ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೨೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಭಾಗ-೨

೧. ದೇಹ ಮತ್ತು ಮನಸ್ಸಿನ ಸಂಬಂಧ

ಮೂರು ವರ್ಷದ ದುಂಡು ದುಂಡು ಮಗುವಾಗಿದ್ದಾಗಿನಿಂದಲೂ ಪಮ್ಮಿಗೆ ನನ್ನನ್ನು ಕಂಡರೆ ಸದರ. ಕತ್ತಿನ ಸುತ್ತ ಮಾಲೆಯಂತೆ ಸ್ಟೆತೋಸ್ಕೋಪನ್ನು ಹಾಕಿಕೊಂಡು, ಎದುರು ಹೋದರೆ ಸುಮಾರುಪಾಲು ಮಕ್ಕಳು ಕಿಠಾರಂತ ಅರಚಿಕೊಳ್ಳುತ್ತವೆ. ಆದರೆ ಕೆಲವು ಮಕ್ಕಳು, ಅದೇ ವಯಸ್ಸಿನ ಮಕ್ಕಳು, ನನ್ನೊಂದಿಗೆ ಚಕ್ಕಂದವಾಡತೊಡಗುತ್ತವೆ. ಪಮ್ಮಿ ಇಂತಹದೊಂದು ಮುದ್ದು ಮಗು, ಅಜ್ಜ ಅಜ್ಜಿಯರು ಪ್ರಮೀಳಾ ಎಂದು ಹೆಸರಿಟ್ಟಿದ್ದರೂ, ಮನೆಯವರೆಲ್ಲರೂ ಪಮ್ಮಿ ಎಂದೇ ಕರೆಯುತ್ತಿದ್ದರು. ಮೂರು ತುಂಬಿದ ಮೇಲೆ ಶಾಲೆಗೆ ಸೇರಿಸಿದಾಗ, ಪ್ರಮೀಳಾ ಎಂಬುದು ನನ್ನ ಹೆಸರು ಅಂತ ಅವಳಿಗೆ ಸರಿಯಾಗಿ ತಿಳಿದದ್ದು.

ಮದುವೆಯಾಗಿ, ಹೊಸ ಸಂಸಾರವನ್ನು ಪ್ರಮೀಳಾ ಹೂಡಿದಳು. ಆಣಿಯಾದ ಸುಸಂಸ್ಕೃತ ಗಂಡ ಇಬ್ಬರೂ ದವಾಖಾನೆಗೆ ಬಂದು, ಅನುಕೂಲವಾದ ಒಂದು ಸಂಜೆ ಅವರ ಮನೆಗೆ ಟೀಗೆ ಬರಬೇಕೆಂದೂ, ರಾಹುಕಾಲವು ಆರಂಭವಾಗುವ ಮೊದಲೇ ಬರುತ್ತೀನಿ. ಮರೆತುಬಿಟ್ಟು ಹರೆಯದ ಹುಮ್ಮಸ್ಸಿನಲ್ಲಿ ಸಿನಿಮಾಕ್ಕೆ ಹೋಗಿಬಿಡಬೇಡಿ, ಎಂದು ಎಚ್ಚರಿಸಿ, ನಾನು ಒಪ್ಪಿಕೊಂಡೆ. ಹೋದೆ; ಭಾನುವಾರ ನಾಲ್ಕರ ವೇಳೆಗೆ ಲಘುಫಲಾಹಾರವನ್ನು ನೀಡಿದರು. ಇನ್ನೆರಡು ದಿನ ಪೂರ್ಣ ಉಪವಾಸವನ್ನು ಮಾಡಿದರೂ, ತಡೆದುಕೊಳ್ಳಬಹುದು ಎನ್ನುವಷ್ಟು ಇಬ್ಬರೂ ಆದರದಿಂದ ಗಿಡುಗಿದರು. ರುಚಿರುಚಿಯಾಗಿದ್ದುದರಿಂದ, ಮುದುಕನ ಚಪಲವೂ ಅತಿಯಾಗುವುದರಿಂದ, ಕಬಳಿಸಿದೆ ; ನಂತರ ಯೋಗಕ್ಷೇಮದ ಮಾತುಗಳು.

“ಪಮ್ಮಿ ! ಇನ್ನು ಮೇಲೆ ಹಾಡು ಹಸೆ, ಗಮಕ ಕಲೆ ಎಲ್ಲವೂ ಮುಗಿದಂತೆಯೇನೇ?' ಎಂದು ಕೇಳಿದೆ. ಕನ್ನಡ ಗೀತೆಗಳನ್ನು ಇಂಪಾಗಿ ಮತ್ತು ಭಾವಪೂರ್ಣವಾಗಿ ಪಮ್ಮಿ ಹಾಡುತ್ತಿದ್ದಳು. ಮದುವೆಯಾದಮೇಲೆ ಇತರ ಆತುರಗಳು. ಮನೆಗೆಲಸಗಳೂ ತುಂಬಿಕೊಂಡು ಬರುತ್ತವಲ್ಲ. ಹಾಡು ಹಸೆಗಳಿಗೆ ವ್ಯವಧಾನವಿರುತ್ತದೆಯೇ ? ಆದುದರಿಂದ ಹಾಗೆ ಕೇಳಿದೆ.