ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೨೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೨೨೬
ಮನಮಂಥನ

ಕೊಠಡಿ ಹಿಡಿದ. ದಿನಕ್ಕೆ ಇಪ್ಪತ್ತು, ಇಪ್ಪತ್ತೂರು ತಾಸು, ಒಂದೇ ಕೊಠಡಿಯಲ್ಲಿ ಇರಬೇಕಾದರೆ, ಅದೂ ೨೫-೨೬ರ ಪ್ರಪಂಚವನ್ನು ನೋಡಿ ಬಂದ ಯುವಕ; ಏನೋ ಎಲ್ಲೊ ಹಳಿ ತಪ್ಪಿದೆ ಎನ್ನುವ ಅನುಮಾನವು ಮನೆಯ ಹಿರಿಯರಿಗೆ ಬಂದಿರಬೇಕು. 'ಯಾಕಪ್ಪಾ ! ಹೀಗೆ ಶೋಂಭೇರಿಯಾಗಿದೆ, ಮನೋವೈದ್ಯರನ್ನು ಕಾಣೋಣ' ಎಂದು ತಂದೆ ಒಮ್ಮೆ ಹೇಳಿದರು. 'ಮನೋವೈದ್ಯರನ್ನು ಕಾಣುವುದಕ್ಕೆ ನನಗೇನು ಹುಚ್ಚೇ ! ನನ್ನ ಪಾಡಿಗೆ ನನ್ನನ್ನು ಬಿಡಿ. ನನ್ನ ಜವಾಬ್ದಾರೀ ನನಗೇ ಇರಲಿ' ಎಂದು ರಾಮಭದ್ರ ಖಂಡತುಂಡಾಗಿ ಹೇಳಿದ. ಅದೆಷ್ಟು ಕೋಪ ಬಂದಿತ್ತೋ? ಥರ ಥರ ನಡುಗುತ್ತಿದ್ದ. ಮಾತುಗಳನ್ನಾಡುವಾಗ ತಡೆದು ಹಿಡಿದು ಆಡಿದ್ದ. ಮುಖವೆಲ್ಲಾ ಕೆಂಪೇರಿತ್ತು. ತಂದೆಯು ಮಾತನ್ನು ಮುಂದುವರಿಸಲಿಲ್ಲ.

ಎರಡು ಮೂರು ವರ್ಷಗಳಲ್ಲಿ ನಾಲ್ಕು ಕಡೆ ಕೆಲಸಕ್ಕೆ ಸೇರಿಕೊಂಡು, ಕೆಲವೇ ತಿಂಗಳುಗಳಲ್ಲಿ ರಾಜೀನಾಮೆ ಕೊಟ್ಟು ಹಿಂತಿರುಗುತ್ತಿದ್ದ. ಅತ್ಯುತ್ತಮ ಸರ್ಟಿಫಿಕೇಟ್‌ಗಳಿದ್ದುವು. ಪ್ರಕಟಿಸಿದ್ದ ರೀಸರ್ಚ್ ಪೇಪರುಗಳು ಪ್ರಸಿದ್ಧವಾಗಿದ್ದುವು. ಇಂತಹವನಿಗೆ ಕೆಲಸ ಸಿಗುವುದು ಸುಲಭವಾಗಿತ್ತು. ಸೇರಿಕೊಂಡ ಒಂದೆರಡು ತಿಂಗಳುಗಳು ಎಲ್ಲರಿಂದಲೂ ಹೊಗಳಿಸಿಕೊಳ್ಳುತ್ತಿದ್ದ ; ಪಾಂಡಿತ್ಯಕ್ಕಾಗಿ. ಆದರೆ ಯಾರೊಡನೆಯೂ ಸ್ನೇಹವನ್ನು ಮಾಡಿಕೊಳ್ಳುತ್ತಿರಲಿಲ್ಲ. ರಾಜೀನಾಮೆಯನ್ನು ಕೊಟ್ಟು ಹಿಂತಿರುಗುವಾಗ, ಯಾಕೆ ಇವ ರಾಜೀನಾಮೆಯನ್ನು ಕೊಡುತ್ತಿದ್ದಾನೆ ಎನ್ನುವುದು ಆ ಸಂಸ್ಥೆಯವರಿಗೆ ತಿಳಿಯುತ್ತಿರಲಿಲ್ಲ, 'ಅನಾನುಕೂಲಗಳು ಯಾವುದಾದರೂ ಇದ್ದರೆ, ನೀವು ಹೇಳಿದ್ದರೆ, ಅವನ್ನು ಸರಿಪಡಿಸುತ್ತಿದ್ದೆವು : ಕೆಲಸಕ್ಕೆ ಹಿಂತಿರುಗಿ ಬನ್ನಿ' ಎಂದು ಒಮ್ಮೆ ಕಾಗದವೂ ಬಂದಿತ್ತು. ರಾಮಭದ್ರ ಉತ್ತರಿಸಲೇ ಇಲ್ಲ.

ಕೊಠಡಿಯಿಂದ ಹೊರಕ್ಕೆ ಒಮ್ಮೆ ಬಂದಾಗ, ಅಕ್ಕಿ ಆರಿಸುತ್ತಾ ಅಮ್ಮ ಕುಳಿತಿದ್ದರು. ತಲೆಯೆತ್ತಿ ಮಗನ ಮುಖವನ್ನು ನೋಡಿದರು. ಹೀಗಾದನಲ್ಲ ಎಂದು ಕೊರಗು ಇತ್ತೇ ವಿನಾ ಬಾಯಿ ಬಿಚ್ಚಲು ಧೈರ್ಯವಿರಲಿಲ್ಲ. ಕಾರಣ, ತಲೆ ತಗ್ಗಿಸಿ ಅಕ್ಕಿ ಆರಿಸುವುದನ್ನು ಮುಂದುವರಿಸಿದರು. ಬಚ್ಚಲಮನೆಯ ಕಡೆಗೆ ಹೋಗುತ್ತಿದ್ದ ರಾಮಭದ್ರ ಅಮ್ಮನ ಬಳಿ ಅರೆಕ್ಷಣ ನಿಂತು 'ಪಿಸುಪಿಸು ಯಾಕೆ ಗೊಣಗುತ್ತೀ ! ಕೇಳಿಸುವ ಹಾಗೆ ಏನು ಹೇಳಬೇಕೋ ಅದನ್ನು ಹೇಳಬಾರದೇ?' ಎಂದು ರೇಗುತ್ತಾ ಹೇಳಿದ. ನಾನೇನೂ ಗೊಣಗುತ್ತಲೇ ಇಲ್ಲವಲ್ಲೋ ಎಂದು ಅಮ್ಮ ತಲೆಎತ್ತಿ ಹೇಳುವ ವೇಳೆಗೆ, ರಾಮಭದ್ರ ಬಚ್ಚಲುಮನೆಯೊಳಗಿದ್ದ.

ತನ್ನ ಬಟ್ಟೆಗಳನ್ನು ತಾನೇ ಒಗೆದು ಮಡಿಮಾಡಿಕೊಳ್ಳುವ ಅಭ್ಯಾಸವನ್ನು