ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೩೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಮನಸ್ಸಿನ ಸ್ವರೂಪ

೨೮೫

ಜನರಿಗೆ ತಿಳಿಯದೆ ಇರಬಹುದು. ಆದರೆ ಅದು ತುಸು ಹರಿದು ಬಾಯಿ ಹುಣ್ಣಾದರೆ, ಉಪ್ಪಿನ ಕಾಯಂತಿರಲಿ, ತಿಳಿಸಾರನ್ನವನ್ನೂ ತಿನ್ನಲಾಗುವುದಿಲ್ಲ. ಉರಿ ಮತ್ತು ಯಾತನೆ ಅಷ್ಟಾಗುತ್ತದೆ.

ಮೂಗಿನ ಒಳಗಡೆಯೂ ರಕ್ಷಿಸುವ ಮ್ಯೂಕಸ್ ಮೆಂಬ್ರೇನ್ ಇದೆ. ಮೆಣಸಿನಕಾಯಿನ ಘಾಟು ಮೂಗಿಗೆ ಅಕಸ್ಮಾತ್ ಬಡಿದರೆ, ಮೂಗಿನೊಳಗೆ ಕಾಣಿಸಿಕೊಳ್ಳುವ ಉರಿಯು, ಮ್ಯೂಕಸ್ ಮೆಂಬ್ರೇನ್ ರೇಗಿದೆ, ಎನ್ನುವುದನ್ನು ತಿಳಿಸುತ್ತದೆ.

ಇವುಗಳಿಂದ ದೇಹದ ಒಳಭಾಗಗಳ ರಕ್ಷಣೆಗೆ ಮೂಕಸ್ ಮೆಂಬ್ರೇನ್ ಪ್ರಭಾವಿ ಪಾತ್ರವನ್ನು ವಹಿಸುತ್ತದೆ ಎಂದು ಸುಲಭವಾಗಿ ತಿಳಿಯಬಹುದು.

ದೇಹದ ರಕ್ಷಣೆಗೆ, ಹೊರಗಡೆ ಚರ್ಮ, ಒಳಗೆ ಮ್ಯೂಕಸ್ ಮೆಂಬ್ರೇನ್, ಇರುವಂತೆ, ಮನಸ್ಸಿಗೆ ಯಾವುದಾದರೂ ಕವಚವಿದೆಯೇ ? ಇಲ್ಲ. ವಸ್ತುವಿಗೆ ರಕ್ಷಣಾ ಕವಚವನ್ನು ತೊಡಿಸಬಹುದು. ಆದರೆ ಶಕ್ತಿ ಅಥವಾ ಚೈತನ್ಯದಂತಹುದಕ್ಕೆ, ಕವಚವನ್ನು ತೊಡಿಸುವುದು ಸಾಧ್ಯವಿಲ್ಲ. ರಕ್ಷಿಸುವ ಕವಚವನ್ನು ಮನಸ್ಸೇ ಆಗಿಂದಾಗ್ಗೆ,ಅಗತ್ಯ ಬಿದ್ದಾಗ, ಸಾಧ್ಯವಾದಾಗ ನಿರ್ಮಿಸಿಕೊಳ್ಳಬೇಕು.

೨ ಮಾನವನು ಹಿಂಡು ಜೀವಿ. ಇತರರ ಸಂಪರ್ಕವು ಮತ್ತು ಸಹಾಯವು ದಿನದಿನದ ಬಾಳಿಗೆ ಅವಶ್ಯಕ. ಆದುದರಿಂದ ಪರಸ್ಪರ ಆಕರ್ಷಣೆಯು, ಅನಾಕರ್ಷಣೆಯು ಉಂಟಾಗಬೇಕು. ಲೈಂಗಿಕ ದೃಷ್ಟಿಯಿಂದ ಮಾತ್ರ ಇದನ್ನು ಹೇಳುತ್ತಿಲ್ಲ. ಅದಕ್ಕೆ ಹೊರತಾದ ಮಾನವರಲ್ಲಿ ಉಂಟಾಗುವ ಪರಸ್ಪರ ಆಕರ್ಷಣೆ, ವಿಶ್ವಾಸ, ಗೌರವ ಇತ್ಯಾದಿಗಳನ್ನು ಸೂಚಿಸುತ್ತಿದ್ದೇನೆ. ಇಂತಹ ಆಕರ್ಷಣೆಯು ದೇಹದ ಅಚ್ಚುಕಟ್ಟು, ರೂಪು ರೇಷೆಗಳನ್ನು ಕುರಿತುದಲ್ಲ. ವ್ಯಕ್ತಿಯ ನಡವಳಿಕೆ, ಬುದ್ಧಿವಂತಿಕೆ, ಅನುಕಂಪ, ಇತ್ಯಾದಿಗಳಿಂದ ಆಕರ್ಷಣೆಯು, ಮತ್ತು ವಿಶ್ವಾಸ ಗೌರವಗಳು ಉಂಟಾಗುತ್ತವೆ. ಇವುಗಳೆಲ್ಲವೂ ವ್ಯಕ್ತಿಯ ಮನಸ್ಸಿನಿಂದ ಪ್ರಚೋದಿತವಾದುವು. ಆದಕಾರಣ ಮನಸ್ಸು ಮಾನವನ ಪರಸ್ಪರ ಆಕರ್ಷಣೆಗೆ ಮೂಲವಾದುದು ಎಂದನ್ನಬಹುದು.

ಎರಡು ದೇಶಗಳು ಪರಸ್ಪರ ವೈರತ್ವವನ್ನು ಪ್ರಕಟಿಸುತ್ತಿರಬಹುದು. ಆದರೂ ಒಂದು ರಾಷ್ಟ್ರದ ಮೇಧಾವಿ ವಿಜ್ಞಾನಿಗಳನ್ನು, ಉತ್ತಮ ಕಲಾಕಾರರನ್ನೂ, ವೈರಿ ರಾಷ್ಟ್ರದ ವಿಜ್ಞಾನಿಗಳು ಮತ್ತು ಕಲಾಕಾರರು ಮೆಚ್ಚಿಕೊಳ್ಳುತ್ತಾರೆ, ಗೌರವಿಸುತ್ತಾರೆ. ವೈಯಕ್ತಿಕವಾಗಿ ಭೇಟಿಯಾದಾಗ, ಆತ್ಮೀಯರಾಗುತ್ತಾರೆ. ದೇಹದಿಂದ ಇಂತಹ ಆತ್ಮೀಯತೆಯನ್ನು ಸಾಧಿಸಲು ಆಗುವುದಿಲ್ಲ. ಮನಸ್ಸಿನಿಂದಲೇ ಸಾಧ್ಯ.