೨೪೭
ಕಳೆದುಕೊಂಡಾಗ, ಹಿಂದಿನ ವಾಸ್ತವಿಕ ಬಾಳಿನ ಸ್ಮರಣೆಯು ಉಂಟಾಯಿತು.
ಎಲ್ಲೋ ಒಮ್ಮೊಮ್ಮೆ ಸಂಭವಿಸುವ ಈ ಬೇನೆಯು ನಮಗೂ ಎಂದೋ ಸಂಭವಿಸುತ್ತದೆ, ಎಂದು ಹಲವರು ಭೀತಿ ಪಡುತ್ತಾರೆ. ಅತಿ ವಿರಳವಾದುದು ಇದು ಎಂದು ತಿಳಿದಾಗ ; ಸುದೃಢ ಮನಸಿಗರಿಗೆ ಸಂಭವಿಸುವುದಿಲ್ಲ ಎಂದು ಖಚಿತವಾದಾಗ, ಶಂಕಿಸುವವರಿಗೆ ಸಮಾಧಾನವಾಗಬೇಕು. ಮನಸ್ಸಿನಲ್ಲಿ ಸ್ವಲ್ಪ ಕಾತರವು ಕಾಡಿದರೆ, ಆತಂಕವು ಕೊರೆಯಹತ್ತಿದರೆ, ಈ ಭಯವು ಉಲ್ಬಣಗೊಳ್ಳುತ್ತದೆ. ಭಯದಿಂದ ಆತಂಕವೂ ಇಮ್ಮಡಿಯಾಗುತ್ತದೆ. ಇಂತಹ ವಿಷಚಕ್ರದಿಂದ ಪಾರಾಗಲು ಭಯವನ್ನು ನಿರ್ಮೂಲಗೊಳಿಸಬೇಕು. ಬೇನೆಯ ಅರಿವಿನಿಂದಿದು ಸಾಧ್ಯ.
ಹಿಸ್ಟೀರಿಯಾಕ್ಕೆ ತುತ್ತಾದವರ ಮನಃಸ್ಥಿತಿಯೇ ಈ ಬೇನೆಗೂ ಆಧಾರವೆಂಬುದನ್ನು ತಿಳಿದರೆ ಮೊದಮೊದಲ ಸೂಚನೆಗಳನ್ನು ಸುಲಭವಾಗಿ ಗಮನಿಸಬಹುದು. ಇಂತಹ ಮನಃಸ್ಥಿತಿಯವರು ತಮ್ಮ ಭಾವ ರಾಗಗಳನ್ನು, ಪ್ರೀತಿ ದ್ವೇಷಗಳನ್ನು : ಕಲೆಯ ಯಾವುದಾದರೂ ಒಂದು ರೂಪಿನಲ್ಲಿ ಬಹಿರಂಗಪಡಿಸುವುದರ ಮೂಲಕ, ಬೇನೆಯು ಬಾರದಂತೆ ತಡೆಗಟ್ಟಬಹುದು. ಈ ತೆರನ ಮನಃಸ್ಥಿತಿಯವರಿಗೆ, ಕಲಾರೂಪಗಳಲ್ಲಿ, ನಾಟಕವು, ಮತ್ತು ಸಂಗೀತವು ತುಂಬಾ ಯಶಸ್ವಿಯಾಗುತ್ತದೆ. ಜನರ ಸಂಪರ್ಕವನ್ನು ನೇರವಾಗಿ ಹೊಂದುವ ಕಲಾರೂಪಗಳು ಈ ದೃಷ್ಟಿಯಲ್ಲಿ ತುಂಬಾ ಉಪಯುಕ್ತ. ಆದಕಾರಣ ನಾಟಕ, ಸಂಗೀತ, ಹರಿಕಥೆ, ಶಿವಕಥೆ ; ಇವು ಬಲು ಪ್ರಶಸ್ತ.