ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮನಮಂಥನ ಊಟಕ್ಕೆ ಕೂತರೆ ಯಾವ ಉತ್ಸಾಹವು ಇರದಿದ್ದರೂ ಗಿಡಿದು ಗಿಡಿದು ತಿನ್ನುತ್ತಲೇ ಇರುವುದು, ಹೀಗೂ ಆಗಬಹುದು. ಅಗತ್ಯವಾದ ದೇಹದ ಇತರ ಬೇಡಿಕೆಗಳಿಗೂ ಇದೇ ನೀತಿಯು, ಇದೇ ರೀತಿಯು ಅನ್ವಯಿಸುತ್ತದೆ. ಆತಂಕವು ಮುತ್ತಿಕೊಂಡಾಗ, ಮುಂದೆ ಇನ್ನೂ ಹೆಚ್ಚು ಕೆಡುಕು ಸಂಭವಿಸಬಹುದು ಎನ್ನುವ ದುರ್ಭವಿಷ್ಯದ ಯೋಚನೆಗಳು ಮೂಡುತ್ತವೆ. ಆಶಾದಾಯಕವಾದ ಉತ್ತಮಗೊಳ್ಳುವ ಭವಿಷ್ಯದ ಯೋಚನೆಗಳು ಬರುವುದು ಕಡಿಮೆ, ಆಶಾದಾಯಕವಾದ ಯೋಚನೆಗಳು ಬರುವಂತಾದರೆ ಆತಂಕವು ಕಡಿಮೆಯಾಗುತ್ತಿದೆ ಎಂದು ನಿರ್ಧರಿಸಬಹುದು. ಆತಂಕದಿಂದ ಅನುಮಾನಪಡುವುದೂ, ಸಂಶಯಾತ್ಮಕರಾಗುವುದೂ ಸಾಮಾನ್ಯ. ಆತಂಕದಿಂದ ನರಳುತ್ತಿರುವವನಲ್ಲಿ ಇನ್ನೊಂದು ವಿಚಿತ್ರ ನಡವಳಿಕೆಯನ್ನು ಕಾಣಬಹುದು, ಷಹರಿನ ರಸ್ತೆಯಲ್ಲಿ, ಸ್ಟೇಚ್ಛಾ ಚಲಿಸುವ ವಾಹನಗಳಿಂದ ಅಪಘಾತಗಳಾಗುವ ಸಂದರ್ಭಗಳು ಬಹಳ. ಹಠಾತ್ತನೆ ಹತೋಟಿ ಮೀರಿದ ಆಟೋರಿಕ್ಷಾ ಬಂದು ಆತಂಕಗ್ರಸ್ತ ಪಾದಚಾರಿಯ ಬಳಿಗೆ ಹಾಯಿತು ಎನ್ನಿ. ಯೋಚನೆಯನ್ನು ಮಾಡಿ ಸೂಕ್ತ ಕ್ರಮವನ್ನನುಸರಿಸಿ ಅಪಘಾತದಿಂದ ಪಾರಾಗಲು ಕಾಲಾವಕಾಶವಿರುವುದಿಲ್ಲ. ಆದರೂ ಜನ್ಮಜನ್ಮಾಂತರಗಳಿಂದ ಸ್ವಸಂರಕ್ಷಣೆಯ ಜಾಣತನವು 'ಝಕ್' ಎಂದು ಹಾರು, ಪಾರಾಗು' ಎಂದು ದೇಹವನ್ನು, ತೋರ ಮನಸ್ಸಿಗೆ ತಾರದೆಯೇ ನಡೆಸುತ್ತದೆ. ಛಂಗಿ ಹಾರಿ ಆತಂಕಗಸ್ತನೂ ಅಪಘಾತದಿಂದ ಪಾರಾಗುತ್ತಾನೆ; ಪುಣ್ಯ ಇದ್ದರೆ. ಆದರೆ ಅಪಘಾತವು ತಪ್ಪಿದ ಮೇಲೆ, ಸುರಕ್ಷಿತನಾದ ಮೇಲೆ, ಮರುಕ್ಷಣ ಥರಥರ ನಡುಗಲಾರಂಭಿಸುತ್ತಾನೆ. ಆಗ ಆತಂಕವು ಮನಸ್ಸನ್ನು ತುಂಬಾ ಕದಡುತ್ತದೆ. ರಭಸವಾಗಿ ನಡೆಯುವ ಪರಿಸರದ ಘಟನೆಗಳಿಂದ, ಪ್ರಚೋದಿತವಾದ ದೇಹದ ಪ್ರತಿಕ್ರಿಯೆಗಳು ಅವಶ್ಯಕ ರೀತಿಯಲ್ಲಿ ನಡೆದುಹೋಗುತ್ತವೆ. ಮತ್ತು ಅವಶ್ಯಕಕ್ಕಿಂತ ಹೆಚ್ಚು ಪ್ರಮಾಣದಲ್ಲಿ ನಡೆದು ಹೋಗುತ್ತವೆ. ಆದಕಾರಣ ಅಪಘಾತವು ನಿವಾರಣೆಯಾದ ಮೇಲೂ ಆತಂಕದಿಂದಾಗುವ ದೈಹಿಕ ಚಿಹ್ನೆಗಳು ಕಾಣಬರುತ್ತವೆ. 'ತಲೆಯೇ ಒಡೆದು ಹೋಗುತ್ತಿತ್ತಲ್ಲಪ್ಪ ; ಸದ್ಯ ! ತಪ್ಪಿತಲ್ಲಪ್ಪ !' ಎನ್ನುವ ಸಮಾಧಾನದ ಹಿಂದೆಯೇ ತಲೆಯೊಡೆದು ಸಾಯುತ್ತಿದ್ದೆನಲ್ಲ ! ಆಗ ಹೆಂಡತಿ ಮಕ್ಕಳ ಗತಿಯೇನು? ಎನ್ನುವ ಭೀಕರ ಕಲ್ಪನೆಯು ಕಾತರವನ್ನುಂಟುಮಾಡುತ್ತದೆ. ಮಗು ಸತ್ತ ಮೇಲೆ ಸೂತಕ ಕಾಡುತ್ತದೆ ಎನ್ನುವ ಗಾದೆಯಂತೆಯೇ, ಆತಂಕದ ಕಾವ್ಯವ್ಯಸನಗಳು. ಒಟ್ಟಿನಲ್ಲಿ ಆತಂಕವು ಮನಸ್ಸಿಗೆ ಒಲ್ಲದ, ಹಿತವಿರದ ಒಂದು ಪರಿಸ್ಥಿತಿ.