ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೨೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೨೫೦

ಮನಮಂಥನ

'ಪೆದ್ದು ಹೆಣ್ಣು ; ಬಡಿದರೆ ಬುದ್ಧಿ ಬರುತ್ತದೆ' ಎಂದು ಗಂಡನ ಮನೆಯವರು ನಡೆದುಕೊಳ್ಳುತ್ತಾರೆ. ದಿಟವಾಗಿಯೂ ಇಂತಹ ಮಕ್ಕಳ ಭವಿಷ್ಯವು ಶೋಚನೀಯ ಅಲ್ಪಾಯುಗಳಾದುದೊಂದೇ ದೇವರ ಕೃಪೆ.

ಮಗುವಿನ ತಾಯ್ತಂದೆಯರನ್ನು ಕರೆಸಿ, ಇದ್ದ ವಿಷಯವನ್ನು ಸ್ಪಷ್ಟವಾಗಿ ವಿವರಿಸಲಾಯಿತು. 'ಗರ್ಭದಲ್ಲಿದ್ದಾಗಲೇ ಈ ನ್ಯೂನತೆಗಳು ಸಂಭವಿಸಿದವು. ಇದನ್ನು ಸರಿಪಡಿಸುವಂತಹ ಜ್ಞಾನವು ವೈದ್ಯವಿಜ್ಞಾನದಲ್ಲಿ ಇನ್ನೂ ಸಾಧಿತವಾಗಿಲ್ಲ. ಚಿಕಿತ್ಸೆ ಮಾಡಿಸಿದರೆ ಮುಂದೆ ಎಲ್ಲರಂತೆ ಈ ಮಗುವೂ ಬೆಳೆಯುತ್ತದೆ ಎಂದು ನಂಬ ಕೂಡದು. ಮೆದುಳಿನಲ್ಲಿರುವ ದೋಷದಿಂದ ಮಗುವು ಪೆದ್ದುಪೆದ್ದಾಗಿಯೇ ಇರುತ್ತದೆ. ಮನೆಪಾಠಗಳನ್ನಿಟ್ಟು ಕಲಿಸುತ್ತೀವಿ ಎಂದು ಆಸೆ ಇಟ್ಟುಕೊಳ್ಳಬೇಡಿ. ಹೃದಯದಲ್ಲಿ ಇಂತಹ ಹುಟ್ಟು ದೋಷವಿದೆ. ಅದರಿಂದಾಗಿ ಆಗಾಗ್ಗೆ ಕೆಮ್ಮು, ಜ್ವರ, ಉಬ್ಬಸ, ಇತ್ಯಾದಿ ಶ್ವಾಸಕೋಶದ ಬೇನೆಗಳು ಬರುತ್ತವೆ. ಸೂಕ್ತ ಚಿಕಿತ್ಸೆಯನ್ನು ತತ್‌ಕ್ಷಣ ಕೊಡಿಸಬೇಕು.

ಪಿಟ್ಯೂಟರಿ ದೋಷದಿಂದಾಗಿ ಹಾರ್ಮೋನುಗಳ ಅವ್ಯವಸ್ಥೆಯು ಇರುತ್ತದೆ. ಅದರಿಂದಾಗಿ ಬೆಳವಣಿಗೆಯಲ್ಲೂ ನ್ಯೂನತೆಗಳಿರುತ್ತವೆ. ಇವೆಲ್ಲಾ ಟಾನಿಕ್‌ಗಳಿಂದ ಸರಿಹೋಗುವುದಿಲ್ಲ. ವೃಥಾ ಹಣವನ್ನು ಲೋಪ ಮಾಡಬೇಡಿ, ಇಲ್ಲದ ಅನಿಷ್ಟಗಳನ್ನು ತರಹಾವಾರಿ ಔಷಧಿಗಳಿಂದ ತರಿಸಬೇಡಿ.

ಇದೂ ಒಂದು ಗಂಡು ಮಗು ಎಂದು ತಿಳಿದುಕೊಂಡು ಮನೆಯಲ್ಲಿಯೇ ಇರುವಂತೆ ಏರ್ಪಾಡುಗಳನ್ನು ಮಾಡಿ, ಮದುವೆಗಿದುವೆಯ ಯೋಚನೆಯನ್ನು ಮಾಡಬೇಡಿ,

ಎಂದು ವಿಶದವಾಗಿ ಹೇಳಲಾಯಿತು.

ದೈಹಿಕವಾದ ಹುಟ್ಟು ದೋಷದಿಂದ ಉಂಟಾಗುವ ಈ ಬೇನೆಯನ್ನು ಮನೋರೋಗ ಎಂದು ಕರೆಯಬಾರದು. ಆದರೂ ಮನಸ್ಸಿನ ಪೆದ್ದುತನವೇ ರೋಗದ ಪ್ರಮುಖ ಚಿಹ್ನೆಯಾದುದರಿಂದ, ಸುಲಭವಾಗಿ ತಿಳಿದುಕೊಳ್ಳವುದಕ್ಕಾಗಿ ಆ ಗುಂಪಿನಲ್ಲಿ ಉಲ್ಲೇಖಿಸಬಹುದು.

ಮೆನಿಂಜೈಟಿಸ್

ಮೆದುಳು ಮತ್ತು ಮೆದುಳಿನ ಹೊರಪೊರೆಗಳಿಗೆ ವೈರಸ್ಸುಗಳು ಬ್ಯಾಕ್ಟಿರಿಯಾಗಳು ಸೋಂಕಿಕೊಂಡು, ಜ್ವರ, ಸೆಳೆವು, ಜ್ಞಾನಾಜ್ಞಾನ ಇತ್ಯಾದಿಗಳು ಉಂಟಾಗುತ್ತವೆ. ಮೆನಿಂಜೈಟಿಸ್ ಎಂದು ಈ ಬೇನೆಗಳನ್ನು ಕರೆಯುತ್ತಾರೆ.