ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೨೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ದೈಹಿಕ ಬೇನೆಗಳಿಂದ ಉಂಟಾಗುವ ಮನೋರೋಗಗಳು

೨೫೩

ಮನೆಯ ಹತ್ತಿರವೇ ಇದ್ದ ತುಳಸೀತೋಟಕ್ಕೆ ಅಡ್ಡಾಡಿ ಬರೋಣ ಎಂದೊಮ್ಮೆಹೋದರು. ಸುಮಾರು ಎರಡು ಫರ್ಲಾಂಗ್ ದೂರವಿರಬಹುದು. ಎರಡು ರಸ್ತೆಗಳನ್ನು ದಾಟಬೇಕು. ಎಷ್ಟೋ ಸಾರಿ ಹೋಗಿ ಬಂದಿದ್ದರು. ಆದರೆ ಆ ದಿನ ತೋಟಕ್ಕೆ ಹೋದರು. ಹಿಂತಿರುಗಿ ಮನೆಗೆ ಹೋಗಬೇಕು ! ಆದರೆ ದಾರಿ ಗೊತ್ತಾಗಲಿಲ್ಲ. ಎಲ್ಲಿದೆ ನನ್ನ ಮನೆ? ಎಂದು ಎಷ್ಟೋ ಯೋಚಿಸಿದರು. ದಿಕ್ಕು ತೋರಲಿಲ್ಲ. 'ಇದೇನು ಅಜ್ಜಯ್ಯ, ಇಲ್ಲಿ ನಿಂತಿದ್ದೀರಿ, ಅಷ್ಟು ಹೊತ್ತಿನಿಂದ ಒಬ್ಬರೆ' ಎಂದು ಹತ್ತುವರ್ಷದ ಹುಡುಗಿಯೊಬ್ಬಳು ಹತ್ತಿರಬಂದು ಕೇಳಿದಳು, 'ನೀನ್ಯಾರಮ್ಮ ! ನನ್ನ ಪರಿಚಯ ನಿನಗುಂಟೇ' ಎಂದು ಕೇಳಿದರು' 'ನಿಮ್ಮ ಮೊಮ್ಮಗಳು ಉಷಾ ನನ್ನ ಕ್ಲಾಸ್‌ಮೇಟ್' ಎಂದಳು ಆ ಹುಡುಗಿ. 'ಹಾಗಾದರೆ ನಮ್ಮನೆ ಎಲ್ಲಿದೆ ಗೊತ್ತೇ' ಎಂದರು. ಕ್ಯೂ ಅಂದಿತು ಹುಡುಗಿ, 'ರಸ್ತೆ ಮರೆತು ಹೋಗಿದೆ, ಮನೆಯದಾರಿ ತೋರಿಸುತ್ತೀಯಾ' ಎಂದು ಕೇಳಿದರು. ಆ ಹುಡುಗಿ ಕರೆದುಕೊಂಡು ಬಂದು ಮನೆ ಸೇರಿಸಿತು. ಮರವು ಈ ಹಂತವನ್ನು ಮುಟ್ಟಿತ್ತು.

ಇನ್ನೊಂದೆರಡು ತಿಂಗಳುಗಳಾದವು. ಅಸಂಬದ್ಧವಾಗಿ ಮಾತನಾಡುವುದು ಶುರುವಾಯಿತು. ಮಕ್ಕಳನ್ನು ಗುರುತಿಸುವುದರಲ್ಲಿಯೂ ತಪ್ಪು ಮಾಡಲಾರಂಭಿಸಿದರು. ಸಿಡುಕಾಡುವುದು ಅತಿಯಾಯಿತು. ಒಂದು ಬೆಳಗ್ಗೆ ಕಾಫಿಯನ್ನು ಮಗ ತಂದುಕೊಟ್ಟ ಅವನ ಕುತ್ತಿಗೆಯನ್ನು ಬಲವಾಗಿ ಹಿಡಿದುಕೊಂಡು ಅದುಮತೊಡಗಿದರು. ಒಂದು ನಿಮಿಷ ಮಗ ದಿಗ್ಗಾಂತನಾದ, ನಂತರ ತಂದೆಯ ಕೈಗಳನ್ನು ರೂಡಿಸಿ ಒಗೆದ. ಮನೆಯವರು ಆ ವೇಳೆಗೆ ಗದ್ದಲವನ್ನು ಕೇಳಿ ಕೊಠಡಿಗೆ ಬಂದಿದ್ದರು. 'ಇದು ಯಾಕೆ ಹೀಗಾಡ್ತಾ ಇದ್ದಾರೆ. ಹುಚ್ಚುಗಿಚ್ಚು ಹಿಡಿದಿದೆಯೇನೋ?' ಎಂದು ಹೆಂಡತಿ ಬೊಬ್ಬೆ ಹೊಡೆಯಲಾರಂಭಿಸಿದಳು. ಮಗನಿಗೂ ಹೆದರಿಕೆಯಾಗಿತ್ತು. ನನಗೆ ಮಾಡಿದಂತೆ ಮಕ್ಕಳ ಮೇಲೆ ಕೈಮಾಡಿದರೆ, ಅವು ಉಳಿಯಕ್ಕಾಗುತ್ತೆ ಎಂಬ ಭಯ. ಕಾರಣ, ಮಾನಸಿಕ ಆಸ್ಪತ್ರೆಗೆ ಜರೂರಾಗಿ ಸೇರಿಸಿದರು.

ಸಂಪಂಗಿರಾಮಯ್ಯನವರ ಮೆದುಳು, ಹಲವಾರು ಕಾರಣಗಳಿಂದ ಶಿಥಿಲವಾಗ ತೊಡಗಿತ್ತು. ಮೊದಮೊದಲು ವಿಚಿತ್ರವಾಗಿ ವರ್ತಿಸತೊಡಗಿದರು. ಶಿಥಿಲತೆಯು ಮೆದುಳಿನಲ್ಲಿ ಹೆಚ್ಚಾದಾಗ, ಮರೆವು ಅತಿಯಾಯಿತು. ಅಸಂಬದ್ಧವಾಗಿ ಮಾತನಾಡಲಾರಂಭಿಸಿದರು. ಶಿಥಿಲತೆಯು ಇನ್ನೂ ಹೆಚ್ಚಾದಾಗ, ಹುಚ್ಚರಂತೆ ವರ್ತಿಸತೊಡಗಿದರು. ಈ ರೀತಿಯ ಹುಚ್ಚು ಗುಣಹೊಂದಬೇಕಾದರೆ, ಮೆದುಳಿಗೆ ಕಾಯಕಲ್ಪವನ್ನು ಮಾಡಬೇಕು. ಈಗಿನ ವೈಜ್ಞಾನಿಕ ಹಂತದಲ್ಲಿ, ಅದು ಸಾಧ್ಯವಿಲ್ಲ;