ಮನಮಂಥನ
ವಿಷಯವನ್ನು ತಿಳಿಸಿದರು.
ಏನೆಲ್ಲ ಶೋಧನೆಗಳನ್ನು ಪೋಲೀಸರು ನಡೆಸಿದರು. ಶೀನಪ್ಪನ ಪತ್ತೆ ಆಗಲೇ ಇಲ್ಲ. ನಾಲ್ಕು ತಿಂಗಳುಗಳಾದರೂ ಯಾವ ಸುಳಿವೂ ದೊರೆಯಲಿಲ್ಲ. ಯಾವ ಯಾವ ಊರಿನಲ್ಲಿರುವ ಶೀನಪ್ಪನ ಸಂಬಂಧಿಕರಿಗೆ ಮತ್ತು ಸ್ನೇಹಿತರಿಗೆ, ಹೀಗಾಗಿದೆ, ಇಲ್ಲಿ, ಅಕಸ್ಮಾತ್ ನಿಮ್ಮಲ್ಲಿಗೆ ಬಂದರೆ ತತ್‌ಕ್ಷಣ ತಿಳಿಸಿ ; ಎಂದು ಶೀನಪ್ಪನ ತಂದೆ ಕಾಗದಗಳನ್ನು ಬರೆದು ಹಾಕಿದರು. ಜ್ಯೋತಿಷ್ಯರ ಬಳಿಗೆ ಹೋಗಿ 'ಪ್ರಶ್ನೆ' ಕೇಳಿ ಸಮಾಧಾನವನ್ನು ತಾತ್ಕಾಲಿಕವಾಗಿಯಾದರೂ ಪಡೆಯಲಾರಂಭಿಸಿದರು.
ಹಿಮಾಚಲ ಪ್ರದೇಶದ ಲಾಂಘೀರಿನಲ್ಲಿ ಲಕ್ಷ್ಮಣರಾಯರು ತರಕಾರಿ ಕೊಂಡು ಬರಲು ಹೊರಟಿದ್ದರು. ಮಾರುಕಟ್ಟೆಯ ಬಳಿ ಹೋಗುತ್ತಿದ್ದಾಗ, ಎದುರು ಕಂಡ ಅಪರಿಚಿತನನ್ನು ದಾಟಿ ಮುಂದುವರೆದಾಗ, 'ಎಲ್ಲಿಯೋ ಕಂಡ ಮುಖ' ಎಂದನಿಸಿತು. ಯಾರು ಎಂದು ನಿಖರವಾಗಿ ನೆನಪಾಗಲಿಲ್ಲ. ಮುಂದೆ ಸಾಗಿದ್ದವರು ಹಿಂತಿರುಗಿ ಅಪರಿಚಿತನ ಬಳಿಗೆ ಬಂದರು. ಹಿಂತಿರುಗುವಾಗ, ನಾಲ್ಕು ತಿಂಗಳ ಹಿಂದೆ ಶೀನಪ್ಪನ ತಂದೆಯು ಬರೆದಿದ್ದ ಕಾಗದದ ನೆನಪೂ ಆಗಿತ್ತು. ಅಪರಿಚಿತನ ಬಳಿಗೆ ಬಂದು 'ಶೀನಪ್ಪಾ' ಎಂದು ಕೂಗಿದರು. ಯಾವ ಪ್ರತಿಕ್ರಿಯೆಯನ್ನೂ ಅಪರಿಚಿತ ವ್ಯಕ್ತಪಡಿಸಲಿಲ್ಲ. ಇನ್ನೂ ಹತ್ತಿರಕ್ಕೆ ಹೋಗಿ 'ಯಾರು ನೀವು? ನಿಮ್ಮನ್ನೆಲ್ಲಿಯೋ ಕಂಡ ನೆನಪು, ಹಾಸನದ ಕಡೆಯವರ ಹಾಗೆ ಕಾಣಿಸುತ್ತೀರಿ. ನಾನೂ ಅದೇ ಊರಿನವ, ಹೊಟ್ಟೆ ಪಾಡಿಗಾಗಿ ಉತ್ತರದ ಈ ಕೊಯ್ ಮೂಲೆಯಲ್ಲಿ ಇರಬೇಕಾಗಿದೆ. ನಮ್ಮ ಊರ ಕಡೆಯವರೇ ಎಂದು ಲಕ್ಷ್ಮಣರಾಯರು ಹೇಳಿದರು. 'ಹಾಸನ? ಅಂದರೆ ಅದು ಏನು?' ಎಂದು ಅಚ್ಚ ಕನ್ನಡದಲ್ಲಿ ಅಪರಿಚಿತ ನುಡಿದ. ಧ್ವನಿಯನ್ನು ಕೇಳಿದ ಮೇಲೆ, ಭಾವ ಮೈದುನ ಶೀನಪ್ಪನ ಧ್ವನಿಯೇ ಇದು ಎಂದು ಖಂಡಿತವಾಯಿತು. ನಾಲ್ಕು ತಿಂಗಳ ಹಿಂದೆಯೇನೋ ಶೀನಪ್ಪ ಇಲ್ಲಿಗೆ ಬಂದಿಲ್ಲ ಎಂದು ಊರಿಗೆ ತಂತಿಯನ್ನು ಕಳುಹಿಸಿದ್ದರು. ಇಷ್ಟು ದಿನಗಳಾದ ಮೇಲೆ ಇಲ್ಲಿಗೆ ಹೇಗೆ ಬಂದ ಎಂದು ಕುತೂಹಲವೂ ಉಂಟಾಗಿತ್ತು. 'ಬಾಪ್ಪ, ಶೀನಪ್ಪ, ನಮ್ಮ ಮನೆಗೆ ಹೋಗೋಣ' ಎಂದು ಕರೆದರು. ಅಪರಿಚಿತನಿಗೆ ಯಾವುದೂ ಅರ್ಥವಾದಂತೆ ಕಾಣಲಿಲ್ಲ ಆದರೂ ಯಾಂತ್ರಿಕವಾಗಿ ಲಕ್ಷ್ಮಣರಾಯರ ಜತೆಯಲ್ಲಿ ನಡೆದ. ಮನೆಗೆ ಹೋದ ಕೂಡಲೇ, ಶೀನಪ್ಪನನ್ನು ಕಂಡು ಅಕ್ಕ ಅತ್ತು ಅತ್ತು ಆದರರಿಂದ ಮಾತನಾಡಿಸಿದಳು. ಸ್ವಲ್ಪ ಹೊತ್ತಾದ ಮೇಲೆ ಶೀನಪ್ಪನ