೨೨೫
ಗಳಿಸಿದ. ಆ ಅವಧಿಯಲ್ಲಿ ಎರಡು ಮೂರು ತಿಂಗಳಿಗೊಂದರಂತೆ ಪತ್ರವನ್ನು ಬರೆದಿದ್ದ. ಮೂರು ಪಂಕ್ತಿಗಳಿದ್ದ ಕೇವಲ ಯೋಗಕ್ಷೇಮದ ಪತ್ರಗಳು. ಕ್ರಿಸ್‌ಮಸ್ ಹಬ್ಬದ ವೇಳೆಯಲ್ಲಿ ಒಂದು ವರ್ಷ ಮಾತ್ರ ಕೆನಡಾಕ್ಕೆ ಒಂದು ವಾರ ಪ್ರವಾಸವನ್ನು ಮಾಡುತ್ತೇನೆ, ಎಂದು ಬರೆದಿದ್ದ. ವರ್ಣಚಿತ್ರದ ಎರಡು ಕಾರ್ಡುಗಳನ್ನು ಕಳುಹಿಸಿಯೂ ಇದ್ದ.
ಹಿಂತಿರುಗಿದ ಹುಟ್ಟಿದೂರಿಗೆ ; ಡಾಕ್ಟರ್ ರಾಮಭದ್ರನ್. ಮಗ ಉದ್ದಾಮ ಪಂಡಿತನಾಗಿ ಹಿಂತಿರುಗಿದ. ಇನ್ನು ಮದುವೆಯನ್ನು ಮಾಡಬಹುದು ಎಂದು ಅಮ್ಮನಿಗೆ ಸಡಗರ. ಮಗನೊಡನೆ ಆ ಮಾತನ್ನೆತ್ತಿದಾಗ 'ಮಾಡಿಕೊಳ್ಳುವ ಕಾಲಕ್ಕೆ ನಾನೇ ಹೇಳ್ತಿನಿ. ನೀನು ಆ ವಿಷಯವನ್ನು ಎತ್ತಬೇಡ, ಅಮ್ಮಾ' ಎಂದಿದ್ದ. ಅಮ್ಮಾ ಅಂತ ಮಗ ಅಂದನಲ್ಲಾ ಅಂತಲೇ ಅಮ್ಮನಿಗೆ ಸಂತೋಷ. ಯಾವು ಯಾವುದೋ ಕೆಲಸಕ್ಕೆ, ಅರ್ಜಿಗಳನ್ನು ಹಾಕತೊಡಗಿದ ರಾಮಭದ್ರ ಕೊಠಡಿಯಲ್ಲಿ ಕುಳಿತು ಕಾಗದ ಬರೆಯುವುದು, ಅಂಚೆಗೆ ಹಾಕಿ ಬರುವುದು, ಇವೆಲ್ಲಕ್ಕೂ ದಿನಕ್ಕೆ ಒಂದು ತಾಸು ಹಿಡಿಯುತ್ತಿತ್ತು. ಮಿಕ್ಕೆಲ್ಲಾ ಹೊತ್ತೂ ಕೊಠಡಿಯನ್ನು ಬಿಟ್ಟು ಹೊರಕ್ಕೆ ಬರುತ್ತಿರಲಿಲ್ಲ. ಬಾಗಿಲು ಹಾಕಿಕೊಂಡು ಒಳಗೇ ಇರಲು ಪ್ರಾರಂಭಿಸಿದ. ಊಟಕ್ಕೆ ಕರೆದರೆ, ಬಾಗಿಲು ತೆಗೆದುಕೊಂಡು ಬರುತ್ತಿದ್ದ. ಉಂಡು ಹಿಂತಿರುಗುತ್ತಿದ್ದನೇ ವಿನಾ ತಾಯ್ತಂದೆಯರೊಡನೆ ಅಥವಾ ತಂಗಿ, ತಮ್ಮಂದಿರೊಡನೆ ಮಾತಿಗೆ ಕೂರುತ್ತಿರಲಿಲ್ಲ. ಬಾರೋ ಕೂತುಕೋ ಎಂದು ಯಾರಾದರೂ ಸಲಿಗೆಯಿಂದ ಕರೆದರೆ ಸಿಡುಕುತ್ತಾ ಕೊಠಡಿಗೆ ಹೋಗಿಬಿಡುತ್ತಿದ್ದ.
ಒಂದು ಸಂಜೆ ಐದರ ವೇಳೆಗೆ 'ನಾನು ಊರಿಗೆ ಹೋಗುತ್ತೇನೆ' ಎಂದು ತಾಯಿಗೆ ಹೇಳಿ ಹೊರಟುಹೋಗಿದ್ದ. ಎಲ್ಲಿಗೆ ಏತಕ್ಕೆ ಎಂದೇನೂ ಹೇಳಲಿಲ್ಲ. ಕೇಳುವ ಧೈರ್ಯವೂ ತಾಯಿಗಿರಲಿಲ್ಲ. ಪ್ರಯಾಣ ಮಾಡ ಹೊರಡುವಾಗ ಹಾಗೆ ಕೇಳಬಾರದು, ಅದು ಅಪಶಕುನ, ಅಂತ ತಾಯಿಗೆ ಗೊತ್ತು.
'ನಿಮ್ಮಗ ನಮ್ಮೂರಿನಲ್ಲಿ ಕೆಲಸದಲ್ಲಿದ್ದಾನೆ. ಇಲ್ಲಿಗೆ ಬರುತ್ತಾರೆ ಅಂತ ಕಾಗದ ಬರೆಯಬಾರದಾಗಿತ್ತೆ ?' ಎಂದು ಹೊರ ಊರಿನಲ್ಲಿ ಇಂಜನಿಯರಾಗಿದ್ದ, ಸ್ನೇಹಿತರೊಬ್ಬರು ಕಾಗದ ಬರೆದಾಗ, ಮಗ ಅಲ್ಲಿದ್ದಾನೆ ಎಂಬುದು ತಿಳಿದಿದ್ದು. 'ಹೋಗಲಿ ' ಎಲ್ಲಿಯಾದರೂ ಕೆಲಸ ಮಾಡಿಕೊಂಡು ಸುಖವಾಗಿರಲಿ, ನಮಗೆ ಹೇಳದಿದ್ದರೆ ಏನಾಯಿತು ? ಎಂದು ತಾಯ್ತಂದೆಯರು ಸಮಾಧಾನ ಮಾಡಿ ಕೊಂಡರು.
ಆದರೆ ಆರು ತಿಂಗಳುಗಳಲ್ಲಿ ಒಂದು ಬೆಳಗ್ಗೆ ರಾಮಭದ್ರ ಮನೆಗೆ ಹಿಂತಿರುಗಿದ. ಆ ಕೆಲಸವನ್ನು ಬಿಟ್ಟೆ' ಎಂದು ಮಾತ್ರ ಹೇಳಿದ. ಯಥಾಪ್ರಕಾರ