ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೨೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೨೬೦

ಮನಮಂಥನ

ರೋಗಿಗಳಿಗೆ, ಪೂಜೆ, ವ್ರತ, ಇತ್ಯಾದಿಗಳು ಸಾಕಷ್ಟು ಪರಿಣಾಮಕಾರಿಯಾಗುತ್ತವೆ. ಆದರೆ ಮಾನಸಿಕ ರೋಗಿಗಳಿಗೆ ಸ್ವಂತ ವಿವೇಚನಾಶಕ್ತಿಯು ಸಾಕಷ್ಟು ದೃಢವಾಗಿರುವುದಿಲ್ಲ. ಹಾಗಿದ್ದಿದ್ದರೆ ಮಾನಸಿಕ ತಳಮಳವೇ ಉಂಟಾಗುತ್ತಿರಲಿಲ್ಲ. ಅಂತಹವರ ಎದುರಿನಲ್ಲಿ ಮನೋವೈದ್ಯರು, ಮನೆಯವೈದ್ಯರಾಗಲೀ 'ಪೂಜೆ ಪುನಸ್ಕಾರ, ಹರಕೆ, ಯಾತ್ರೆ ಇವೆಲ್ಲಾ ಶುದ್ಧ ತಿಳಿಗೇಡಿತನ' ಎಂದು ಹೇಳಿದರೆ, ಮಾನಸಿಕ ತಳಮಳದ ಜತೆಗೆ ಸಂದೇಹವೂ, ಅನಿಶ್ಚಿತತೆಯೂ ಕೂಡಿಕೊಳ್ಳುತ್ತದೆ. ಯಾವ ಪೂಜಾ ಪುನಸ್ಕಾರಗಳಿಂದ, ರೋಗಿಯ ತಳಮಳವು ಬಹುಶಃ ಕಡಿಮೆಯಾಗುತ್ತಿತ್ತೋ, ಅದಕ್ಕೆ ಅಡ್ಡಿಮಾಡಿದಂತಾಗುತ್ತದೆ. ಖಂಡಿತವಾಗಿಯೂ ಇದಾಗಬಾರದು. ನಮ್ಮ ಇಂದಿನ ಮನೋವೈದ್ಯರ ಅರಿವಿನ ಹಂತದಲ್ಲಿ, ದೊರಕುವ ಎಲ್ಲಾ ಸಾಧನೆಗಳನ್ನೂ ಬಳಸಿಕೊಳ್ಳುವುದು ಜಾಣತನ.

ಆದಕಾರಣ, ಮಡಿ, ಮುಸಿರೆ; ವ್ರತ, ಭಜನೆ; ನಗರ ಸಂಕೀರ್ತನೆ, ನಾಮ ಸಂಕೀರ್ತನೆ ಎಂದು ಯಾವುದಾದರೂ ಆಚರಣೆಯನ್ನು ತುಸು ವಿಪರೀತವಾಗಿ ಯಾರಾದರೂ ಮಾಡಲೆತ್ನಿಸಿದರೆ; ಅವರನ್ನು ಅರ್ಥಮಾಡಿಕೊಳ್ಳಬೇಕು. ಮಾನಸಿಕ ತಳಮಳವಾಗಿದ್ದುದರಿಂದಲೇ ಅವರು ಹಾಗೆ ಮಾಡಿ, ಸಮಾಧಾನವನ್ನು ಪಡೆಯ ಲೆತ್ನಿಸುತ್ತಾರೆ. ಹಾಗೆಂದು ವಿವೇಚಿಸಿ, ಯೋಚಿಸಿ, ಅವರುಗಳು ಮಾಡುವುದಿಲ್ಲ. ಮನಸ್ಸಿನ ಅಸ್ಪಷ್ಟವಾದ ಭಾಗಗಳಲ್ಲಿ ಈ ತೆರನ ನಿರ್ಣಯವು ಹೊರಬಂದು, ಅದು ನಡಸಿದಂತೆ ಅವರುಗಳು ಆಚರಿಸುತ್ತಾರೆ. ಹಾಗೆ ಮಾಡುವುದರಿಂದ ಅವರ ಮನಸ್ಸಿಗೆ ಸ್ವಲ್ಪ ಮಟ್ಟಿಗೆ ನೆಮ್ಮದಿಯು ದೊರಕುತ್ತದೆ. ಬೈದು, ಮೂದಲಿಸಿ, ಅವರೆದುರಿಗೆ ಅವರ ಆಚರಣೆಯನ್ನು ಅವಹೇಳನ ಮಾಡಿದರೆ, ಅವರುಗಳ ಡೋಲಾಯಮಾನ ಸ್ಥಿತಿಯಲ್ಲಿರುವ ಮನಸ್ಸು ಮೊಂಡು ಹಿಡಿದುಕೊಳ್ಳುತ್ತದೆ. 'ಯಾರೂ ನನಗೆ ಸ್ನೇಹಿತರಲ್ಲ, ಯಾರಿಗೂ ನನ್ನ ನೆಮ್ಮದಿಯ ಕಾತರವಿಲ್ಲ.' ಎಂದು ಮನಸ್ಸು, ಸುತ್ತಮುತ್ತಲಿನವರನ್ನು ದ್ವೇಷಿಸುವಂತೆ ಮಾಡುತ್ತದೆ. ಅಂದರೆ ಸಮಾಜದಲ್ಲಿ ಒಬ್ಬನಾಗಿ, ಅದರೊಂದಿಗೆ ಅನುಸರಿಸಿಕೊಂಡು ಹೋಗುವ ಆರೋಗ್ಯವಂತರ ನಡವಳಿಕೆಯು ತಪ್ಪಿಹೋಗುತ್ತದೆ. ಸಮಾಜವನ್ನು ಮನಃಪೂರ್ಣ ದ್ವೇಷಿಸಿ, ತನ್ನಲ್ಲಿ ತಾನೇ ಕೊರಗುತ್ತ ತೊಳಲುತ್ತ ಅದರಿಂದಲೇ ತುಸು ನೆಮ್ಮದಿಯನ್ನು ಪಡೆಯುವಂತಾಗುತ್ತದೆ. ಅಂದರೆ ಮಾನಸಿಕ ರೋಗವು ಸ್ಥಿರವಾದಂತೆಯೇ.

ಇದಾಗಬಾರದು. ಮೊದಮೊದಲ ಹಂತದಲ್ಲಿ ವಿಪರೀತವಾದ, ವಿಚಿತ್ರವಾದ ಆಚರಣೆಯನ್ನು ಕಂಡರೆ, ತುಂಬಾ ಅನುಕಂಪ ಮತ್ತು ಸಹಾನುಭೂತಿಯನ್ನು ಮನೆಯವರು ಮತ್ತು ಇತರರು ತೋರಿಸಬೇಕು.