ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಆತಂಕ

ಬಾಳಿ ಬದುಕುವುದಕ್ಕೆ ಇದರ ಅಗತ್ಯವು ಇರಬಹುದು. ಆದರೆ ಹಂತಹಂತವಾಗಿ ಇದು ಹೆಚ್ಚಿದಂತೆಲ್ಲಾ ಮನುಷ್ಯನನ್ನು ಹೆಚ್ಚುಹೆಚ್ಚಾಗಿ ನರಳಿಸಿ, ಅವನ ಚಾಕಚಕ್ಯತೆಯನ್ನು ಕಡಿಮೆ ಮಾಡುತ್ತದೆ. ಮಾನಸಿಕ ನರಳುವಿಕೆಗೆ, ಮಾನಸಿಕ ಅಸ್ವಾಸ್ಥ್ಯದಲ್ಲಿ, ಆತಂಕವು ಹಿರಿಯ ಪಾತ್ರವನ್ನು ವಹಿಸುತ್ತದೆ. ವಿಧವಿಧವಾದ ಇತರ ಮಾನಸಿಕ ಬೇನೆಗಳೊಂದಿಗೆ ಆತಂಕವೂ ಸಮ್ಮಿಶ್ರವಾಗಿರುತ್ತದೆ. ಅವುಗಳ ಕಾಟವನ್ನು ಹೆಚ್ಚಿಸುತ್ತದೆ.

ನಮ್ಮ ನಾಡಿನಲ್ಲಿ ನಮ್ಮ ಇಂದಿನ ರಾಜಕೀಯ, ಆರ್ಥಿಕ ಹಾಗೂಸಾಮಾಜಿಕ ಪರಿಸ್ಥಿತಿಯಲ್ಲಿ ಯಾರೊಬ್ಬರಾದರೂ ಆತಂಕದಿಂದ ನರಳದೇಇರುವುದು ಸಾಧ್ಯವೇ? ಹಾಗಾಗಿ ಆತಂಕದ ಕಾರಣಗಳನ್ನೂ ಅದರ ರೂಪರೇಷೆಗಳನ್ನೂ, ಅದರ ಅವತಾರ ಅಪರಾವತಾರಗಳನ್ನೂ ವಿವರವಾಗಿ ತಿಳಿದುಕೊಳ್ಳಬೇಕು. ಅಂತಹ ತಿಳಿವಿನಿಂದ, ಆತಂಕವನ್ನು ಆದಷ್ಟು ಮಟ್ಟಿಗೆ ಹತೋಟಿಯಲ್ಲಿಡಲು ಸಾಧ್ಯವಾಗುತ್ತದೆ. ವಸ್ತುವಿನ ಅಥವಾ ವಿಷಯ ಒಂದರ ಪರಿಚಯದಿಂದ ಮತ್ತು ಪರಿಜ್ಞಾನದಿಂದ ಅದರಿಂದುಂಟಾಗುವ ಭಯವನ್ನಾದರೂ ನಿವಾರಿಸಬಹುದು.

ಉಸಿರಾಟದ ಅವ್ಯವಸ್ಥೆಗಳು

ಆತಂಕದ ಪರಿಣಾಮವಾಗಿ ದೇಹದ ವಿವಿಧ ಅಂಗಗಳಲ್ಲಿ ಅವ್ಯವಸ್ಥೆಯು ತಲೆದೋರಬಹುದು. ಅದರಲ್ಲಿಯೂ ಉಸಿರಾಡುವ ಕಾರ್ಯದ ಮೇಲೆ ಆತಂಕದ ಪ್ರಭಾವವು ಹೆಚ್ಚಾಗಿರುತ್ತದೆ. ಉಸಿರಾಡುವುದರಲ್ಲಿ ಅಸ್ತವ್ಯಸ್ತವಾದರೆ ಪ್ರಾಣಕ್ಕೆ ಸಂಚು ಎಂದು ಎಲ್ಲರಿಗೂ ತಿಳಿದಿದೆ. ಆದುದರಿಂದ ಉಸಿರಾಡುವ ಕಾರ್ಯದಲ್ಲಿ ಯಾವುದಾದರೂ ವ್ಯತ್ಯಾಸವಾದರೆ, ಅದನ್ನು ಗಮನಿಸಿದವನಿಗೆ ಪ್ರಾಣಭಯವೂ ಉಂಟಾಗುತ್ತದೆ. ಆಳ ಮನಸ್ಸಿನ ಆತಂಕದಿಂದಲೇ ಉಸಿರಾಡುವ ಕಾರ್ಯದಲ್ಲಿ ವ್ಯತ್ಯಾಸವಾಗಿದೆ ಎಂದು ರೋಗಿಗೆ ಅನಿಸುವುದಿಲ್ಲ. ಆಳಮನಸ್ಸಿನಲ್ಲಿ ಆತಂಕವಿರುವುದೂ ಅವನ ತೋರ ಮನಸ್ಸಿಗೆ ಕಂಡಿರುವುದಿಲ್ಲ. 'ನನಗೇನೂ ಆತಂಕವೇ ಇಲ್ಲವಲ್ಲ ; ವಿನಾಕಾರಣ ಕಾಳಜಿ ಮಾಡುವಷ್ಟು ಹೆಡ್ಡನಲ್ಲ ನಾನು' ಎಂದೇ ಅವನು ದೃಢವಾಗಿ ನಂಬಿರುತ್ತಾನೆ. ಆದಕಾರಣ ಉಸಿರಾಟದಲ್ಲಿ ಅವ್ಯವಸ್ಥೆಯನ್ನು ಗಮನಿಸಿದಾಗ, ಭಯವುಂಟಾಗುತ್ತದೆ. ಅದರ ಹಿಂದೆಯೇ, ನಾಯಿಯ ಹಿಂದೆ ಬಾಲ, ಎಂಬಂತೆ ಆತಂಕವು ತೋರಮನಸ್ಸಿನಲ್ಲಿಯೂ ಕಾಣಿಸಿಕೊಳ್ಳುತ್ತದೆ. ಇದರಿಂದಾಗಿ ಉಸಿರಾಟದ ಅವ್ಯವಸ್ಥೆಯು ಇನ್ನೂ