ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೨೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೨೩೪

ಮನಮಂಥನ

ಅಜ್ಜಿ ಹೇಳಿದಳು. ವಯಸ್ಸಾದ ತಂದೆಗೆ ಎದೆ ನೋವು ಅಂದರೆ ಹೃದಯಕ್ಕೆ ಧಕ್ಕೆ ಆಗಿರಬಹುದು ಎಂದು ಯಾರಾದರೂ ಕಾತರಗೊಳ್ಳುತ್ತಾರೆ. ರೋಗಿಯೊಡನೆ ಡಾಕ್ಟರ ಬಳಿಗೆ ಹೋಗುತ್ತಾರೆ. ಆದರೆ ಈಗ ಪೀತಾಂಬರ್ ಬಂದಿರಲಿಲ್ಲ.

ರೋಗಿಯನ್ನು ಪರೀಕ್ಷೆಮಾಡಿದೆ. ಈ ಷಹರಿನ ಶಾಖೆಯಲ್ಲಿ ತುಂಬಾ ನಷ್ಟವಾಗಿದೆಯೆಂದೂ ಪೀತಾಂಬರ್, ಬಹಳ ದುರ್ವ್ಯಸನಿಯಾಗಿದ್ದಾನೆಂದೂ, ತಿಳಿದು, ಸ್ಥಿತಿಗತಿಗಳನ್ನು ಅರಿತು, ಸರಿಪಡಿಸಲು ಅವ ಬಂದಿದ್ದ. ಇಲ್ಲಿ ಆಗಿದ್ದ ನಷ್ಟದ ಪ್ರಮಾಣವು ಬಹಳವಾಗಿತ್ತು. ಅಲ್ಲದೆ ಮಗ ಕೇಳಿದ ಪ್ರಶ್ನೆಗೆ ಸರಿಯಾಗಿ ಉತ್ತರವನ್ನು ಕೊಡಲಿಲ್ಲ, ಬದಲು ಸಿಡುಕುವುದು, ಅಸಂಬದ್ಧವಾಗಿ ಮಾತನಾಡುವುದು ತಂದೆ ಎಂದು ಗೌರವವನ್ನೂ ಕೊಡದಿರುವುದು : ಇವೆಲ್ಲವೂ ಆಗಿತ್ತು. ತಂದೆಯ ಮನನ್ನೂ ಕೊರಗಿನಿಂದ ತಳಮಳಗೊಂಡಿತ್ತು. ಎದೆಯ ನೋವಾಗಿ ದೇಹಕ್ಕೆ ವಕ್ರಿಸಿತ್ತು.

ರೋಗಿಯನ್ನು ಒಳಕ್ಕೆ ಕರೆದುಕೊಂಡು ಹೋಗಿ ಏಕಾಂತದಲ್ಲಿ ತಿಳಿದುದನ್ನು ಹೇಳಿದೆ :

ಪೀತಾಂಬರ್‌ಗೆ ಸ್ಕಿಜೋ ಬೇನೆ ಬಂದಿದೆ. ಆದುದರಿಂದ ಅವ ಹೀಗೆಲ್ಲಾ ದುರ್ವ್ಯಯ ಮಾಡುತ್ತಿದ್ದಾನೆ. ದುಶ್ಚಟಗಳಿಗೆ ಬಲಿಯಾಗಿದ್ದಾನೆ. ಹೆಂಡತಿ, ಮಕ್ಕಳು, ತಂದೆ, ತಾಯಿ, ಅಜ್ಜಿ, ನೆಂಟರು, ಇವರುಗಳಲ್ಲಿ ಕೂಡ ಪ್ರೀತಿಯೇ ಇಲ್ಲದಂತಾಗಿದೆ. ಅವನನ್ನು ಬೈದು ಬುದ್ಧಿ ಹೇಳಹೋದರೆ ಜೋ ಉಲ್ಬಣಿಸುತ್ತದೆಯೇ ಹೊರತು, ಅವನು ಸರಿಯಾಗುವುದಿಲ್ಲ. ತತ್‌ಕ್ಷಣವೇ ಉಪಾಯ ಮಾಡಿ, ಆದರದಿಂದ ಮಾತನಾಡಿಸಿ, ಮನೋವೈದ್ಯರಲ್ಲಿಗೆ ಹೋಗಿ ಸೂಕ್ತ ಚಿಕಿತ್ಸೆಯನ್ನು ಮಾಡಿದರೆ ಬಹಳಷ್ಟು ಗುಣ ಹೊಂದುತ್ತಾನೆ.

ಆಗ ನಿಮ್ಮ ಎದೆಯ ನೋವೂ ಮಾಯವಾಗುತ್ತದೆ. ನಿಮ್ಮ ಹೃದಯವು ಆರೋಗ್ಯವಾಗಿದೆ. ನಿಮ್ಮ ಮನಸ್ಸಿನಲ್ಲಿ ತುಂಬಿ ತುಳುಕಾಡುತ್ತಿರುವ ಭೀಕರ ಕೊರಗೇ ಎದೆಯ ನೋವಿಗೆ ಮತ್ತು ಸುಸ್ತಿಗೆ ಕಾರಣ ಎಂದು.

ಪೀತಾಂಬರನ ತಂದೆಯು ಲೋಕಾನುಭವವನ್ನು ಪಡೆದಿದ್ದವ. ಹೇಳಿದುದನ್ನು ಅರ್ಥ ಮಾಡಿಕೊಂಡ. ಇವನ ಸೋದರಮಾವಂದಿರಿಬ್ಬರು ಹೀಗೇ ಆಡುತ್ತಿದ್ದರು. ಕೊನೆಗೆ ಮಾನಸಿಕ ಆಸ್ಪತ್ರೆಗೆ ಸೇರಿಸಬೇಕಾಯಿತು. ಆದರೆ ಆಗ ಅವರುಗಳಿಗೆ ನಲವತ್ತು ಐವತ್ತು ವಯಸ್ಸಾಗಿತ್ತು. ಪೀತಾಂಬರನೂ ಅವರ ಹಾಗೆಯೇ ಆಗಿಬಿಡುತ್ತಾನೇನೋ ಎನ್ನುವ ಅನುಮಾನ ಮೊದಲಿನಿಂದಲೂ ನನಗಿತ್ತು. ನೀವು ಹೇಳಿದಂತೆ ಮನೋವೈದ್ಯರನ್ನು ಭೇಟಿಯಾಗುತ್ತೇನೆ' ಎಂದು ಹೇಳಿದ.