ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೩೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೨೮೪

ಮನಮಂಥನ

ಮನಸ್ಸು ಮತ್ತು ದೇಹದ ಸಮನ್ವಯಗೊಂಡ ಒಕ್ಕೂಟವೇ ಬಾಳಿನ ಜೀವಾಳ ಎಂದೆವು. ಮನಸ್ಸು ಒಂದು ವಿಧವಾದ ಶಕ್ತಿ ಅಥವಾ ಚೈತನ್ಯ ಎಂದೆವು. ದೇಹವು ಒಂದು ವಸ್ತು ಎನ್ನುವುದು ಸ್ವತಃಸಿದ್ಧ. ಮನಸ್ಸಿಗೂ ದೇಹಕ್ಕೂ ಇರುವ ವ್ಯತ್ಯಾಸಗಳಲ್ಲಿ ಇದು ಹಿರಿದಾದುದು. ಇದಲ್ಲದೇ ಇತರ ವ್ಯತ್ಯಾಸಗಳು ಇರುವುವೇ? ಅಥವಾ ಸಮಾನ ಗುಣಗಳು ಇರುವುದೇ? ಪರಿಶೀಲಿಸೋಣ.

೧. ದೇಹದ ಹೊರಮೈಯಲ್ಲಿ ಕವಚವಿದ್ದಂತೆ ಚರ್ಮವು ಇದೆ. ಕವಚದಂತೆ ರಕ್ಷಣೆಯನ್ನು ನೀಡುತ್ತದೆ. ಮನುಷ್ಯನಲ್ಲಿ ಚರ್ಮದ ರಕ್ಷಣಾ ಕವಚವು ಅಷ್ಟೇನೂ ದೃಢವಾದುದಲ್ಲ. ಆನೆ, ಫೇಂಡಾಮೃಗ, ಎಮ್ಮೆಗಳು ಇಂತಹ ಪ್ರಾಣಿಗಳಲ್ಲಿ ಚರ್ಮವು ಗುರಾಣಿಯಂತೆ ರಕ್ಷಣೆಯನ್ನು ಕೊಡುತ್ತದೆ. ಗಿಡ ಮರಗಳ ಮುಳ್ಳಿನಿಂದ ಈ ಪ್ರಾಣಿಗಳನ್ನು ಪಾರುಮಾಡುತ್ತದೆ.

ಮನುಷ್ಯನ ಚರ್ಮವು ತೆಳುವಾಗಿದೆ. ಆ ಪ್ರಾಣಿಗಳ ಚರ್ಮದಂತೆ ರಕ್ಷಣೆಯನ್ನು ನೀಡುವುದಿಲ್ಲ. ಆದರೂ ಅಂಗೈ ಮತ್ತು ಅಂಗಾಲುಗಳ ಮೇಲಿರುವ ಚರ್ಮವು ದಪ್ಪನಾಗಿ ದೃಢವಾಗಿರುತ್ತದೆ. ಹಿಡಿಯುವಾಗ ಮತ್ತು ನಡೆಯುವಾಗ, ಅಂಗೈ ಮತ್ತು ಅಂಗಾಲುಗಳಿಗೆ ಹೆಚ್ಚು ಅಘಾತವಾಗುತ್ತದೆ. ಆದುದರಿಂದಲೇ ಪ್ರಕೃತಿಯು ಅವುಗಳನ್ನು ದಪ್ಪವನ್ನಾಗಿ ನಿರ್ಮಿಸಿದೆ. ಮೈಯಿನ ಮಿಕ್ಕ ಭಾಗಗಳಲ್ಲಿ ಚರ್ಮವು ತೆಳುವಾಗಿರುತ್ತದೆ. ಆದರೂ ರಕ್ಷಣೆಯನ್ನು ನೀಡುತ್ತದೆ. ಉದಾಹರಣೆಗೆ, ಬೆಳಗೆದ್ದು ಮುಖ ಕ್ಷೌರವನ್ನು ಮಾಡಿಕೊಳ್ಳುವಾಗ, ಸೊಂಟಮೀಂಟುವ ಯಾವುದೋ ರೇಡಿಯೋ ಹಾಡನ್ನು ಕೇಳಿಸಿಕೊಂಡಾಗ, ಬೇ ಹುಷಾರಾಗಿ ಕೆನ್ನೆಯನ್ನು ತುಸು ಹೆರೆದುಕೊಂಡೆವು, ಎನ್ನಿ, ಎಷ್ಟು ಉರಿ ಮತ್ತು ನೋವಾಗುತ್ತೆ! ಅಲ್ಲದೆ ಗಾಬರಿಯಾಗುವಂತೆ ರಕ್ತವು ಸುರಿಯಲಾರಂಭಿಸುತ್ತದೆ. ಅಂದರೆ ತೆಳು ಚರ್ಮವಾದರೂ ದೇಹಕ್ಕೆ ರಕ್ಷಣೆಯನ್ನು ಒದಗಿಸುತ್ತದೆ.

ಚರ್ಮವು ಸ್ಪರ್ಶೇಂದ್ರಿಯ. ಅದರ ವರ್ಣವು ಮತ್ತು ಕಾಂತಿಯು ಇತರರ ಮನಸ್ಸನ್ನು ಆಕರ್ಷಿಸುತ್ತದೆ. ಅಥವಾ ಬೇಸರವನ್ನು ಮೂಡಿಸುತ್ತದೆ. ಇಂತಹವೇ ಇತರ ಗುಣಗಳು, ದೇಹಕ್ಕೆ ಅಗತ್ಯವಾದ ಕೆಲಸಗಳು ಚರ್ಮದ ಹೊಣೆಯಾಗಿರುತ್ತವೆ. ಆದರೆ ಚರ್ಮದ ವಿಶ್ಲೇಷಣೆಯು ಇಲ್ಲಿ ಅಪಕೃತ. ದೇಹಕ್ಕೆ ರಕ್ಷಣೆಯನ್ನು ಕೊಡುವ ಒಂದು ಕವಚ ಎಂಬುದೇ ಸಾಕು.

ದೇಹದ ಹೊರಗೆ ಚರ್ಮವಿದ್ದಂತೆ, ದೇಹದ ಒಳಗಡೆಯಲ್ಲಿ ಮ್ಯೂಕಸ್ ಮೆಂಬ್ರೇನ್ ಎನ್ನುವ ತೆಳುವಾದ ಅಂತಃಪೊರೆಯು ಇದೆ. ದೇಹದಲ್ಲಿನ ವಿವಿಧ ಅಂಗಗಳಿಗೆ ಕವಚವಾಗಿದೆ. ಬಾಯಿಯಲ್ಲಿ ಮ್ಯೂಕಸ್ ಮೆಂಬ್ರೇನ್ ಇದೆ ಎನ್ನುವುದು