೆ. ಕೆಲಸದಲ್ಲಿ ಜಾಣತನವನ್ನು ತೋರಿಸುತ್ತಿಲ್ಲ, ದಿಟ. ಆದರೆ ಹೇಳಿದ್ದನ್ನು ಶ್ರದ್ಧೆಯಿಂದ ಮಾಡುತ್ತಿದ್ದಾನೆ. ತಾನಾಗಿ ಸ್ವಂತ ಬುದ್ಧಿಯನ್ನು ಉಪಯೋಗಿಸಲಾರ. ಆದರೂ ಮಾಡಿದ ಕೆಲಸದಲ್ಲಿ ತುಂಬಾ ತಪ್ಪುಗಳಿರುವುದಿಲ್ಲ. ಹೆಂಡತಿ ಮಕ್ಕಳು ಎಂದರೆ, ಎಲ್ಲರಂತೆ ಸಂಭ್ರಮ ಪಡುತ್ತಿಲ್ಲ. ಒಂದು ರೀತಿಯಲ್ಲಿ ಉದಾಸೀನನೇ ಆಗಿದ್ದಾನೆ. ಹಾಗಿದ್ದರೂ ನಾಲ್ಕನೆಯ ಮಗುವೂ ಆಗಿದೆ. 'ಒಳ್ಳೆಯ ಮಾತುಗಳನ್ನಾಡದಿದ್ದರೂ ಪರವಾಗಿಲ್ಲ. ಮೊದಲಿದ್ದಂತೆ, ಜೋಭದ್ರೆ ಬಡಿದವರಂತೆ ಬಿದ್ದುಕೊಂಡಿರುವುದರ ಬದಲು, ಎಲ್ಲ ಗಂಡಸರಂತೆ ಈಗ ಚಾಕರಿಗೆ ಹೋಗಿ ಬರುತ್ತಾರೆ, ಸಂಬಳ ತರುತ್ತಾರೆ. ಅಷ್ಟೇ ಸಾಕು' ಎಂದು ಹೆಂಡತಿಯೂ ಒಗ್ಗಿಕೊಂಡು ನೆಮ್ಮದಿಯಿಂದಲೇ ಇದ್ದಾಳೆ.

ಬ್ಯಾಂಕುಗಳ ರಾಮಭದ್ರ

ಪ್ರತಿಯೊಂದು ಪರೀಕ್ಷೆಯಲ್ಲೂ ಮೊದಲ ಮೂರು ಬ್ಯಾಂಕುಗಳಲ್ಲಿ ಒಂದನ್ನು