ಸ್ಕೀಜೋಫ್ರೆನಿಯಾಗಳು
೨೩೫
ತಾತ್ಕಾಲಿಕ ಉಪಶಮನಕ್ಕಾಗಿ ಔಷಧಿಯನ್ನು ತನ್ನ ಬೇನೆಗೆ ಪಡೆದು, ಪೀತಾಂಬರನ ತಂದೆ ಹಿಂತಿರುಗಿದ.
ಏಳೆಂಟು ತಿಂಗಳು ಮಾನಸಿಕ ರೋಗಿಗಳ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆಯನ್ನು ಪಡೆದ ಮೇಲೆ ಪಿತಾಂಬರನ ಸ್ಥಿತಿಯು ಬಹುಪಾಲು ಉತ್ತಮಗೊಂಡಿತು. ಈಗ ಅವನು ವ್ಯವಹಾರವನ್ನು ನಡೆಸುತ್ತಿದ್ದಾನೆ. ಏರುಪೇರಾಗದಂತೆ ಸಹಾಯಕ ಸಿಬ್ಬಂದಿಯನ್ನೂ ನೇಮಿಸಲಾಗಿದೆ.
ಪ್ರೀತಿ, ವಿಶ್ವಾಸ, ಇತ್ಯಾದಿಗಳು ಈಗಲೂ ಎಲ್ಲರಲ್ಲಿರುವಂತೆ ಅವನಲ್ಲಿಲ್ಲ. ಆದರೂ ಮೊದಲಿದ್ದುದಕ್ಕೆ ಹೋಲಿಸಿದರೆ ಎಷ್ಟೋ ಪಾಲು ಮೇಲು.
ಮಾತನಾಡುವಾಗ ಅಸಂಬದ್ಧತೆಯು ಈಗ ಇಲ್ಲ. ಯೋಚನೆಗಳ ಸರಣಿಯೂ ಸುಸೂತ್ರವಾಗಿದೆ. ಮನೋವೈದ್ಯರ ಉಸ್ತುವಾರಿಯಲ್ಲಿ ಈಗಲೂ ಇದ್ದಾನೆ. ತಾನೇ ಅವರಲ್ಲಿಗೆ ಹೋಗಿ ಸಲಹೆಯನ್ನು ಪಡೆದು ಬರುತ್ತಾನೆ. ಕೊಟ್ಟ ಸಲಹೆಯಂತೆ ನಡೆದುಕೊಳ್ಳುತ್ತಾನೆ.
ಅವನ ಲೇಣೆದೇಣಿ ಅಂಗಡಿಗೆ ಬರುವ ಗಿರಾಕಿಗಳಿಗೆ, ಪೀತಾಂಬರನಿಗೆ ಸ್ಕೀಜೋ ಆಗಿತ್ತು, ಅಲ್ಪಸ್ವಲ್ಪ ಉಳಿದಿದೆ ; ಎನ್ನುವುದು ಈಗ ಪತ್ತೆಯೇ ಆಗುವುದಿಲ್ಲ.
ಸ್ಕೀಜೋಫ್ರೆನಿಯಾವು ಬಹಳ ವರ್ಷಗಳು ಕಾಡುತ್ತದೆ, ಆದರೆ ಸೂಕ್ತ ಚಿಕಿತ್ಸೆಯಿಂದ ಅದರ ದುಷ್ಟಭಾವವನ್ನು ಬಹಳಮಟ್ಟಿಗೆ ತಡೆಯಬಹುದು. ಸಾಮಾನ್ಯ ಜೀವನವನ್ನು ನೆಮ್ಮದಿಯಿಂದ ನಡೆಸಲು ಸಾಧ್ಯವಾಗುತ್ತದೆ. ಇಂತಹ ರೋಗಿಗಳಲ್ಲಿ, ಎಷ್ಟೋ ಜನರು ಚಿಕಿತ್ಸಾನಂತರ, ತಮ್ಮ ಕೆಲಸದಲ್ಲಿ ಅಸಾಧಾರಣ ಚಾಕಚಕ್ಯತೆಯನ್ನೂ ಜಾಣತನವನ್ನೂ ತೋರಿಸುತ್ತಾರೆ
ಮೊದಮೊದಲ ಹಂತಗಳಲ್ಲಿ ಈ ಬೇನೆಯನ್ನು ಮನೆಯವರು, ಮಿತ್ರರು ಗಮನಿಸಿದರೆ, ಸೂಕ್ತ ಚಿಕಿತ್ಸೆಯನ್ನು ಮಾಡಿಸಿದರೆ, ಗುಣವಾಗುವ ಸಂಭವವು ಬಹಳಷ್ಟು ಇರುತ್ತದೆ. ಈ ಸೌಲಭ್ಯವಿರದಿದ್ದರೆ, ಅಂಕೆ, ಶಿಕ್ಷೆ, ಬುದ್ದಿ ಹೇಳುವುದು, ಮೂದಲಿಸುವುದು - ಇವು ಮಾತ್ರ ದೊರೆತರೆ ರೋಗವು ಬಲವಾಗಿ ಬೇರೂರಿ, ಮನಸ್ಸಿನ ಛಿದ್ರತೆಯು ಹೆಚ್ಚುತ್ತ ಹೋಗಿ, ಸರಿಪಡಿಸಲಾಗದ ದುಃಸ್ಥಿತಿಗೆ ಮುಟ್ಟ ಬಹುದು. ಅಂತಹವರನ್ನು ಕಂಡು, ಇದು ವಾಸಿಯಾಗಲಾರದ ಕಾಯಿಲೆ ಎಂದು ಜನರು ಅಂದುಕೊಳ್ಳಬಹುದು. ತಪ್ಪಾದ ಈ ವಿನಾಶಕಾರೀ ಅಭಿಪ್ರಾಯವನ್ನು ಆದಷ್ಟು ಬೇಗ ಸಮಾಜದಿಂದ ತೊಡೆದುಹಾಕಬೇಕು.