ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೨೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೨೭೪

ಮನಮಂಥನ

ಈ ಎಲ್ಲ ಕಾರಣಗಳಿಂದ ಇಂದಿನ ವೈಜ್ಞಾನಿಕ ಪ್ರಗತಿಯ ಹಂತದಲ್ಲಿ ಮನಸ್ಸು ಆರೋಗ್ಯವಾಗಿದ್ದರೆ, ದೇಹವೂ ಆರೋಗ್ಯವಾಗಿರುತ್ತದೆ ಎನ್ನುವ ದಾರ್ಡ್ಯವನ್ನು ಹೊಂದಬಹುದು.

ಇಂತಹ ವೈಜ್ಞಾನಿಕ ಕಾರಣಗಳಂತಿರಲಿ, ಸುತ್ತಲೂ ಕಣ್ಣು ಬಿಟ್ಟು ನೋಡಿದರೆ ಬೇಕಾದಷ್ಟು ನಿದರ್ಶನಗಳು ದೊರೆಯುತ್ತವೆ. ಮಹಾತ್ಮಾ ಗಾಂಧೀಯವರ ದೇಹದಾರ್ಡ್ಯವು ಅಂತಹ ಹೇಳಿಕೊಳ್ಳುವಂತೇನೂ ಇರಲಿಲ್ಲ. ಕೀರ್ತಿಶೇಷ ಕೈಲಾಸಂ ಒಮ್ಮೆ ನಗೆಯಾಡಿದಂತೆ, ಯಮಕೆ ಗಾಂಧೀ. ಆದರೆ ಅಂತಹ ಬಡಕಲು ದೇಹದಲ್ಲಿ, ಶಿಸ್ತು ಸಂಯಮಗಳಿಂದ ಸಿದ್ಧಗೊಳಿಸಲ್ಪಟ್ಟ ಮನಸ್ಸು, ಏನೇನೆಲ್ಲವನ್ನೂ ನಮ್ಮ ಜನತೆಗೆ ಸಾಧಿಸಿಕೊಟ್ಟಿತು ! ದೃಢವಾದ ಮನಸ್ಸು ಇದ್ದುದರಿಂದಲೇ ಹಲವಾರು ಬಾರಿ ಕೈಗೊಂಡ ಕಠಿಣ ಉಪವಾಸಗಳನ್ನು ಅವರ ದೇಹವು ತಡೆದುಕೊಂಡಿತು. ಅವರಂತೆಯೇ ಶಿಸ್ತು ಸಂಯಮಗಳಿಂದ, ಯಮ, ನಿಯಮ, ಆಸನ, ಪ್ರಾಣಾಯಾಮ, ಧಾರಣ ಮತ್ತು ಧ್ಯಾನಗಳಿಂದ ಮನಸ್ಸನ್ನು ಹದಗೊಳಿಸಿದ ಆಚಾರ್ಯ ವಿನೋಬಾಜೀಯವರ ಸಣಕಲ ದೇಹವು ಲಕ್ಷಾಂತರ ಕಿಲೋಮೀಟರುಗಳ ಪಾದಯಾತ್ರೆಯನ್ನು ಮಾಡಿತು.

ದೇಹ ಮತ್ತು ಮನಸ್ಸುಗಳ ಪರಸ್ಪರ ಸಂಬಂಧದಲ್ಲಿ, ಇಂದಿನ ಮಾನವನ ಪ್ರಗತಿ ಹೊಂದಿದ ಮನಸ್ಸು ಹೆಚ್ಚು ಹೊಣೆಯನ್ನು ಹೊಂದಿದೆ.

ಮನುಷ್ಯನು ಸಂಘಜೀವಿ. ಅವನು ಸುರಕ್ಷಿತವಾಗಿರಬೇಕಾಗಿದ್ದರೆ, ಅವನಿರುವ ಸಮಾಜವೂ ಸುಭದ್ರವಾಗಿರಬೇಕು. ಸಮಾಜದ ಸುಭದ್ರತೆಗೆ ಅವನೂ ಹೊಣೆಯನ್ನು ಹೊರಬೇಕು. ಸುಭದ್ರವಾಗಿರಬೇಕಾದರೆ ಅಂತಹ ಸಮಾಜವು ಹಲವಾರು ನಿಯಮಗಳನ್ನೂ ಕಟ್ಟುಪಾಡುಗಳನ್ನೂ ವಿಧಿಸಬೇಕು. ಇವುಗಳಿಗನುಗುಣವಾಗಿ ಸಭ್ಯ ರೀತಿಯಲ್ಲಿ ವ್ಯಕ್ತಿಯು ನಡೆದುಕೊಳ್ಳಬೇಕು. ಸಭ್ಯ ನಡವಳಿಕೆಯನ್ನು ಸಹಜವಾಗಿ ನಡೆಸಬೇಕಾದರೆ, ವ್ಯಕ್ತಿಗೆ ಸತ್ ಇಂದ ಪ್ರಭಾವಿತವಾದ ಚಿತ್ತವು, ಅಂದರೆ ಸಂಯಮದಿಂದ ನಡೆಸಿಕೊಂಡ ಮನಸ್ಸು ಅಣಿಯಾಗಬೇಕು. ದಾಸವರ್ಯರ 'ಸತ್‌ಚಿತ್ತದಿ ನಡೆದರೆ ಅದೆ ಮಡಿಯು' ಎಂಬ ವಾಕ್ಯದ ಪೂರ್ಣಾರ್ಥವು ಇದು.

ದೇಹ ಮತ್ತು ಮನಸ್ಸಿನ ಪರಸ್ಪರವಾದ ಹಾಗೂ ನಿಕಟವಾದ ಸಂಬಂಧದಲ್ಲಿ; ಇಂದಿನ ಮಾನವನ ಪ್ರಗತಿಯ ಹಂತದಲ್ಲಿ ಮನಸ್ಸಿನ ಪಾತ್ರವು ಹಿರಿದಾದುದು ಎಂದು ತಿಳಿದೆವು. ದೇಹಾರೋಗ್ಯವನ್ನು ಕಾಪಾಡಿಕೊಳ್ಳುವಾಗ, ಅಥವಾ ಸಾಧಿಸುವಾಗ, ಮನಸ್ಸಿನ ಆರೋಗ್ಯಸ್ಥಿತಿಯನ್ನು ಬಲು ಜಾಗ್ರತೆಯಿಂದ ಕಾಪಾಡಿಕೊಳ್ಳಬೇಕು. ಯಶಸ್ವಿಯಾಗಿ ಹಾಗೆ ಸಾಧಿಸಬೇಕಾದರೆ, ಮನಸ್ಸಿನ