೮. ದೈಹಿಕ ಬೇನೆಗಳಿಂದ ಉಂಟಾಗುವ
ಮನೋರೋಗಗಳು
ಪ್ಲೇಗು, ವಿಷಮಶೀತಜ್ವರ, ದೊಡ್ಡ ಸಿಡುಬು ; ಇತ್ಯಾದಿ ಅತ್ಯುಗ್ರವಾದ ಕಾಯಿಲೆಗಳು ಬಡಿದಾಗ ರೋಗಿಗೆ ಸನ್ನಿ ಬಡಿಯುತ್ತದೆ. ಅಂದರೆ ಅವ ಹುಚ್ಚು ಹುಚ್ಚಾಗಿ ಅಸಂಬದ್ಧವಾಗಿ ಮಾತನಾಡುತ್ತಾನೆ. ಆದರೆ ಬೇನೆಯು ಇಳಿಮುಖವಾದಾಗ ಅವನ ಸನ್ನಿಯೂ ಇಳಿಯುತ್ತದೆ. ನಂತರ ಅವನ ಮನಸ್ಸು ಸ್ವಾಸ್ಥ್ಯವನ್ನು ಪಡೆಯುತ್ತದೆ. ಬೇನೆಯು ಉಲ್ಬಣವಾಗಿದ್ದಾಗ ಮನಸ್ಸ ಹುಚ್ಚೆದ್ದಂತೆ ಇದ್ದರೂ ; ಇವೆಲ್ಲಾ ಮನೋರೋಗಗಳು ಎಂದೆನಿಸಿಕೊಳ್ಳುವುದಿಲ್ಲ. ಏಕೆಂದರೆ ಮನಸ್ಸು ಸ್ವಸ್ಥವಾಗಿದ್ದರೂ, ದೇಹದ ಬೇನೆಯು ತಾಪದಿಂದ ಮತ್ತು ವಿಷದಿಂದ, ಕೆಟ್ಟಿದ್ದಂತೆ ತಾತ್ಕಾಲಿಕವಾಗಿ ವರ್ತಿಸುತ್ತದೆ.
ಆದರೆ ಕೆಲವು ದೈಹಿಕ ಲೋಪಗಳು ಅಥವಾ ಬೇನೆಗಳು, ಮನಸ್ಸಿನ ಬೆಳವಣಿಗೆಯಲ್ಲಿ ಹಾಗೂ ನಡವಳಿಕೆಯಲ್ಲಿ ಶಾಶ್ವತವಾದ ಏರುಪೇರುಗಳನ್ನು ಮಾಡುತ್ತದೆ. ಮನಸ್ಸು ಪಲ್ಲಟವಾದಂತೆಯೇ ಇವರು ನಡೆದುಕೊಳ್ಳುತ್ತಾರೆ. ಪೂರ್ಣ ಸ್ವಾಸ್ಥ್ಯವನ್ನು ಇವರು ಎಂದೂ ಪಡೆಯಲು ಸಾಧ್ಯವಿಲ್ಲ. ಈ ಚಿಕಿತ್ಸೆಯನ್ನು ಮಾಡಿಸೋಣ, ಆ ಪೂಜೆಯನ್ನು ಹಾಕಿಸೋಣ; ಪ್ರಸಿದ್ಧವಾದ ಆ ಯಾತ್ರಾಸ್ಥಳಕ್ಕೆ ಹೋಗೋಣ; ಎಂದು ವೃಥಾ ಶ್ರಮವನ್ನೂ ಹಣದ ದುರ್ವ್ಯಯವನ್ನೂ ಮಾಡುವಂತಾಗುತ್ತದೆ. ಇದನ್ನಾದರೂ ತಪ್ಪಿಸಿಕೊಳ್ಳಬಹುದು ; ವಿಷಯವನ್ನು ಸರಿಯಾಗಿ ಅರ್ಥಮಾಡಿಕೊಂಡರೆ, ತಿಳಿದುಕೊಂಡರೆ ; ಇಂತಹ ಮನೋರೋಗಗಳನ್ನು ಇನ್ನು ಮುಂದೆ ವಿವರಿಸಲಾಗುವುದು.
ಮಕ್ಕಳಲ್ಲಿ
ಐದು ವರ್ಷದ ಹೆಣ್ಣು ಮಗುವನ್ನು ಕರೆತಂದರು ಪರೀಕ್ಷೆಗೆಂದು. ಸರಿಯಾಗಿ ಬೆಳೆದಿಲ್ಲ. ಕೆಮ್ಮು ಕಸಾಲೆ ಮೇಲಿಂದ ಮೇಲೆ ಬರುತ್ತದೆ. ಪರೀಕ್ಷೆ ಮಾಡಿಸಿ, ಸೂಕ್ತ ಟಾನಿಕ್ ಕೊಡಿಸಬೇಕು ಎಂದು ಕರೆತಂದಿದ್ದರು. 'ಬಾ' ಎಂದು ಕರೆದಾಗ