ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೨೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ದೈಹಿಕ ಬೇನೆಗಳಿಂದ ಉಂಟಾಗುವ ಮನೋರೋಗಗಳು

೨೫೫

ಆಸ್ತಿಯು ಕರಗತೊಡಗಿತು.

ಬೆಳೆದ ಮಕ್ಕಳು : ಸ್ಥಿತಿವಂತ ಅಳಿಯಂದಿರೂ ಮೊಮ್ಮಕ್ಕಳೂ ಎಲ್ಲರೂ ಇದ್ದರು. ಹಿರಿಯರ ಈ ವರ್ತನೆಯಿಂದ ತಮ್ಮ ಆಸ್ತಿಗೆ ಮತ್ತು ಬಾಳಿಗೆ ಎಲ್ಲಿ ಧಕ್ಕೆ ಬರುತ್ತದೆಯೋ ಎಂದು ಮಕ್ಕಳಿಗೆ ಭಯವಾಯಿತು. 'ಪಿತ್ರಾರ್ಜಿತ ಆಸ್ತಿ ನಮಗೂ ಇದರಲ್ಲಿ ಹಕ್ಕಿದೆ. ಚಿಕ್ಕಪಾಪಯ್ಯನವರು ಅನಿಷ್ಟರ ದುರ್ನುಡಿಗೆ ಮರುಳಾಗಿ ಆಸ್ತಿಯನ್ನು ಮಾರತೊಡಗಿದ್ದಾರೆ. ಇದು ಊರ್ಜಿತವಾಗುವುದಿಲ್ಲ. ಆದಕಾರಣ ಸುಲಭವಾಗಿ ಸಿಕ್ಕಿತು ಎಂದು ಆಸೆ ಪಟ್ಟುಕೊಂಡವರು ಕೆಟ್ಟುಹೋಗುತ್ತಾರೆ'. ಎಂದು ಲಾಯರ ಮೂಲಕ ಎಲ್ಲ ಪತ್ರಿಕೆಗಳಲ್ಲಿಯೂ ಜಾಹೀರಾತು ಮಾಡಿಸಿದರು.

ಅವಮಾನಕರವಾದ ಈ ಜಾಹೀರಾತುಗಳನ್ನು ಕಂಡು ಚಿಕ್ಕಪಾಪಯ್ಯನವರಿಗೆ ಯಾವ ದುಃಖವೂ ಆದಂತೆ ಕಾಣಿಸಲಿಲ್ಲ. ನಾಗಾಸಾನಿಯ ಮನೆಯಲ್ಲೇ ಹೆಚ್ಚು ಕಾಲವನ್ನು ಕಳೆಯಲಾರಂಭಿಸಿದರು. ಆರೇಳು ತಿಂಗಳ ಅವಧಿಯಲ್ಲಿ ಅವರ ವರ್ತನೆಯು ನಾಗಾಸಾನಿಗೂ ಬೇಸರವನ್ನು ತಂದಿತು, ಚಿಕ್ಕಪಾಪಯ್ಯನವರ ಕೈಯೂ ಬರಿದಾಗಿತ್ತು. ಹೊರಗೆ ಹಾಕಿದಳು. ಹುಚ್ಚರಂತೆ ರಸ್ತೆಗಳಲ್ಲಿ ಅಡ್ಡಾಡತೊಡಗಿದರು. ಒಮ್ಮೊಮ್ಮೆ ಮನೆಗೂ ಬರುತ್ತಿದ್ದರು. ಊಟವನ್ನೂ ಮಾಡುತ್ತಿದ್ದರು. ಕಯಾಲಿ ತಿರುಗಿದಂತೆ ಮಾತನಾಡುವುದು ; ಹೆಂಗಸರಿದ್ದಾರೆ ಮಕ್ಕಳಿದ್ದಾರೆ ಎನ್ನುವುದನ್ನು ಗಮನಿಸದೆ ತೋಚಿದ ಕೆಟ್ಟ ಮಾತುಗಳನ್ನು ಆಡಿಬಿಡುವುದು ಇವೆಲ್ಲವೂ ಶುರುವಾಯಿತು.

ಮಾನಸಿಕ ಆಸ್ಪತ್ರೆಗೆ ಸೇರಿಸಬೇಕಾಯಿತು. ಒಂದೆರಡು ವಾರಗಳಲ್ಲಿ ಅಲ್ಲಿ ಲಕ್ವಾ ಬಡಿಯಿತು, ಎಂಟು ಹತ್ತು ದಿನಗಳಲ್ಲಿ ತೀರಿಕೊಂಡರು.

ಮಾನ ಮರ್ಯಾದೆಗಳನ್ನು ಮರೆತು ವಿಷಯಲಂಪಟರಾದ ದಿನದಿಂದ ಸಾಯುವ ವೇಳೆಗೆ ಕೇವಲ ಎರಡೇ ವರ್ಷಗಳಾಗಿತ್ತು. ಅಷ್ಟರಲ್ಲಿ ಅರ್ಧಮುಕ್ಕಾಲು ಆಸ್ತಿಯನ್ನು ವಿಲೇವಾರಿ ಮಡಿಬಿಟ್ಟಿದ್ದರು. ಮನೆಯವರು ಅದನ್ನೆಲ್ಲಾ ಕೋರ್ಟಿನಲ್ಲಿ ಮೊಕದ್ದಮೆ ಹೂಡಿ, ವಾಪಸು ಪಡೆಯುವ ವೇಳೆಗೆ ಅರ್ಧಕ್ಕಿಂತ ಹೆಚ್ಚರಷ್ಟು ಲಾಯರ ಪಾಲಾಗಿರುತ್ತದೆ, ಕೋರ್ಟಿನ ಖರ್ಚಾಗುತ್ತದೆ.

ಮೆದುಳಿನ ಶಿಥಿಲತೆಯಿಂದ ಈ ತೆರನ ನಡವಳಿಕೆಯೂ ಸಾಮಾನ್ಯವಾಗಿ ಕಾಣಬರುತ್ತದೆ.