ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮನಮಂಥನ

ಅತಿಯಾದಂತೆ ಭಾಸವಾಗುತ್ತದೆ. ಚೇಳನ್ನೇ ದಿಟ್ಟಿಸಿ ನೋಡುತ್ತಾ ಇದ್ದರೆ, ಒಮ್ಮೊಮ್ಮೆ ಅದು ನಮ್ಮ ಕಣ್ಣೆದುರಿಗೇ ದೊಡ್ಡದಾಗುತ್ತಿರುವಂತೆ ಭಾಸವಾಗುವುದಿಲ್ಲವೇ ? ಹಾಗೆಯೇ. ಉಸಿರಾಡುವ ಕಾರ್ಯದಲ್ಲಿ ಆತಂಕವು ಯಾವ ಯಾವ ರೀತಿಯಲ್ಲಿ ಎಂತೆಂತಹ ವ್ಯತ್ಯಾಸಗಳನ್ನು ಕಾಣಿಸಬಹುದು ಎಂಬುದನ್ನು ನಿದರ್ಶನಗಳೊಂದಿಗೆ ಪರಿಶೀಲಿಸೋಣ.

೧. ಸಿಕ್ಕಿಕೊಂಡ ಉಸಿರು

ಎಷ್ಟು ಚೆನ್ನಾಗಿ ಬೆಳೆದಿದ್ದ, ಅಂತ. ಸುಮಾರು ೧೮ರ ಪ್ರಾಯ. ಗರಡಿ ಮನೆಯ ವಸ್ತಾದ್‌ನಂತಿದ್ದ. ಅಂದರೆ ಠೊಣಪ ಅಂತಲ್ಲ. ಗ್ರೀಕೋ ರೋಮನ್ ಸ್ಟೈಲ್ ಕುಸ್ತಿ ಮಾಡುತ್ತಾರಲ್ಲ, ಅಂತಹ ಜಟ್ಟಿಗಳ ಮೈಕಟ್ಟು, ತೋಳನ್ನು ಅವ ಬಿಗಿದು, ಬೈಸೆಪ್ಟ್ ಮಾಂಸಖಂಡಗಳನ್ನು, ಎಳೆಎಳೆಯಾಗಿ, ಕಂತೆಕಂತೆಗಳಾಗಿ ಕುಣಿಸುತ್ತಿದ್ದ. ಕಾಲೇಜಿನಲ್ಲಿ ಓದುತ್ತಿದ್ದ ಹುಡುಗ, ಆಟ ಅಥ್ಲೆಟಿಕ್ಸ್‌ಗಳಲ್ಲಿ ಆಸಕ್ತಿ ಇದ್ದವ. ಗರಡಿಯ ಮನೆಗೆ ಹೋಗದೇ ಇದ್ದರೂ ಕಡೆದ ಪ್ರತಿಮೆಯಂತಹ ದೇಹವನ್ನು ಪಡೆದಿದ್ದ.

ಮನೆಯಲ್ಲಿ ನಾಲ್ಕು ಹೆಣ್ಣು ಮಕ್ಕಳ ಮಧ್ಯೆ ಇವನೊಬ್ಬನೇ ಗಂಡು ಮಗ. ಏಕೈಕ ಕುಮಾರ ಕಂಠೀರವ-ತುಂಬಾ ಆರೈಕೆಯನ್ನು ಮಾಡಿ ಆದರದಿಂದ ಪಿಳಿಪಿಳಿ ನೋಡುವ ತಾಯಿ, ಮಗನನ್ನು ಕಂಡು ಹೆಮ್ಮೆ ಪಡುವ ತಂದೆ. ಅಕ್ಕತಂಗಿಯರ ಅಕ್ಕರೆಯನ್ನು ಕೇಳಬೇಕೆ?

ತೋಳ ಬೆಳೆದ ಹಾಗೆ ಬೆಳೆದಿದ್ದ. ಬಯಸಿದ್ದನ್ನೆಲ್ಲಾ ಪಡೆಯುತ್ತಿದ್ದ.

ಇಂತಹ ಯುವಕ ಅಪ್ಪನನ್ನು ಕರೆದುಕೊಂಡು ದವಾಖಾನೆಗೆ ಬಂದಾಗ, ನಗು ನಗುತ್ತಲೇ ಇದ್ದ. ಬೇನೆ ಬಿದ್ದವನ ಹಾಗೆ ಇವನೇನೂ ಕಾಣಿಸುವುದಿಲ್ಲವೆ! ಯಾವುದಾದರೂ ಕಾಲೇಜಿನಲ್ಲಿ ಪ್ರವೇಶವನ್ನು ದೊರಕಿಸಿಕೊಳ್ಳಲು ನನ್ನ ಪ್ರಭಾವ ಅಗತ್ಯ ಎಂದೇನಾದರೂ ಬಂದಿದ್ದಾನೋ ಎಂದು ಅರೆಕ್ಷಣ ಅನ್ನಿಸಿತು.

ಅಷ್ಟರಲ್ಲಿ ಅವನ ತಂದೆಯೇ ಪ್ರಾರಂಭಿಸಿದರು. 'ನೋಡಿ, ಡಾಕ್ಟರೇ ! ಕಳೆದ ಆರು ತಿಂಗಳುಗಳಿಂದ ಮನೆಯಲ್ಲಿ ಎಲ್ಲರ ಪ್ರಾಣವನ್ನೂ ತೆಗೀತಿದ್ದಾನೆ. ಅದಕ್ಕೆ ಮೊದಲು ಇಂತಹ ಒಳ್ಳೆಯಮಗ ಯಾರಿಗೆ ತಾನೆ ಇದ್ದಾನೆ ಎಂದು ಹೆಮ್ಮೆಪಟ್ಟುಕೊಳ್ಳುತ್ತಿದ್ದೆವು. ನನ್ನ ಕೈಲಾದ ಚಿಕಿತ್ಸೆಗಳನ್ನೆಲ್ಲಾ ಮಾಡಿಸಿದೆ. ಎಷ್ಟೋ ಹಣವನ್ನು ಖರ್ಚುಮಾಡಿದೆ. ಒಂದು ಎಳ್ಳು ಕಾಳಷ್ಟು ಪ್ರಯೋಜನವಾಗಲಿಲ್ಲ. ನನಗೆ ಎಳ್ಳುನೀರು ಬಿಟ್ಟಮೇಲೆಯೇ ಇವನಿಗೆ ಸರಿಹೋಗುವುದು ಅಂತ ಕಾಣಿಸುತ್ತೆ.'