ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೨೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ದೇಹ ಮತ್ತು ಮನಸ್ಸಿನ ಸಂಬಂಧ

೨೬೩

ನಮ್ಮ ನಂದಳಿಕೆ ಲಕ್ಷ್ಮೀನಾರಣಪ್ಪ ಮುದ್ದು ಮುದ್ದಾಗಿ ಕನ್ನಡದ ಮುದ್ದಣನಾಗಿ ಬರೆದುದೂ; ಅವರುಗಳು ಕ್ಷಯ ರೋಗದಿಂದ ನರಳಲಾರಂಭಿಸಿದ ಮೊದಮೊದಲ ಕಾಲದಲ್ಲಿ. ನಮ್ಮ ರಾಷ್ಟ್ರದ ಮೊದಲ ರಾಷ್ಟ್ರಾಧ್ಯಕ್ಷರಾದ ಕೀರ್ತಿಶೇಷ, ಬಾಬುರಾಜೇಂದ್ರ ಪ್ರಸಾದರು ತೀವ್ರತರದ ಉಬ್ಬಸದಿಂದ ನರಳುತ್ತಿದ್ದರು. ಆದರೂ ಸಾಮಾಜಿಕ ಮತ್ತು ರಾಜಕೀಯ ಚಟುವಟಿಕೆಗಳೊಂದಿಗೆ, ಆಧ್ಯಾತ್ಮಿಕ ಪ್ರಗತಿಯನ್ನೂ ಅಮೋಘವಾಗಿ ಸಾಧಿಸಿದರು. ಭಗವದ್ಗೀತೆಗೆ ತಮ್ಮದೇ ಆದ ವಿಮರ್ಶನಾ ಟೀಕಾವನ್ನು ಬರೆದರು.

J.B.S.Haldane ಎಂಬ ಇಂಗ್ಲೆಂಡಿನ ಪ್ರಚಂಡ ವಿಜ್ಞಾನಿಯೊಬ್ಬನು, ಪಾಶ್ಚಾತ್ಯ ದೇಶಗಳಲ್ಲಿ ಲೋಕ ಪ್ರಸಿದ್ಧಿಯನ್ನು ಪಡೆದಿದ್ದ. ಆದರೆ ಆತನಿಗೆ ತೃಪ್ತಿಯು ದೊರಕಲಿಲ್ಲ. FR.S. ಎಂಬ ಅತ್ಯಂತ ಔನ್ನತ್ಯದ ವೈಜ್ಞಾನಿಕ ಮನ್ನಣೆಯನ್ನು ಗಳಿಸಿದ್ದ. ನಮ್ಮ ಭಾರತಕ್ಕೆ ವಲಸೆಬಂದು, ಭಾರತೀಯ ಪ್ರಜೆಯಾದ. ಕರುಳಿನಲ್ಲಿ ಅವನಿಗೆ ಅರ್ಬುದ ರೋಗವು ಪ್ರಾರಂಭವಾಯಿತು. ಆ ವಿನಾಶಕಾರೀ ರೋಗವು ವೃದ್ಧಿಸಿತು. ಅದೇ ಅವನಿಗೆ ಯಮಪಾಶವನ್ನೂ ಬೀಸಿ ಎಲ್ಲಿಂದ ಬಂದಿದ್ದನೋ ಅಲ್ಲಿಗೆ ಕೊಂಡೊಯ್ದಿತು. ಆದರೆ ಕೊನೆಯುಸಿರು ಆಡುವತನಕ ಅವನ ಮನಸ್ಸು ಸ್ವಾಸ್ಥ್ಯದಿಂದಲೇ, ಚುರುಕಾಗಿ, ಜ್ಞಾನಾರ್ಜನೆಯನ್ನು ಮಾಡುತ್ತಿತ್ತು.

೪. ಮಾನಸಿಕ ರೋಗಗಳಿಂದ ಬಲು ಕಾಲ ನರಳಿ ನಿಧನರಾದವರ ಮೆದುಳನ್ನು ಬಹಳ ಸೂಕ್ಷ್ಮವಾಗಿ ಪರೀಕ್ಷೆಯನ್ನು ಮಾಡಿದಾಗ, ಮೆದುಳಿನಲ್ಲಿ ಯಾವ ವ್ಯತ್ಯಾಸವೂ ಕಾಣಬರಲಿಲ್ಲ. ಮಾನಸಿಕ ರೋಗಗಳು ಯಾವುವೂ ಕಾಣಬರದೇ, ನೆಮ್ಮದಿಯಿಂದ ಬಾಳುತ್ತಿದ್ದವರು, ಅಕಸ್ಮಾತ್ ಸತ್ತಾಗ, ಪೊಸ್ಟ್ ಮಾರ್ಟಂ ಅನ್ನು ಮಾಡುತ್ತಾರೆ. ಅಂತಹ ಸಂದರ್ಭಗಳಲ್ಲಿ ಯಾವ ಪೆಟ್ಟೂ ತಲೆಗೆ ತಗುಲಿರದ ಕೆಲವರ ಮೆದುಳು ಬಹುಪಾಲು ಅವ್ಯವಸ್ಥಿತವಾಗಿರುತ್ತದೆ. ಸುಮಾರು ಕಾಲದಿಂದಲೂ ಹಾಗೆ ರೋಗ ಪೀಡಿತವಾಗಿತ್ತು ಎನ್ನುವುದಕ್ಕೂ ಪುರಾವೆಗಳು ದೊರೆಯುತ್ತವೆ.

ಅಂದರೆ ಮೆದುಳಿನ ಅವ್ಯವಸ್ಥೆಗೂ ಮಾನಸಿಕ ಬೇನೆಗಳಿಗೂ ಸಂಬಂಧವನ್ನು ಕಲ್ಪಿಸುವಂತಿಲ್ಲ. ಆಜನ್ಮಸಿದ್ಧವಾದ ಹಲವು ಮಾನಸಿಕ ವಿಪರೀತದ ಕಾಯಿಲೆಗಳಲ್ಲಿ ಮೆದುಳಿನ ರಚನೆ ಮತ್ತು ಅಭಿವೃದ್ಧಿಯಲ್ಲಿ ಸಾಕಷ್ಟು ಲೋಪದೋಷಗಳನ್ನು ಕಾಣಬಹುದು. ಆದರೆ ಬಹಳಷ್ಟು ಮಾನಸಿಕ ಬೇನೆಯಿಂದ ನರಳುವವರ, ಮೆದುಳು ಚೆನ್ನಾಗಿರುತ್ತದೆ.