ಮನಮಂಥನ
೯. ಚಿಕಿತ್ಸಾ ಕ್ರಮಗಳು
ಯಾವ ಬೇನೆಗಾದರೂ, ದೈಹಿಕವಾಗಲೀ, ಮಾನಸಿಕವಾಗಲೀ, ಚಿಕಿತ್ಸೆಯನ್ನು ಮಾಡುವುದಕ್ಕಿಂತ, ಬೇನೆಯು ಬರದೆ ಇರುವಂತೆ ತಡೆಗಟ್ಟುವುದು ಉತ್ತಮ. ಆದರೆ ಈ ನೀತಿಯನ್ನು ಅನುಸರಿಸುವುದು ಮಾನಸಿಕ ಬೇನೆಗಳಲ್ಲಿ ಅಷ್ಟು ಸುಲಭವಲ್ಲ. ಏಕೆಂದರೆ ಮಾನಸಿಕ ಬೇನೆಗಳು ವಿಧವಿಧವಾದುವು. ಒಂದರಂತೆ ಇನ್ನೊಂದು ಇರುವುದಿಲ್ಲ. ಹಾಗೂ ಅಲ್ಲದೆ ಎರಡು ಮೂರು ತೆರನಾದ ಮಾನಸಿಕ ಬೇನೆಗಳು ಒಂದನ್ನೊಂದು ಜತೆಗೂಡಿಕೊಂಡಿರುತ್ತವೆ. ಯಾವುದೊಂದೂ, ಒಂದೇ ಆಗಿ ಇರುವುದಿಲ್ಲ. ಆದಕಾರಣ ಮುಂಜಾಗ್ರತಾಕ್ರಮಗಳನ್ನು ಕೈಗೊಳ್ಳಬೇಕಾದರೆ, ಬೇನೆಗಳಲ್ಲಿ ಅತಿಯಾಗಿ ಕಾಣುವ ಭಾಗವನ್ನು ಗಮನಕ್ಕೆ ತೆಗೆದುಕೊಳ್ಳಬೇಕು.
ಮುಂಜಾಗ್ರತಾ ಕ್ರಮಗಳು ೧. ಕೆಲವೊಂದು ಮಾನಸಿಕ ಬೇನೆಗಳಲ್ಲಿ ಅನುವಂಶಿಕ ಪ್ರವೃತ್ತಿಯು ಎದ್ದು ಕಾಣುತ್ತದೆ. ಇಂತಹ ಬೇನೆಗಳಲ್ಲಿ ಸ್ಕಿಜೋಫ್ರೆನಿಯಾ ಮುಖ್ಯವಾದುದು. ಆನುವಂಶಿಕ ಪ್ರವೃತ್ತಿಯು ಇದೆ ; ಆದುದರಿಂದ ಈ ಬೇನೆಯಿಂದ ನರಳುವವರು ಮಕ್ಕಳಾಗದಂತೆ ಎಚ್ಚರವಹಿಸಬೇಕು. ಅಲ್ಲದೆ ಈ ಪ್ರವೃತ್ತಿಯು ಕಂಡುಬಂದಿರುವ ಎರಡು ಮನೆತನದವರು ಬೀಗರಾಗದೆ ಇರುವುದು ಒಳಿತು. ದಂಪತಿಗಳಲ್ಲಿ ಇಬ್ಬರಿಗೂ ಸ್ಟೀಜೋ ಪ್ರವೃತ್ತಿಯು ಇದ್ದರೆ, ಹುಟ್ಟುವ ಮಕ್ಕಳಲ್ಲಿ ಹೆಚ್ಚು ಮಂದಿಗೆ ಜೋ ಕಾಣಿಸಿಕೊಳ್ಳುವ ಸಂಭವವು ಇದೆ. ಆದರೆ ದಂಪತಿಗಳಲ್ಲಿ ಒಬ್ಬರಿಗೆ ಮಾತ್ರ ಈ ಪ್ರವೃತ್ತಿಯು ಇದ್ದರೆ, ಹುಟ್ಟುವ ಮಕ್ಕಳಲ್ಲಿ ಕಡಿಮೆ ಸಂಖ್ಯೆಗೆ ಜೋ ಬರಬಹುದು.
ಅಂದರೆ ಮದುವೆಯನ್ನು ಮಾಡಿಕೊಳ್ಳುವಾಗ, ಮನೆತನವನ್ನು ಗಮನಿಸಬೇಕು. ಜೋಪ್ರವೃತ್ತಿಯು ಸ್ಪಷ್ಟವಾಗಿ ಮನೆತನದಲ್ಲಿ ಇದೆ ಎಂದು ಕಂಡು ಬಂದರೆ, ಎಚ್ಚರದಿಂದಿರಬೇಕು. ಎರಡೂ ಮನೆತನಗಳಲ್ಲಿದ್ದರೆ ವಿವಾಹ ಸಂಬಂಧವನ್ನು ಮಾಡದೆ ಇರುವುದು ಕ್ಷೇಮ. ಒಂದರಲ್ಲಿ ಮಾತ್ರ ಇದ್ದರೆ, ಮಿಕ್ಕೆಲ್ಲ ಅನುಕೂಲಗಳೂ ಲಕ್ಷಣವಾಗಿದ್ದರೆ, ವಿವಾಹವನ್ನು ನಿಷೇಧಿಸಬೇಕಾಗಿಲ್ಲ.