೯
ಎಂದು ಹೇಳಿದರು.
ಅತಿ ಬೇಸರದಿಂದ ತಂದೆ ಈ ರೀತಿ ಪರಿಚಯ ಮಾಡತೊಡಗಿದರೆ, ಬೆಳೆದ ಮಗನಿಗೂ ಬೇಜಾರಾಗಬೇಕು, ಖಿನ್ನನಾಗಬೇಕು. ಆದರೆ ಅವನ ಮುಖದ ಮೇಲೆ ಕಿರುನಗೆಯು ಇದ್ದೇ ಇತ್ತು. ಅಪ್ಪನ ಬಾಯಿಂದ ಇಂತಹ ಮಾತುಗಳನ್ನು ಕೇಳಿ ಅಭ್ಯಾಸವಾಗಿಬಿಟ್ಟಿರಬಹುದು ಎಂದುಕೊಂಡೆ. ಆದರೆ ಅಪ್ಪನು ಅಪರಿಚಿತನಾದ ನನ್ನ ಮುಂದೆ, ಈ ರೀತಿ ಮಾತನಾಡಿದ್ದು ನನ್ನನ್ನು ಕೆರಳಿಸಿತು. 'ಇದು ವಾಸಿಯಾಗುವ ಕಾಯಿಲೆ ಅಲ್ಲ ; ನೀವಿರುವತನಕ, ಅಂತ ನೀವು ನಿರ್ಧಾರವನ್ನು ಮಾಡಿಬಿಟ್ಟಿದ್ದಾದರೆ, ಈಗ ಇಲ್ಲಿಗೆ ಯಾಕೆ ಕರೆದುಕೊಂಡು ಬಂದಿರಿ ?' ಎಂದು ದಬಾಯಿಸಿದೆ.
'ಕೋಪಿಸಿಕೊಳ್ಳಬೇಡಿ, ಡಾಕ್ಟರೆ ! ಪಡಬಾರದ ಪಾಡನ್ನೆಲ್ಲ ಇವನಿಂದ ಪಟ್ಟಿದ್ದೇನೆ. ತಾಳ್ಮೆಯೇ ಹೋಗಿಬಿಟ್ಟಿದೆ. ಇರುವವನೊಬ್ಬ ಹೀಗಾದನಲ್ಲ, ಈ ವಯಸ್ಸಿನಲ್ಲಿ ಅಂತ ಕೊರಗ್ತಾ ಇದೀನಿ. ಇದು ವಾಸಿಯಾಗುತ್ತೆ ಎನ್ನುವ ಆಸೆಯನ್ನು ಬಿಟ್ಟ ಹಾಗೇನೇ, ಏನೂ ಮಾಡುಕ್ಕೆ ತೋಚದೆ, ಇದು ಹೇಗೆ ಪರ್ಯವಸನವಾಗಬಹುದು ಎಂದು ಜೋಯಿಸರ ಹತ್ತಿರ ಪ್ರಶ್ನೆ ಕೇಳಿ ತಿಳಿದುಕೊಳ್ಳೋಣ ಅಂತ ಹೋಗಿದ್ದೆ. ಕವಡೆ ಹಾಕಿ ನೋಡಿ, ಈಶಾನ್ಯ ದಿಕ್ಕಿನಲ್ಲಿ ಮೂರು ಫರ್ಲಾಂಗ್ ನಡೆದು ಹೋಗಿ, ಅಲ್ಲಿ ವಿಚಾರಿಸಿದರೆ ಅನುಕೂಲವಾಗುತ್ತೆ ಎಂದರು. ಹಾಗೆ ಮಾಡಿದರೆ ಬಹುಶಃ ದೇವಸ್ಥಾನವು ಸಿಗಬಹುದು. ದೇವರ ಸೇವೆಯನ್ನು ಇನ್ನೊಂದು ಸರ್ತಿ ಮಾಡಿಸೋಣ ಅಂತ ಇತ್ತ ಬಂದೆ. ಅವರು ಸೂಚಿಸಿದ ಸ್ಥಳದಲ್ಲಿ ದೇವಸ್ಥಾನವೂ ಇರಲಿಲ್ಲ, ದೇವರೂ ಸಿಗಲಿಲ್ಲ. ಜನನಿಬಿಡಪೇಟೆ ಮಧ್ಯದ ಸ್ಥಳ, ನಾಲ್ಕು ಕ್ಷೌರದ ಅಂಗಡಿಗಳು, ಮೂರು ದೋಭಿ ಸೆಲೂನುಗಳು, ಆರು ಹೋಟಲುಗಳೂ ಸಿಕ್ಕಿದುವು. ಇವುಗಳ ಮಧ್ಯ ಕೌಸ್ತುಭಮಣಿಯಂತೆ ದವಾಖಾನೆಯ ಬೋರ್ಡು ಕಾಣಿಸಿತು. ಅದೃಷ್ಟ ಪರೀಕ್ಷೆಯನ್ನು ಇಲ್ಲಿಯೂ ಮಾಡಿ ನೋಡೋಣ ಅಂತ ಬಂದೆ.' ಎಂದು ಇದ್ದುದನ್ನು ಇದ್ದ ಹಾಗೆಯೇ ಹೇಳಿದರು, ನನ್ನ ಕೀರ್ತಿಯನ್ನು ಕೇಳಿ ಹುಡುಕಿಕೊಂಡು ಬಂದರು ಎಂದು ಒಳಗೊಳಗೇ ತುಸು ಹೆಮ್ಮೆ ಪಡುತ್ತಿದ್ದ ನನಗೆ ದಬ್ಬಳದಲ್ಲಿ ಹೊಟ್ಟೆಯನ್ನು ಚುಚ್ಚಿದ ಹಾಗಾಯಿತು. ಆದರೆ ಹೊಟ್ಟೆಪಾಡಿಗಾಗಿ ಎಂತೆಂತಹ ಅವಮಾನವನ್ನೂ ಅನುಭವಿಸಬೇಕಲ್ಲ. ಸೌಟಿನಿಂದ ತಲೆಯ ಮೇಲೆ 'ಅನ್ನಪೂರ್ಣ' ಚಚ್ಚಿದರೂ ತೆಪ್ಪಗಿರಲೇಬೇಕು.
ರೋಗಿಯ ಕಡೆಗೆ ತಿರುಗಿದೆ. ನಿನ್ನೊಂದಿಗೆ ಸಹಾನುಭೂತಿ ಇದೆ ಎನ್ನುವಂತೆ