೨೩೦
ಮನಮಂಥನ
ವ್ಯವಹಾರದಲ್ಲಿ ಸಾಕಷ್ಟು ಸಂಪಾದನೆ ಇತ್ತು. ಆದರೆ 'ಪಾರ್ಟಿ'ಗಳನ್ನು ಆಗಿಂದಾಗ್ಗೆ ಕೊಡಹೋದರೆ, ಅದರಲ್ಲೂ ಕುಡಿದು ತಿನ್ನುವ ಪಾರ್ಟಿಗಳನ್ನು ಕಂಡ ಕಂಡವರಿಗೆಲ್ಲಾ ಕೊಡಹೋದರೆ, ಬದುಕಲು ಸಾಧ್ಯವೇ? ಆದುದರಿಂದ ಪೀತಾಂಬರನ ಪಾರ್ಟಿಗಳ ವಿವರಗಳನ್ನು ತಿಳಿದುಕೊಳ್ಳುವ ಕುತೂಹಲವಾಯಿತು. 'ಈ ಔಷಧಿಯನ್ನು ಸೇವಿಸು ; ಈ ರೀತಿ ಪಥ್ಯವಿರು, ಸಂಜೆ ಹೊತ್ತಿಗೆ ಆರಾಮ ಆಗ್ತೀ. ಆಗ ನನ್ನ ಬಂದು ಕಾಣು, ಸ್ವಲ್ಪ ಮಾತಾಡುವುದಿದೆ' ಎಂದು ಲಚಮನನಿಗೆ ಹೇಳಿದೆ.
ಸಂಜೆ ಬಂದು ಕಂಡ, 'ಪೀತಾಂಬರ್ ಪಾರ್ಟಿ ಕೊಟ್ಟ ಅಂದೆ, ಎಷ್ಟು ಜನರನ್ನು ಕರೆದಿದ್ದ. ಖರ್ಚೆಷ್ಟಾಗಿರಬಹುದು, ಅವನೂ ನಿನ್ನಂತೆಯೇ ನನಗೆ ಬೇಕಾದವನು, ಅವನೂ ಚೆನ್ನಾಗಿ ಬಾಳುವ ಹಾಗೆ ನಾವೆಲ್ಲಾ ಬುದ್ಧಿ ಹೇಳಬೇಕು,' ಎಂದು ಪೀಠಿಕೆ ಹಾಕಿ ವಿಚಾರಿಸಿದೆ.
'ಹೌದು, ಡಾಕ್ಟರೇ, ನನಗೂ ಹಾಗೆಯೇ ಅನ್ನಿಸುತ್ತೆ. ಎರಡು ದಿನಕ್ಕೊಮ್ಮೆ, ಮೂರು ದಿನಗಳಿಗೊಮ್ಮೆ 'ಪಾರ್ಟಿ' ಕೊಡ್ತಾನೆ. ತಿಕ್ಕಲು ತಿರುಗಿದಾಗ ಪಾರ್ಟಿ ಅಂತಾನೆ ; ಮತ್ತೆ ಯಾವ ಕಾರಣವೂ ಇರುವುದಿಲ್ಲ. ಪೀತಾಂಬರ್ ಪಾರ್ಟಿ ಕೊಡ್ತಾನೆ ಅಂದರೆ ತಿಳಿದವರು ತಿಳಿಯದವರು ; ಕರೆದವರು, ಕರೆಯದೆ ಇದ್ದವರು ; ಎಲ್ಲರೂ ಕೂಡಿಕೊಳ್ಳುತ್ತಾರೆ. ಬಂದವರೆಲ್ಲರೂ ಪೀತಾಂಬರನನ್ನು ಹೊಗಳಿದ್ದೂ ಹೊಗಳಿದ್ದೆ. ಪಾರ್ಟಿ ಒಂದಕ್ಕೆ ಸಾವಿರ, ಸಾವಿರದೈನೂರು ಖರ್ಚಾಗುತ್ತೆ. ಆ ಹೊಟೆಲಿನವರನಕ, ಒಂದಕ್ಕೆ ಎರಡು ಬಿಲ್ ಮಾಡುತ್ತಾರೆ. ಪೀತಾಂಬರನಿಗೆ ಗೊತ್ತೇ ಆಗುವುದಿಲ್ಲ. ಪೆಂಗು ಪೆಂಗಾಗಿ ತೆರುತ್ತಾನೆ. ಇಷ್ಟರಲ್ಲೇ, ಹೀಗೆಯೇ ನಡೆದರೆ, ಪೀತಾಂಬರನಿಗೆ ಪಾಪ ಚೀಟಿ ಖಂಡಿತ. ಒಂದೆರಡು ಸರ್ತಿ ನಾನೇನೋ ಹೇಳಿದೆ, ಇದೆಲ್ಲಾ ಹುಚ್ಚುತನ, ಹುಷಾರಾಗಿರು ಅಂತ. ನನ್ನ ಜವಾಬ್ದಾರಿ ನನಗೆ ಗೊತ್ತಿಲ್ಲವೇ ಎಂದು ಚುಡಾಯಿಸಿದ. ಆಮೇಲೆ ನಾನು ಸುಮ್ಮನಾದೆ. ಸಿಕ್ಕಿದ್ದು ಗಿಟ್ಟಿಸಿಕೊಂಡು, ತಂಟೆಗೆ ಸಿಗದೆ ಇದ್ದು ಬಿಡ್ತೀನಿ' ಎಂದ.
ಬಾಲ್ಯದಿಂದಲೂ ಪೀತಾಂಬರನ ಪರಿಚಯವಿತ್ತು ಎಂದು ಹೇಳಿದೆನಲ್ಲ. ಅಷ್ಟೇನೂ ಹೇಳಿಕೊಳ್ಳುವಂತಹ ಪ್ರಗತಿಯನ್ನು ಶಾಲೆಯಲ್ಲಿ ಸಾಧಿಸದೆ ಇದ್ದರೂ, ಪೆದ್ದು ಹುಡುಗನೇನೂ ಅಲ್ಲ. ಶೇಕಡಾ ೫೫-೭೦ ನಂಬರುಗಳನ್ನು ಪಡೆದು ಪ್ಯಾಸು ಮಾಡುತ್ತಿದ್ದ. ೧೫ನೇ ವರ್ಷಕ್ಕೆ ಎಸ್. ಎಸ್. ಎಲ್. ಸಿ. ಪ್ಯಾಸು ಮಾಡಿದ. ನಂತರ ವಿದ್ಯೆಗೆ ತುಂಡು ಹಾಕಿ ತಂದೆಯ ವಹಿವಾಟಿನಲ್ಲಿ ಚಾಕರಿಗಿಳಿದ. ಮೂರು ನಾಲ್ಕು ವರ್ಷಗಳಲ್ಲಿ ಸಾಕಷ್ಟು ಅನುಭವವನ್ನು ಪಡೆದಿದ್ದ. ಅನಂತರವೇ