೨೨೭
ಬಾಲ್ಯದಿಂದಲೂ ರಾಮಭದ್ರ ಕಲಿತುಕೊಂಡಿದ್ದ. ಅಮೆರಿಕಾದಿಂದ ಹಿಂತಿರುಗಿದ ಮೇಲೆ ಕೂಡ ಅದೇ ಅಭ್ಯಾಸವನ್ನು ಮುಂದುವರಿಸಿದ್ದ. 'ನೀನು ಯಾಕೆ ಒಗೆದು ಕೋತೀಯೋ, ಎಲ್ಲರ ಬಟ್ಟೆಗಳ ಜತೆಗೆ ನಿನ್ನದೂ ಎರಡು ಬಟ್ಟೆಗಳನ್ನು ಕಸಕಿ ಹಾಕಲು ನನಗೇನೂ ಕಷ್ಟವಿಲ್ಲ' ಎಂದು ತಾಯಿ ಹೇಳಿದರು. ಆದರೆ ಅವ ಒಪ್ಪಲಿಲ್ಲ. ಹೀಗಿದ್ದವನು ಈ ಮೂರು ನಾಲ್ಕು ವರ್ಷಗಳಿಂದ ಮೂರು ದಿನಕ್ಕೊಮ್ಮೆ ನಾಲ್ಕು ದಿನಗಳಿಗೊಮ್ಮೆ ಬಟ್ಟೆಗಳನ್ನು ಮಡಿಮಾಡತೊಡಗಿದ. ಮೈಲಿಗೆ ಬಟ್ಟೆಗಳನ್ನು ಎಂದೂ ಹಾಕಿಕೊಳ್ಳದೇ ಇದ್ದವನು ಇತ್ತಿಂದೀಚೆಗೆ ಕೊಳೆಯಾದ ಬಟ್ಟೆಗಳಲ್ಲಿರುತ್ತಿದ್ದ. ಶುಭ್ರವಾದ ಮತ್ತು ಮಡಿಯಾದ ಬಟ್ಟೆ ಎಂದು ಶಿಸ್ತು ಮಾಡುತ್ತಿದ್ದವ ಈಗ ಉದಾಸೀನನಾಗಹತ್ತಿದ.
ಒಂದು ದಿನ ಕಾಲೇಜಿನ ಪ್ರೊಫೆಸರು, ರಾಮಭದ್ರನ ಮನೆಗೆ ಬಂದರು. ಅವರ ಚಿಕ್ಕ ಹುಡುಗನಿಗೆ ಅರಿಸಿನಕಾಮಾಲೆಯಾಗಿತ್ತು. ಈ ಬೇನೆಗೆ ಮೂರು ದಿವಸಗಳು ಹಸಿರು ಔಷಧಿಯನ್ನು ರಾಮಭದ್ರನ ತಾಯಿಯು ಕೊಡುತ್ತಾರೆ ಎನ್ನುವುದು ಪಟ್ಟಣಕ್ಕೆಲ್ಲಾ ಗೊತ್ತಿತ್ತು. ಆದ್ದರಿಂದ ಪ್ರೊಫೆಸರು ಮಗನನ್ನು ಕರೆದುಕೊಂಡು ಬಂದಿದ್ದರು. ಹಳೆಯ ಪ್ರೊಫೆಸರ ಧ್ವನಿಯನ್ನು ಕೇಳಿಯೋ ಏನೋ, ಕೊಠಡಿಯಿಂದ ಹೊರಕ್ಕೆ ರಾಮಭದ್ರನ್ ಬಂದ. ಪ್ರೊಫೆಸರಿಗೆ ವಂದಿಸಿದ, 'ಈಗ ಎಲ್ಲಿ ಕೆಲಸ ಮಾಡುತ್ತಿದ್ದೀ ; ಎಷ್ಟು ದಿನಗಳಾಯಿತು ಊರಿಗೆ ಬಂದು ?' ಎಂದು ಕ್ಷೇಮ ಸಮಾಚಾರವನ್ನು ಕೇಳಿದರು. ಅದಕ್ಕೆ ಉತ್ತರವನ್ನು ರಾಮಭದ್ರ ಕೊಡಲಿಲ್ಲ 'ರಿಟೈರ್ ಆಯಿತೇ ಸಾರ್ ? ಈಗೇನ್ಮಾಡ್ತಾ ಇದ್ದೀರಿ' ಎಂದು ಕೇಳಿದ. 'ಎರಡು ವರ್ಷಗಳ ಹಿಂದೆ ರಿಟೈರ್ ಆಯ್ತಪ್ಪಾ ! ಈಗ ಪತ್ರಿಕೆಗಳನ್ನು ಓದುವುದು, ಪಾರಾಯಣ ಮಾಡೋದು ; ಹೇಗಾದರೂ ಹೊತ್ತು ಕಳೀಬೇಕಲ್ಲ' ಎಂದರು.
ಆಮೇಲೆ ಪತ್ರಿಕೆಗಳಲ್ಲಿ ಬಂದ ರಾಜಕೀಯ ಮತ್ತು ಸಾಮಾಜಿಕ ವಿಷಯಗಳನ್ನು ಕುರಿತು ರಾಮಭದ್ರನ್ ಒಂದೈದು ಹತ್ತು ನಿಮಿಷಗಳು ಟೀಕೆಯನ್ನು ಮಾಡಿದ. ಪ್ರೊಫೆಸರು ಮೂಗಿನ ಮೇಲೆ ಬೆರಳನ್ನಿಟ್ಟುಕೊಂಡರು. ಅಷ್ಟು ಹೊತ್ತಿಗೆ ಹಸಿರು ಔಷಧಿಯನ್ನು ಕೊಟ್ಟಾಗಿತ್ತು. ಹಿಂತಿರುಗುವಾಗ ಪ್ರೊಫೆಸರು 'ನಿಮ್ಮ ಮಗ ಅದೆಷ್ಟು ಸೂಕ್ಷ್ಮಗ್ರಾಹಿಯಮ್ಮ ! ಗಣಿತದ ವಿದ್ಯಾರ್ಥಿ, ಅದರಲ್ಲಿ ಪಾಂಡಿತ್ಯ ಇರುವುದು ಸಹಜ ; ಆದರೆ ರಾಜಕೀಯ ವಿಷಯಗಳನ್ನು ಎಷ್ಟು ಸಮಂಜಸವಾಗಿ, ಎಳೆಯೆಳೆಯಾಗಿ ವಿಶ್ಲೇಷಿಸಿ ಮಾತನಾಡುತ್ತಾನಮ್ಮಾ ; ತುಂಬಾ ಪ್ರಚಂಡ' ಎಂದು ರಾಮಭದ್ರನ ತಾಯಿಗೆ ಹೇಳಿದರು.