ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೩೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೨೮೮

ಮನಮಂಥನ

ಮಾಡುವುದಿಲ್ಲ. ಅದು ಬಳಸುವವನ ಕೇವಲ ಆಯುಧ.

ಒಂದು ರೀತಿಯಲ್ಲಿ ಮನಸೂ ಚಾಕುವಿನಂತೆಯೇ, ಸದುಪಯೋಗಕ್ಕೂ ಅಣಿಯಾಗುತ್ತದೆ, ದುರುಪಯೋಗಕ್ಕೂ ಸಿದ್ಧವಾಗಿರುತ್ತದೆ. ಸದುಪಯೋಗ ಮತ್ತು ದುರುಪಯೋಗ, ಇವೆರಡೂ ಮನಸ್ಸಿನ ಹಲವಾರು ಅಂಶಗಳಿಂದ ನಡೆಯುತ್ತವೆ. ಮನಸ್ಸಿನ ಅಂತರಿಕ ಅಂಶವೊಂದು ಅದನ್ನು ಚೈತನ್ಯ ಎಂದು ಕರೆಯಬಹುದು,-ಅದು ಸತ್ ಉಪಯೋಗ, ಒಳ್ಳೆಯ ಉಪಯೋಗಕ್ಕೆ ಮಾತ್ರ ಪ್ರಚೋದಕವಾಗಿರುತ್ತದೆ. ಆದರೆ ಮನಸ್ಸಿನ ಇತರ ಅಂಶಗಳು, ಚೈತನ್ಯದ ಅಂಶವನ್ನು ಅಡಗಿಸಿರುತ್ತವೆ. ಅಥವಾ ಕಾಣದಂತೆ ಕೆಂಡವನ್ನು ಬೂದಿಯು ಮುಚ್ಚಿಡುವಂತೆ ಹುದುಗಿಸಿಡುತ್ತದೆ. ಆದುದರಿಂದ ಇತರ ಅಂಶಗಳು ಮನಸ್ಸನ್ನು ದುಷ್ಟ ಅಥವಾ ಅನಿಷ್ಟ ಪರಿಣಾಮಗಳಾಗುವಂತೆ ನಡೆಸುತ್ತವೆ.

ಮನಸ್ಸು ಮತ್ತು ಅದರೊಳಗೆ ಅಂತರ್ಗತವಾಗಿರುವ ಚೈತನ್ಯ ಇವೆರಡೂ ಸ್ವಾಭಾವಿಕವಾಗಿ ಮಲಿನವಾಗಿರುವುದಿಲ್ಲ. ಎಳೆಯ ಮಗುವಿನ ಮನಸ್ಸಿನಂತೆ, ನಿರ್ಮಲವಾಗಿರುತ್ತದೆ. ಪ್ರಪಂಚದ ಅರಿವನ್ನು ಪಡೆಯುವ ಮಹಾ ಕುತೂಹಲವೂ ಇರುತ್ತದೆ. ಬೆಳೆಯತೊಡಗಿದಾಗ 'ತನ್ನ' ಎಂಬ ಸ್ವತಂತ್ರವಾದ, ಇತರರ ನೆರವಿಲ್ಲದೇ ಬಾಳುವ ಆಸೆಯಿಂದ ಕಾಮ ಕ್ರೋಧಾದಿ ಮಿತ್ರ ಷಡ್ವರ್ಗಗಳನ್ನು ಅಭಿವೃದ್ಧಿಸಿಕೊಳ್ಳುತ್ತದೆ. ಈ ತನಕ ಮನಸ್ಸಿನಲ್ಲಿ ಅಂತರ್ಗತವಾಗಿರುವ ಸತ್ ಉಪಯೋಗದ ಚೈತನ್ಯವು ಪ್ರಭಾವೀಯುತವಾಗಿ ಮಗುವಿನ ಮನಸ್ಸನ್ನು ನಡಸುತ್ತದೆ ಆದುದರಿಂದಲೇ ಎಲ್ಲ ಮಕ್ಕಳೂ, ದೊಡ್ಡವರಿಗೆ ಮುದ್ದಾಗಿ ಕಾಣಬರುವುದು. ಸತ್ ಚೈತನ್ಯವು ಮಕ್ಕಳ ಮನಸ್ಸನ್ನು ಅನಿರ್ಬಂಧಿತವಾಗಿ ನಡೆಸುವುದರಿಂದ, ಮಕ್ಕಳ ನಡವಳಿಕೆಯು ಹಿರಿಯರಿಗೆ ಅಪ್ಯಾಯಮಾನವಾಗಿರುತ್ತದೆ. ಬಾಳಿನಲ್ಲಿ, ಸ್ಪರ್ಧಾಬಾಳಿನಲ್ಲಿ ಸ್ವತಂತ್ರವಾಗಿ, ತನ್ನ ಕಾಲುಗಳ ಮೇಲೆ ನಿಲ್ಲಬೇಕಾದಾಗ, ಮಿತ್ರ ಷಡ್ವರ್ಗಗಳು, ಮಂಕು ಬೂದಿಯನ್ನು, ಸತ್-ಚೈತನ್ಯಾಂಶದ ಸುತ್ತಲೂ ಭದ್ರವಾಗಿ ಹರಡಿ ಅರಿ-ಷಡ್ವರ್ಗಗಳಾಗುತ್ತವೆ. ಅರಿ ಎಂದರೆ ಶತ್ರು, ಯಾರಿಗೆ ಶತ್ರು? ವ್ಯಕ್ತಿಯು ಈ ಲೋಕದಲ್ಲಿ ಈ ಬಾಳಿನಲ್ಲಿ ಸ್ಪರ್ಧಾಪೂರಿತ ಸಮಾಜದಲ್ಲಿ ಬಾಳ ಬೇಕಾದಾಗ, ಎಲ್ಲರಿಗಿಂತಲೂ ಎತ್ತರವಾಗಿ ತಲೆಯನ್ನು ಎತ್ತತೊಡಗುವಾಗ, ಅರಿಷಡ್ವರ್ಗಗಳು, ನೆರವಾಗುತ್ತವೆ. ಅಂದರೆ ವ್ಯಕ್ತಿಗೆ ಹೇಗೆ ಶತ್ರುವಾಯಿತು? ಶತ್ರುವಾಗಲಿಲ್ಲ. ಲೌಕಿಕ ಬಾಳಿಗೆ ಅಗತ್ಯವಾಯಿತು. ಆದರೆ ಸಂಘದ ದೃಷ್ಟಿಯಿಂದ ಮಿತ್ರನೂ ಆಗಲಿಲ್ಲ, ಕಾರಣ, ಸತ್ ಚೈತನ್ಯದ ಅಂಶದ ಮೇಲೆ, ಮಂಕು ಬೂದಿಯು ಧಂಡಿಯಾಗಿ ತುಂಬಿಕೊಂಡಿರುತ್ತದೆ. ಅಹಂ-ಕಾರವೆಂಬ ಮಂಕುಬೂದಿ.