ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೨೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೨೭೮

ಮನಮಂಥನ

'ಭ್ರುಂಗದಾ ಬೆನ್ನೇರಿ ಬಂತು. ಕಲ್ಪನಾ ವಿಲಾಸ' ಎಂದು ಕವಿ ಬೇಂದ್ರೆ ಹಾಡಿದರು. ಕವಿಯ ಮನಸ್ಸಿನ ಕಲ್ಪನೆಯು ಹಾಡಾಗಿ ಹೊರ ಹೊಮ್ಮುವಾಗ ಮಧುವನ್ನರಸುವ ದುಂಬಿಯ ಝೇಂಕಾರದಂತೆ ಮೂಡಿಬರುತ್ತದೆಯಂತೆ. ಎಷ್ಟು ಚೆನ್ನಾಗಿ ನುಡಿದಿದ್ದಾರೆ ಅನ್ನಿಸುತ್ತೆ ನಿಮಗೆ. ಅಯ್ಯೋ ! ಈ ತೆರನಾಗಿ ನಾವು ಹಾಡನ್ನು ಏಕೆ ಕಟ್ಟಬಾರದು ? ಅಂತಹ ಯೋಗ್ಯತೆಯು ನಮಗೇಕೆ ಬರಲಿಲ್ಲ ಎಂದು ತುಸು ವ್ಯಸನವೂ ಆಗುವುದು. ತುಂಬಾ ವಿಚಾರವನ್ನು ನಡೆಸಿದ ನಂತರ ಬೇಂದ್ರೆಯವರ ಮನಸ್ಸಿನಲ್ಲಿ ಈ ನುಡಿಗಳು ಮೂಡಲಿಲ್ಲ ಭಾವನೆಯು-Emotions - ಅವರ ಅಂತಃಕರಣವನ್ನು ತುಂಬಿಕೊಂಡಿತು. ಕಡೆದ ಮೊಸರಲ್ಲಿ ಬೆಣ್ಣೆಯು ತೇಲಿ ಬರುವಂತೆ, ಭಾವನಾ ಮನಸ್ಸಿನಿಂದ ಈ ನುಡಿಗಳು ತಾವಾಗಿ ತಾವೇ ಮೂಡಿಬಂದುವು. ಮನಸ್ಸಿನ ಚಟುವಟಿಕೆಗಳಲ್ಲಿ ಭಾವ ರಾಗ ದ್ವೇಷಾದಿಗಳೂ ಪಾತ್ರವನ್ನು ವಹಿಸುತ್ತವೆ. ಮನಸ್ಸಿನ ಈ ಗುಣವನ್ನು ಸ್ಫೂರ್ತಿ ಎಂದೆನ್ನುತ್ತಾರೆ. ತನ್ನ ಇಷ್ಟದಂತೆ ಮೂಡಿ ಬರುವ, ನಮ್ಮ ಇಷ್ಟದಂತೆ ನಡೆಯದೇ ಇರುವ, ಸ್ಫೂರ್ತಿಯೂ ಮನಸ್ಸಿನ ಒಂದು ಪ್ರದರ್ಶನ, ಕೆಲವೇ ಮಂದಿಗೆ ಲಭಿಸುವ, ಗುಣ.

ನ್ಯೂಟನ್ನನ ಕತೆಯನ್ನು ಎಲ್ಲರೂ ಕೇಳಿದ್ದಾರೆ. ಸೇಬಿನ ಮರದ ಕೆಳಗೆ ಅವಕುಳಿತಿದ್ದ, ಅಥವಾ ನೆರಳಿನಲ್ಲಿ ಮಲಗಿದ್ದರೂ ಇರಬಹುದು. ಅಥವಾ ಅನತಿ ದೂರದಲ್ಲಿ ನಿಂತೋ ನಡೆದೋ ಇದ್ದಿರಬಹುದು. ಮರದಿಂದ ಸೇಬು ಕೆಳಕ್ಕೆ, ನೆಲದ ಮೇಲೆ ಬಿತ್ತು. ಹೀಗೇನಾದರೂ ನನಗೆ ಆಗಿದ್ದಿದ್ದರೆ, ಆ ಸೇಬಿನ ಹಣ್ಣನ್ನು ತೆಗೆದುಕೊಂಡು, ಕೊಳೆತಿದೆಯೋ ಇಲ್ಲವೋ ನೋಡಿಕೊಂಡು, ತಿಂದು ಬಿಡುತ್ತಿದ್ದೆ. ಲೊಟ್ಟೆಯನ್ನು ಹೊಡೆಯುತ್ತಿದ್ದೆ. ಆದರೆ ಸರ್ ಐಸೆಕ್ ನ್ಯೂಟನ್ ಹಾಗೆ ಮಾಲಿಲ್ಲ. ಭೂಮಿಯಮೇಲಕ್ಕೆ ಮರದಿಂದ ಸೇಬಿನ ಹಣ್ಣು ಏಕೆ ಬಿತ್ತು, ಎಂದು ಅವನ ಕುತೂಹಲವು ಕೆರಳಿತು. 'ಮರವು ಹಣ್ಣನ್ನು ದೂಡಿತೇ? ಅಥವಾ ಭೂಮಿಯು ಹಣ್ಣನ್ನು ಸೆಳೆದುಕೊಂಡಿತೆ'? ಎಂದು ಅವನ ವಿಚಾರಪರ ಮನಸ್ಸು, ಕುತೂಹಲದಿಂದ ಕೆರಳಿತು. ಕುತೂಹಲವನ್ನು ನೆಮ್ಮದಿಗೊಳಿಸಲು, ಮನಸ್ಸನ್ನು ತೃಪ್ತಿಗೊಳಿಸಲು, ಅವ ಸಂಶೋಧನೆಯಲ್ಲಿ ತೊಡಗಿದ. ಗುರುತ್ವಾಕರ್ಷಣೆಯ ಸಿದ್ಧಾಂತವನ್ನು ಪ್ರಕಟಿಸಿದ. ಸೇಬಿನ ಹಣ್ಣು ಭೂಮಿಯನ್ನು ಆಕರ್ಷಿಸಿತು. ಭೂಮಿಯು ಸೇಬನ್ನು ಆಕರ್ಷಿಸಿತು. ಇದು ಪರಸ್ಪರ ಆಕರ್ಷಣೆ. ಆಕರ್ಷಣೆಯ ಪ್ರಮಾಣವು ಆಕರ್ಷಿಸುವ ವಸ್ತುವಿನ ಗಾತ್ರಕ್ಕೆ ಅನುಗುಣವಾಗಿರುತ್ತದೆ. ಭೂಮಿಯ ಗಾತ್ರವು, ಸೇಬಿನ ಹಣ್ಣಿನ ಗಾತ್ರಕ್ಕಿಂತ ಕೊಟ್ಯಂತರ ಪಾಲು ಹೆಚ್ಚು. ಆದಕಾರಣ