೨೪೯
ನಗುನಗುತ್ತಾ ಡಾಕ್ಟರ ಹತ್ತಿರಕ್ಕೆ ಮಗು ಬಂದಿತು.
ತಾಯಿಯು ಕಂಚಿ ಕಡಸಿನ ತರಹ ಗಿಡ್ಡು. ಅಂದಮೇಲೆ ಮಗುವೂ ಗಿಡ್ಡಾಗಿದೆ. ಆದರೆ ಕಣ್ಣಿಗೆ ಕಾಣುವಂತೇನೂ ಬಡಕಲಾಗಿರಲಿಲ್ಲ. ಕಣ್ಣುಗಳು ಮಾತ್ರ ಚೀನಿಯರ ಕಣ್ಣುಗಳಂತೆ, ಬಂಗಾಳೀ ಚಿತ್ರಕಾರರ ಮೀನಾಕ್ಷಿಯರಂತೆ V ಹಾಗಿದ್ದುವು. ಹೊರ ತುದಿಯು ಒಳತುದಿಗಿಂತ ಮೇಲಕ್ಕಿತ್ತು. ಕಣ್ಣುಗಳ ಮೂಗಿನ ಕಡೆಯ ತುದಿಯಲ್ಲಿ ತೆಳು ಪೊರೆಯ ದುರ್ಮಾಂಸವು ಇತ್ತು.
ಮಗುವು ಹತ್ತಿರಕ್ಕೆ ಬಂದಿತು. ಕೇಳಿದ ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ಕೊಡುತ್ತಿತ್ತು. ಪೆಚ್ಚು ಪೆಚ್ಚಾಗಿ ಏನೂ ಉತ್ತರಿಸಲಿಲ್ಲ. ಕೆಲವು ಮಕ್ಕಳು ಅತಿ ನಾಚಿಕೆಯಿಂದ, ಬಲು ಸಂಕೋಚದಿಂದ ಹೊಸಬರೊಡನೆ ಮಾತನಾಡುತ್ತವೆ. ಆದರೆ ಈ ಮಗು ಹಾಗಲ್ಲ. ಸದರದಿಂದಲೇ ಮಾತನಾಡುತ್ತಿತ್ತು.
ದೇಹಪರೀಕ್ಷೆಯನ್ನು ಮಾಡಿದಾಗ ಹೃದಯದಲ್ಲೂ ಹುಟ್ಟು ಲೋಪವು ಇದ್ದುದು ಪತ್ತೆಯಾಯಿತು. ಇವೆಲ್ಲಾ ಚಿಹ್ನೆಗಳು (Down's Syndrome) ಬೇನೆ ಎಂದು ಸ್ಪಷ್ಟ ಮಾಡಿದುವು.
ತಾಯ ಗರ್ಭದಲ್ಲಿ ಇಂತಹ ಮಕ್ಕಳು ಬೆಳೆಯುವಾಗ, ಮೆದುಳಿನ ಬುಡದ ಭಾಗದಲ್ಲಿ; ಹೃದಯದಲ್ಲಿ; ಹಾಗೂ ಪಿಟ್ಯೂಟರಿ ಗ್ರಂಥಿಯಲ್ಲಿ ವಯಸ್ಸಿಗೆ ತಕ್ಕ ಬೆಳವಣಿಗೆಯು ಕಾರಣಾಂತರಗಳಿಂದ ಸ್ತಬ್ಧವಾಗಿರುತ್ತದೆ. ಮಗುವು ಮುಂದೆ ಬೆಳೆಯುವಾಗ ಜನ್ಮ ತಾಳಿದ ಮೇಲೆ ಬೆಳೆಯುವಾಗ, ಹುಟ್ಟು ದೋಷದಿಂದಾಗಿ ಆ ಭಾಗಗಳು ವೃದ್ಧಿಯಾಗುವುದಿಲ್ಲ. ಹಾಗಾಗಿ ಒಟ್ಟು ಬೆಳವಣಿಗೆಯೂ ಕುಂಟುತ್ತದೆ. ಅಲ್ಲದೆ ಮನಸ್ಸು ಅಣಿಯಾಗಿ ರೂಪುಗೊಳ್ಳುವುದಿಲ್ಲ. ಸಾಮಾನ್ಯವಾಗಿ ಇಂತಹ ಮಕ್ಕಳ ಬಾಳು ಎರಡು ಮೂರು ದಶಕಗಳಷ್ಟು ಮಾತ್ರ
ವಿದ್ಯಾಭ್ಯಾಸವನ್ನು ಮಾಡಿಸುವಾಗ, ಬಲು ಎಚ್ಚರವನ್ನು ವಹಿಸಬೇಕು. ಎಲ್ಲ ಮಕ್ಕಳಂತೆ ಬೇಗ ಕಲಿಯಲಿಲ್ಲ ಎಂದು ಶಿಕ್ಷೆ ಮಾಡಿದರೆ, ಅಟ್ಟದ ಮೇಲಿಂದ ಬಿದ್ದು ಗಾಯಗೊಂಡವರನ್ನು ಶಿಕ್ಷಿಸಿದಂತಾಗುತ್ತದೆ. ತಾಳ್ಮೆಯಿಂದ ಸಾಧ್ಯವಾದಷ್ಟು ವಿದ್ಯೆಯನ್ನು ಕಲಿಸಬೇಕು. ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಇಂತಹ ಮಕ್ಕಳಿಗಾಗಿ ಪ್ರತ್ಯೇಕವಾದ ವಿದ್ಯಾಭ್ಯಾಸ ಕ್ರಮಗಳಿವೆ.
'ನಮ್ಮ ಮಗು ಸ್ವಲ್ಪ ಪೆಚ್ಚು. ಆದರೆ ಎಲ್ಲರಂತೆಯೆ ಸಂಸಾರವನ್ನು ಮಾಡಿಕೊಂಡಿರುತ್ತದೆ' ಎಂದು ತಾಯ್ತಂದೆಯರು ಅಂದುಕೊಳ್ಳುತ್ತಾರೆ. 'ಪ್ರಾಪ್ತವಯಸ್ಸಿನಲ್ಲಿ ಸಾಧ್ಯವಾದರೆ ಮದುವೆಯನ್ನೂ ಮಾಡಿಬಿಡುತ್ತಾರೆ' ಹೇಗೋ ಸಂಸಾರವನ್ನು ನಿಭಾಯಿಸುತ್ತಾಳೆ ಎಂದು ಆಸೆ ಪಡುತ್ತಾರೆ.