೨೭೭
ಹೋಗಬೇಕು. ಅಲ್ಲಿ ಒಂದು ವಾರ ಇರುವ ಏರ್ಪಾಡು. ಹಳ್ಳಿಯಲ್ಲಿ ಲಾಂಡ್ರಿ ಇರುವುದಿಲ್ಲ. ಆದಕಾರಣ ವಾರಕ್ಕೆ ಅಗತ್ಯವಾದಷ್ಟು ಬಟ್ಟೆಗಳನ್ನು ತೆಗೆದುಕೊಂಡು ಹೋಗಬೇಕು. ಇದೂ ಮಿತಿಯಲ್ಲಿರಬೇಕು. ಏಕೆಂದರೆ ಸೂಟ್‌ಕೇಸನ್ನು ನಾನೇ ಹೊತ್ತುಕೊಂಡು ನಡೆಯಬೇಕು. ಹೀಗೆಲ್ಲಾ ವಿವರವಾಗಿ ಯೋಚಿಸಿ ಸಾಮಾನುಗಳ ಪಟ್ಟಿಯನ್ನು ಬರೆದಿಡುತ್ತೇನೆ.
ಅಂದರೆ ನನ್ನ ಮನಸ್ಸು : ನನ್ನ ಪ್ರಮಾಣದ, ನನ್ನ ರಜೆಯ ಅವಧಿಯ, ಎಲ್ಲಾ ಯೋಚನೆಗಳನ್ನೂ ನಿಖರವಾಗಿ ಮಾಡಿತು. 'ನಿನ್ನ ಆಸೆ ಆಕಾಂಕ್ಷೆಯು ಸಫಲವಾಗಬೇಕಾದರೆ ಹೀಗೆ ಹೀಗೆ ಮಾಡು ಎಂದು ನಿರ್ಧರಿಸಿತು. ಅನುಕೂಲಗಳನ್ನು ಮತ್ತು ಪ್ರತಿಕೂಲಗಳನ್ನು ತುಲನಾತ್ಮಕವಾಗಿ ಯೋಚಿಸುವುದು ಮನಸ್ಸಿನ ಒಂದು ಕಾರ್ಯ. ಅನಂತರ ನಿರ್ಧಾರವನ್ನು ಕೈಗೊಳ್ಳುವುದು ಇನ್ನೊಂದು ಕಾರ್ಯ.
ಅಜ್ಜಯ್ಯನ ಮನೆಗೆ ಹೋದೆ. ಎಂಭತ್ತಾರರ ಪ್ರಾಯ ಅಜ್ಜಯ್ಯನಿಗೆ. ಆದರೂ ನನ್ನ ಗುರುತನ್ನು ಹತ್ತು ವರ್ಷಗಳ ನಂತರ, ಸುಲಭವಾಗಿ ಹಿಡಿದು, ಯೋಗಕ್ಷೇಮವನ್ನು ವಿಚಾರಿಸಿದರು. ನನ್ನ ತಂದೆ, ತಾಯಿ, ಅಣ್ಣ ತಮ್ಮಂದಿರು, ಅಕ್ಕ ತಂಗಿಯರು, ಎಲ್ಲರ ಹೆಸರುಗಳನ್ನು ಹೇಳಿ, ಈಗ ಏನು ಮಾಡಿಕೊಂಡಿದ್ದಾರೆ, ಎಷ್ಟು ಜನ ಮಕ್ಕಳು, ಇತ್ಯಾದಿ ಯೋಗಕ್ಷೇಮವನ್ನು ಕೇಳಿದರು. ಮುಪ್ಪಿನ ಮುದುಕರಾದರೂ ಎಲ್ಲರ ಹೆಸರುಗಳನ್ನೂ ನೆನಪಿನಲ್ಲಿಟ್ಟುಕೊಂಡಿದ್ದಾರಲ್ಲಾ ಎಂದು ಆಶ್ಚರ್ಯವಾಯಿತು.
ಆದರೆ ಮುಂದಿನ ಹತ್ತು ನಿಮಿಷಗಳಲ್ಲಿ ಕೇಳಿದ್ದನ್ನೇ ಕೇಳಿದರು. ಗೆರೆ ತಪ್ಪಿದ ಗ್ರಾಮೋಫೋನ್ ರಿಕಾರ್ಡು, ಬಂದನೋ, ಬಂದನೋ, ಬಂದನೋ ಅಂತ ಕಿಸುಬಾಯಿದಾಸನ ತರಹ ಹೊಡೆದುಕೊಳ್ಳುವುದಿಲ್ಲವೇ, ಅದರಂತೆಯೇ ಅಜ್ಜಯ್ಯನೂ ಕೇಳಿದ್ದನ್ನೇ ಕೇಳಲಾರಂಭಿಸಿದ. ಪುನಃ ಪುನಃ ಕೇಳಿದ. ಹಿಂದೆ ಎಂದೋ ನಡೆದಿದ್ದ ವಿಷಯಗಳ ನೆನಪು ಅಜ್ಜಯ್ಯನ ಮನಸ್ಸಿನಲ್ಲಿ ಹಚ್ಚ ಹಸುರಾಗಿ ಉಳಿದಿದೆ. ಆದರೆ ಈಗ ತಾನೇ ಪ್ರಶ್ನೆಯನ್ನು ಕೇಳಿದೆ ಎಂಬ ನೆನಪು ಉಳಿದೇ ಇಲ್ಲ. ಎಂದನಿಸಿತು.
ಸ್ಮರಣೆಯಲ್ಲಿಟ್ಟುಕೊಳ್ಳುವುದು ; ಅಗತ್ಯ ಬಿದ್ದಾಗ ನೆನಪಿಗೆ ತಂದುಕೊಂಡು ಉಪಯೋಗಿಸಿಕೊಳ್ಳುವುದೂ ಮನಸ್ಸಿನ ಮುಖ್ಯ ಕಾರ್ಯಗಳಲ್ಲಿ ಒಂದು.