ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೨೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೨೫೨

ಮನಮಂಥನ

ಅಭಿಷೇಕ, ಅಂತ ಸುಮಾರು ಹೊತ್ತು ಕಳೆಯುತ್ತಿದ್ದರೂ ಪುಣ್ಯಾತ್ಮ ಏಳುತ್ತಿದ್ದುದು ಬೆಳಿಗ್ಗೆ ಏಳರ ಮೇಲೆಯೇ. ಅನಂತರ ಕಾಫಿ, ನಂತರ ಸ್ನಾನ, ಆಮೇಲೆ ದೇವರಪೂಜೆ, ಆರಾಮವಾಗಿ ಪೂಜೆಯನ್ನು ಮಾಡಿ, ನಂತರ ದೇವರಂತೆ ತಾನೂ ವಿಶ್ರಾಂತಿ ಪಡೆದು, ಊಟಕ್ಕೇಳುತ್ತಿದ್ದ ರಿಟಾಯ್‌ರ್ಡ್ ಆಫೀಸರು.

ಇತ್ತಿಂದೀಚೆಗೆ ಎಲ್ಲರ ಮೇಲೂ, ಸಣ್ಣಪುಟ್ಟ ಕಾರಣಗಳಿಗೆಲ್ಲಾ ಸಿಡುಕಾಡುವುದು ಹೆಚ್ಚಾಗುತ್ತ ಬಂದಿತು. ನಾಳೆ ಗಣೇಶನ ಹಬ್ಬ, ಬೆಳಿಗ್ಗೆ ಎಂಟರ ಹೊತ್ತಿಗಾದರೂ ಪುರೋಹಿತರು ಬಂದರೆ, ಬೇಗ ಪೂಜೆ ಮುಗಿಸಿ ಕಾಫಿ ಕುಡಿಯಬಹುದು ; ಹೇಳಿದ ಹೊತ್ತಿಗೆ ಬರುತ್ತಾರೋ ಇಲ್ಲವೋ, ಎಷ್ಟು ಮನೆಗಳಿಗೆ ಪೂಜೆ ಮಾಡಿಸಲು ಒಪ್ಪಿಕೊಂಡಿದ್ದಾರೋ? ಹೀಗೆ ಹಿಂದಿನ ಸಂಜೆಯಿಂದ ತರಪರಗುಟ್ಟಲು ಆರಂಭಿಸಿದ್ದರು. ತಾವೆಲ್ಲಾ ಏರ್ಪಾಡನ್ನು ಸರಿಯಾಗಿ ಮಾಡಿದ್ದೀವಿ, ಎಂದು ಬೆಳೆದ ಮಕ್ಕಳು ಎಷ್ಟು ಹೇಳಿದರೂ, ಸಮಾಧಾನ ಹೊಂದುತ್ತಿರಲಿಲ್ಲ. ಸರಿಯಾಗಿ ನಿದ್ರೆ ಬರುಲ್ಲ ಅಂತ ಡಾಕ್ಟರ ಬಳಿಗೆ ಹೋಗಿ ನಿದ್ರೆ ಗುಳಿಗೆಗಳನ್ನು ತಂದಿಟ್ಟುಕೊಂಡಿದ್ದರು. ಇಂತಹ ಗುಳಿಗೆಗಳಿಂದ ಮುಂದೆ ದೇಹಾರೋಗ್ಯಕ್ಕೆ ಅಪಾಯವಾಗಬಹುದು ಎಂದುಕೊಂಡು ಅವನ್ನು ಸೇವಿಸದೆ ಹಾಗೆಯೇ ಇಟ್ಟಿದ್ದರು. ಎಲ್ಲದರಲ್ಲಿಯೂ ಅನುಮಾನ, ಯಾವುದಕ್ಕೂ ಸಂದೇಹ. ಮನೆಯವರಿಗೆಲ್ಲಾ ಬೇಸರ ತುಂಬುವಂತಾಗಿತ್ತು. ಹಿರಿಯರು, ನಮ್ಮನ್ನೆಲ್ಲ ವಿಶ್ವಾಸದಿಂದ ಸಾಕಿ ಸಲಹಿದವರು, ಎಂಬ ಕೃತಜ್ಞತೆಯಿಂದಾಗಿ, ಮಕ್ಕಳು ಬೇಸರವನ್ನು ಪ್ರದರ್ಶಿಸುತ್ತಿರಲಿಲ್ಲ.

ಐದಾರು ತಿಂಗಳುಗಳಲ್ಲಿ ಬಹಳಷ್ಟು ಬದಲಾವಣೆಯು ಅವರಲ್ಲಿ ಕಂಡು ಬಂದಿತು. 'ಬ್ಲಡ್‌ಪ್ರೆಷರ್ ಹೆಚ್ಚಾಗಿದೆಯಂತೆ ನನಗೆ, ಉಪ್ಪು ಕಡಿಮೆ ಮಾಡು ಎಂದರು ಡಾಕ್ಟರು' ಎಂದು ಹೇಳಿ ಉಪ್ಪನ್ನು ಬಿಟ್ಟರು. ಊಟವೂ ಕಡಿಮೆಯಾಯಿತು. ದೇಹವೂ ಕೃಶವಾಗತೊಡಗಿತು. ಅದಕ್ಕಿಂತ ಹೆಚ್ಚಾಗಿ ಅವರ ವರ್ತನೆಯು ವಿಚಿತ್ರವಾಗತೊಡಗಿತು. ಮರೆವು ಅತಿಯಾಯಿತು. ರಾತ್ರಿ ಎರಡು ಗಂಟೆಗೆ ಎದ್ದು, ದೀಪ ಹಚ್ಚಿಕೊಂಡು ಕ್ಷೌರ ಮಾಡಿಕೊಳ್ಳಲು ಒಮ್ಮೆ ಶುರು ಮಾಡಿದರು. 'ಇದೇನೂ ಅಂದ್ರೆ, ಈ ಅವೇಳೆಯಲ್ಲಿ ಕ್ಷೌರ, ಬೆಳಗಾದ ಮೇಲೆ ಮಾಡಿಕೊಳ್ಳಬಾರದೆ ಎಂದು ಹೆಂಡತಿಯು ಹೇಳಿದಾಗ, “ನೀನು ಮುದುಕಿಯಾದೆ, ಅರಳುಮರಳು, ಈಗಾಗಲೇ ಆರು ಗಂಟೆಯಾಗುತ್ತಾ ಬಂತಲ್ಲೇ' ಅಂತ ದಬಾಯಿಸಿದರು. ಹಗಲು ರಾತ್ರಿ ಅನ್ನುವುದರಲ್ಲಿ ತಪ್ಪು ಮಾಡದೇ ಇದ್ದರೂ, ಹೊತ್ತುಗೊತ್ತುಗಳನ್ನು ಗುರುತಿಸುತ್ತಿರಲಿಲ್ಲ.