ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೨೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ದೈಹಿಕ ಬೇನೆಗಳಿಂದ ಉಂಟಾಗುವ ಮನೋರೋಗಗಳು

೨೫೧

ಮೆನಿಂಜೀಸ್:- ಮೆದುಳಿನ ಹೊರಗಿರುವ ರಕ್ಷಣಾ ಪೊರೆಗಳು. ಇವುಗಳಿಗೆ ಸೋಂಕಿ ಕಾಡುವ ಬೇನೆಗಳನ್ನು ಮೆನಿಂಜೈಟಿಸ್ ಎನ್ನುತ್ತಾರೆ.

ಮೂರು ವರ್ಷದ ಲಚ್ಚುವಿಗೆ ಹಠಾತ್ತನೆ ಒಂದು ದಿನ ಕೆಂಡಾಮಂಡಲ ಜ್ವರವು ಬಂತು. ಮೂರು ನಾಲ್ಕು ತಾಸುಗಳಲ್ಲಿ ಉಗ್ರವಾದ ಮೂರ್ಛಯೂ ಎರಡು ಮೂರು ಸಾರಿ ಬಂದಿತು. ತತ್‌ಕ್ಷಣ ಆಸ್ಪತ್ರೆಗೆ ಸೇರಿಸಿದರು. ಅಗತ್ಯ ಚಿಕಿತ್ಸೆಯೂ ಸಕಾಲದಲ್ಲಿ ದೊರಕಿತು. ಆರು ದಿನಗಳಾದ ಮೇಲೆ ಜ್ಞಾನ ಬಂತು. ಜ್ವರವೂ ಇಳಿದಿತ್ತು. ಹದಿನೈದು ದಿನಗಳಾದ ಮೇಲೆ ಮನೆಗೆ ಕರೆದುಕೊಂಡು ಬಂದರು.

ಎಂಟು ವರ್ಷದ ಮಗುವಾದಾಗ ದಂಟು ಎನ್ನಲು ಕಲಿಯಲಿಲ್ಲ. ಈ ಮಧ್ಯೆ ಆಗೊಮ್ಮೆ ಈಗೊಮ್ಮೆ ಮೂರ್ಛಯು ಬರುತ್ತಿತ್ತು. ಅದಕ್ಕೆಂದು ಔಷಧಿಗಳನ್ನು ಸತತವಾಗಿ ಕೊಡುತ್ತಲೇ ಇದ್ದರು.

ಮಗುವಿನ ಮನಸ್ಸು ದೇಹದ ಜತೆಗೆ ಸರಿಯಾಗಿ ಬೆಳೆಯಲೇ ಇಲ್ಲ. ತಡವರಿಸಿಕೊಂಡು ತೊದಲುತ್ತಾ ಎರಡು ಮಾತಾಡುತ್ತಿದ್ದ ಲಚ್ಚು ಹೆಸರು ಕೂಗಿದರೆ ಅತ್ತ ನೋಡುತ್ತಲಿದ್ದ. ಮನೆಯವರನ್ನು ಗುರುತಿಸುತ್ತಿದ್ದ. ಅಷ್ಟಕ್ಕೇ ಮುಗಿಯಿತು, ಅವನ ಮನಸ್ಸಿನ ಮುಂದೋಟ.

ಮೆನಿಂಜೈಟಿಸ್ ಬಂದಾಗ, ಮೂರ್ಛಗಳು ಯದ್ವಾತದ್ವಾ ಬಡಿದಾಗ, ಜ್ವರದ ತಾಪವು ಅತಿಯಾಗಿದ್ದಾಗ ಮೆದುಳಿನ ಕೆಲಭಾಗಗಳಲ್ಲಿ ಅಲ್ಪಸ್ವಲ್ಪ ರಕ್ತ ಸ್ರಾವವಾಗಬಹುದು. ಕಾಲಾನುಕಾಲದಲ್ಲಿ ಹೆಪ್ಪುಗಟ್ಟಿಕೊಂಡು ಮೆದುಳಿನ ನೆರೆ ಭಾಗಗಳನ್ನು ಒತ್ತಿ ಅಲ್ಲಿನ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ. ಅಂದಮೇಲೆ ಮನಸ್ಸಿಗೆ ಆಧಾರವಾದ ಮೆದುಳು ಅಜ್ಜಿಬಜ್ಜಿಯಾದರೆ, ಮನಸ್ಸು ತಾನೇ ಹೇಗೆ ಬೆಳೆಯಲು ಸಾಧ್ಯ !

ಲಚ್ಚುವಿಗೆ ಮನೋರೋಗವಿದೆ ಎಂದು ಹೇಳುವಂತಿಲ್ಲ. ಮೆದುಳಿಗೆ ಬಡಿದ ಧಕ್ಕೆಯಿಂದಾಗಿ ಅವನ ಮನಸ್ಸಿನ ಬೆಳವಣಿಗೆಯು ಸ್ತಬ್ಧವಾಗಿದೆ. ಹೆಡ್ಡನಂತೆ ನಡೆದುಕೊಳ್ಳುತ್ತಾನೆ. ಆದರೆ ಅದನ್ನು ಸರಿಪಡಿಸುವ ವಿಧಾನಗಳು ಇನ್ನೂ ಕಂಡು ಹಿಡಿಯಲ್ಪಟ್ಟಿಲ್ಲ. ಉಪಶಮನದ ಚಿಕಿತ್ಸೆಗಳೇ ಗತಿ.

ಮುಪ್ಪಿನಲ್ಲಿ

ಚೆನ್ನಾಗಿ ಬಾಳಿ ಬದುಕಿದವರು ಸಂಪಂಗಿರಾಮಯ್ಯನವರು. ಅರವತ್ತಾರರ ಪ್ರಾಯವಾದರೂ ಲಕ್ಷಣವಾಗಿ ಉಂಡು ಜೀರ್ಣಿಸಿಕೊಳ್ಳುತ್ತಿದ್ದರು. ಬೆಳೆದ ಮಕ್ಕಳೆಲ್ಲರೂ ಸಾಕಷ್ಟು ಸಂಪಾದಿಸಿಕೊಂಡಿದ್ದರು. ವಿಭೂತಿ, ದೇವರ ಪೂಜೆ,