೨೪೧
ಮದುವೆಯು ಶಾಶ್ವತವಾಗಿರಲೇ ಬೇಕಾಗಿಲ್ಲ. ಏರುಪೇರಾದರೆ ತಲಕ್ ಮಾಡಿಕೊಳ್ಳಬಹುದು. ಇದನ್ನು ನೆನಪಿನಲ್ಲಿಟ್ಟುಕೊಂಡು ನಿರ್ಧಾರವನ್ನು ಹೇಳು' ಎಂದ ಸಮೀಯುಲ್ಲಾ.
ಹುಟ್ಟುಜಾಣತನವಿದ್ದವ, ಅಭ್ಯಾಸದಿಂದ ವಿಶ್ಲೇಷಿಸುವ ಮನಸ್ಸನ್ನು ಹರಿತ ಮಾಡಿಕೊಂಡಿದ್ದ. ಲೋಕಾನುಭವವೂ ಇತ್ತು. ಕಂಡುದನ್ನು ಸೂಕ್ಷ್ಮವಾಗಿ ಗ್ರಹಿಸುತ್ತಿದ್ದ, ಸ್ಕಿಜೋಫ್ರೆನಿಯಾದಿಂದ ನರಳುವವರ ಮುಖ್ಯ ಚಿಹ್ನೆಗಳಾದ ೧. ಭಾವನೆಗಳು ಇಲ್ಲದಿರುವುದು ೨. ಯೋಚನಾಸರಣಿಯಲ್ಲಿ ಕುಂದು ಕಾಣುವುದು ೩. ಗಮನವನ್ನು ಕೇಂದ್ರೀಕರಿಸಿ ಹಿಡಿದಿಡುವುದಕ್ಕೆ ಆಗದೆ ಇರುವುದು, ಇವೆಲ್ಲವನ್ನೂ ನಿಲೂಫರ್‌ನಲ್ಲಿ ಗುರುತಿಸಿದ್ದ, ವಿವರಿಸಿದ್ದ. ಆದರೆ ಇವು ಆ ಬೇನೆಯ ಕುರುಹುಗಳು ಎಂದವನಿಗೆ ತಿಳಿಯದು.
'ಮದುವೆಯನ್ನು ಈಗ ಮಾಡುವುದು ಬೇಡ, ಮನೋವೈದ್ಯರಲ್ಲಿ ಚಿಕಿತ್ಸೆಯನ್ನು ಜರೂರಾಗಿ ಮಾಡಿಸು. ಸ್ವಾಸ್ಥ್ಯವು ಉಂಟಾದ ಮೇಳೆ, ಮನೋವೈದ್ಯರು ಒಪ್ಪಿದಾಗ, ಮದುವೆಯ ಯೋಚನೆಯನ್ನು ಮಾಡುವಿಯಂತೆ. ಇಂತಹ ವೈದ್ಯರ ಬಳಿಗೆ ಹೋಗು. ನಾನವರೊಡನೆ ಮಾತನಾಡುತ್ತೇನೆ. ತುಂಬಾ ಶ್ರದ್ಧೆ ಮತ್ತು ಅನುಕಂಪದಿಂದ ಚಿಕಿತ್ಸೆಯನ್ನು ನಡೆಸುತ್ತಾರೆ' ಎಂದು ಹೇಳಿದೆ. ಸಮೀಯುಲ್ಲಾನ ಮನಸ್ಸು ತುಸು ಹಗುರವಾಯಿತು, ನನ್ನ ಮನಸ್ಸು ತುಸು ಭಾರವಾಯಿತು. ಗೆಳೆತನ ಎಂದರೆ ಇದೆಯೇನೋ ?
ಒಂದು ವರ್ಷ ಚಿಕಿತ್ಸೆಯನ್ನು ಮಾಡಿದ ಮೇಲೆ ನಿಲೂಫರಳು ಬಹಳಮಟ್ಟಿಗೆ ಗುಣಹೊಂದಿದಳು. ಓದನ್ನು ಮುಂದುವರಿಸಲಿಲ್ಲ. ಮದುವೆಗೂ ಒಪ್ಪಿದಳು. ನಿಧಾನಸ್ಥ ಗಂಡನೂ ದೊರಕಿದ. ಮದುವೆ ಆಯಿತು. ಗಂಡನ ಮನೆಯಲ್ಲಿ ಎಲ್ಲರೊಂದಿಗೂ ಹೊಂದಿಕೊಂಡಳು, 'ಚೆಲ್ಲುಚೆಲ್ಲಾಗಿ ಮಾತನಾಡುಲ್ಲ, ನಮ್ಮ ಸೊಸೆಯದು ತುಂಬಾ ಗಂಭೀರ ಸ್ವಭಾವ' ಎಂದು ಅತ್ತೆಯಿಂದ ಮೆಹನತ್ತು ಪಡೆದಳು.
ಮೊದಲ ಹೆರಿಗೆಯಾಗುವ ವೇಳೆಗೆ, ನನಗೆ ಸ್ವಲ್ಪ ಕಸಿವಿಸಿಯಾಯಿತು. ಹೆರಿಗೆಯಾದ ಸುಸ್ತಿನಿಂದ ಬೇನೆಯು ತಿರುಗಿ ಮರುಕಳಿಸುವುದೋ ಎಂದ. ಅಲ್ಲಾನ ಕೃಪೆ, ಹಾಗಾಗಲಿಲ್ಲ. ಮಗು ಬಾಣಂತಿ ಆರೋಗ್ಯವಾಗಿದ್ದರು.