ಮನಮಂಥನ
೭. ಶೀನಪ್ಪನ ಅಮ್ನೀಸಿಯ
ಐದಾರು ಮಕ್ಕಳಿದ್ದ ಮನೆಯಲ್ಲಿ ಶೀನಪ್ಪ ಜನ್ಮ ತಾಳಿದ. ತುಂಬಾ ಒಳ್ಳೆಯ ಮಗು ; ಯಾರಿಗೂ ಯಾವ ತೊಂದರೆಯನ್ನೂ ಕೊಡುವುದಿಲ್ಲ, ಎಂದು ಅಮ್ಮ ಹೊಗಳುತ್ತಿದ್ದಳು. ಹೀಗಿದ್ದರೂ ಒಮ್ಮೊಮ್ಮೆ ರಚ್ಚೆ ಹಿಡಿದು ಅಳಲು ಪ್ರಾರಂಭಿಸಿದರೆ ಬಡಪೆಟ್ಟಿಗೆ ಸಮಾಧಾನವನ್ನು ಹೊಂದುತ್ತಿರಲಿಲ್ಲ. ಹೆದರಿಸಿ ಬೆದರಿಸಿದರೆ, ಹೊಡೆದರೆ ಬಡಿದರೆ ಇನ್ನೂ ಹೆಚ್ಚಾಗಿ ಮೊಂಡು ಹಿಡಿಯುತ್ತಿದ್ದ. ಆದರೆ ಬಹಳ ವಿರಳವಾಗಿ ಅವ ಹಟ ಹಿಡಿಯುತ್ತಿದ್ದುದರಿಂದ ಯಾರಿಗೂ ಅವನ ಮೇಲೆ ಬೇಸರ ಬಂದಿರಲಿಲ್ಲ. ಶೈಶವದಲ್ಲಿ ಹೇಳಿಕೊಳ್ಳುವಂತಹ ಯಾವ ಬೇನೆಯೂ ಬರಲಿಲ್ಲ. ಲಕ್ಷಣವಾಗಿ ಉಂಡು ತಿಂದು ಬೆಳೆದ.
ಎಂಟು ಹತ್ತು ವರ್ಷಗಳಾದುವು. ಶಾಲೆಗೆ ಹೋಗಿ ಬರುತ್ತಿದ್ದ. ಆ ವಯಸ್ಸಿನಲ್ಲಿ ಜತೆ ಹುಡುಗರೊಡನೆ ಗೋಲಿ ಆಡುತ್ತಾ ಜಗಳ ಕಾಯಬೇಕು. ಮರಕೋತಿ ಆಡುಕ್ಕೆ ಹೋಗಿ ಮೈ ಕೈ ತರಚಿಕೊಂಡು ಬರಬೇಕು. ಆದರೆ ಶೀನಪ್ಪನದು ಎಷ್ಟು ಸಂಕೋಚ ಪ್ರವೃತ್ತಿ ಅಂತ ; ಇಂತಹ ಆಟಗಳಿಗೆ ಹೋಗುತ್ತಲೇ ಇರಲಿಲ್ಲ. ಬದಲು ಹರಿಕತೆಗಳಿಗೆ ಹೋಗಿ ಒಂದು ಮೂಲೆಯಲ್ಲಿ ಒಬ್ಬನೇ ಕೂರುತ್ತಿದ್ದ. ಆಗಲೂ ಜತೆ ಹುಡುಗರನ್ನು ಕರೆಯುತ್ತಿರಲಿಲ್ಲ. ಓದನ್ನೇನೋ ಸಾಂಗವಾಗಿ ಮುಂದುವರೆಸುತ್ತಿದ್ದ. ಉತ್ತಮ ಕ್ಲಾಸುಗಳನ್ನು ಪರೀಕ್ಷೆಗಳಲ್ಲಿ ಪಡೆಯದೆ ಇದ್ದರೂ ಎಲ್ಲೂ ಯಾವಾಗಲೂ ಫೈಲ್ ಆಗಲಿಲ್ಲ. ಎಂ.ಕಾಂ. ಪ್ಯಾಸುಮಾಡಿದ ಮೇಲೆ ದೊಡ್ಡ ಕಂಪನಿಯಲ್ಲಿ ಜವಾಬ್ದಾರಿಯುತವಾದ ಕೆಲಸವು ದೊರಕಿತು. ಅಂದಮೇಲೆ ಮದುವೆಯೂ ಆಯಿತು : ಹೆಣ್ಣನು ನೋಡಿ ಮಾತನಾಡಿಸಿ, ನೀ ಒಪ್ಪಿದರೆ ಮದುವೆ ಮಾಡುತ್ತೇವೆ; ಎಂದು ತಾಯ್ತಂದೆಯರೆಂದರು. ಹಿರಿಯರು ನೀವು, ನೀವು ಸರಿ ಎಂದುದಕ್ಕೆ ನಾನು ಒಪ್ಪುತ್ತೇನೆ. ಹೆಣ್ಣನ್ನು ನಾನೇನು ನೋಡಬೇಕಾಗಿಲ್ಲ; ಎಂದು ಶೀನಪ್ಪ ಹೇಳಿದ. ಹೆಣ್ಣನ್ನು ನೋಡದೆ ಅವ ಮದುವೆಯಾಗಲು ಒಪ್ಪಿದ. ಅವನಿಗೆ ಲಭಿಸಿದ ಹೆಣ್ಣು ಕೂಡ ಗಂಡನ್ನು ನೋಡದೆ ಮದುವೆಗೆ ಒಪ್ಪಿದಳು. ಮಲತಾಯಿಯಿರುವ ಮನೆಯನ್ನು ಬಿಟ್ಟರೆ ಸಾಕು ಎಂದವಳಿಗೆ ಅನಿಸಿರಬೇಕು. ಮದುವೆಯು ಆದಮೇಲೆ ಯಥಾಪ್ರಕಾರದ ಸಂಸಾರವು