೨೮೯
ಅಂದರೆ 'ಶತ್ರು' ಎಂದು ಷಡ್ವರ್ಗಗಳನ್ನು ಹಿರಿಯರು ಹೆಸರಿಸಿದರೇಕೆ?
ಮನಸ್ಸನ್ನು ನಿರ್ಮಲವಾಗಿ ನಡೆಸುವ, ಮನಸ್ಸಿನ ಒಂದು ಭಾಗದಲ್ಲಿ ಅಂತರ್ಗತವಾಗಿರುವ ಸತ್ ಚೈತನ್ಯದ ಅಂಶವನ್ನು ; ಸ್ವತಂತ್ರವಾಗಿ ಬಾಳುವ ಹೆಬ್ಬಯಕೆಯಿಂದ, ಈ ಷಡ್ವರ್ಗಗಳು ಅದುಮಿ, ಅಮುಕಿ, ಮುಚ್ಚಿಡುವುದರಿಂದ; ಮಂಕು ಬೂದಿಯಿಂದ ಮರೆಮಾಚುವುದರಿಂದ ಸ್ಪರ್ಧಾಬಾಳಿನ ದ್ವಂದ್ವರೂಪದ ಮಾಯಾ ಸ್ವತಂತ್ರವನ್ನು, ಇದೇ ಸತ್ಯ, ಇದೇ ಶಾಶ್ವತ ಎಂದು ನಂಬಿಕೆಯನ್ನು ಹುಟ್ಟಿಸಿ ಬೆಳೆಸುವುದರಿಂದ, ಯಾವ ಸತ್ ಚೈತನ್ಯದ ಅಂಶವು, ಮನಸ್ಸಿನ ಅಂತರಾಳದಲ್ಲಿ, ಅವಿನಾಶಿಯಾಗಿ, ಆನಂದಮಯವಾಗಿ, ಮಕ್ಕಳನ್ನು ಕೇಕೇ ಹಾಕುವಂತೆ ನಡೆಸುತ್ತ, ಕಾಲಾತೀತವಾಗಿರುವುದೋ, ಸಾವಿನ ಭಯವೇ ಇಲ್ಲದಿರುವುದೋ, ಸನಾತನವಾದ, ಪುರಾತನವಾದ, ಜೀವದ ಪ್ರಾಣರೂಪವೋ, ಅದನ್ನು ಮಂಕುಬೂದಿಯ ಮುಸುಕಿನಿಂದ, ಸಂಪೂರ್ಣವಾಗಿ, ಅಥವಾ ಹೆಚ್ಚು ಕಡಿಮೆ ಸಂಪೂರ್ಣವಾಗಿ, ಮುಚ್ಚಿಬಿಡುವುದರಿಂದ.
ಈ ಎಲ್ಲ ಕಾರಣಗಳಿಂದ ಷಡ್ವರ್ಗಗಳನ್ನು ; ಬಾಳನ್ನು ಅನುಭವಿಸಿ, ಮನನ ಮಾಡಿದ ಋಷಿಗಳು, 'ಅರಿಷಡ್ವರ್ಗ'ಗಳು ಎಂದು ನುಡಿದರು.
ಮನಸ್ಸು ಎಂಬುದು ಶಕ್ತಿಯಾದರೂ, ಅರಿಷಡ್ವರ್ಗಗಳಿಂದ ಪ್ರಭಾವಿತವಾದಾಗ, ಮಲಿನವಾಗಬಹುದು ಎಂದು ನಿರ್ಧರಿಸಬಹುದು. ದೇಹದ ಮಲಿನತೆಯೂ, ಮನಸ್ಸಿನ ಮಲಿನತೆಯೂ, ಪ್ರಕೃತಿಯ ಕಾರ್ಯಕ್ರಮದಲ್ಲಿ ಅನಿವಾರ್ಯ ಎನ್ನಬಹುದು.
೬. ದೇಹ ಮತ್ತು ಮನಸ್ಸಿನ ಪರಸ್ಪರ ಸಂಬಂಧವನ್ನು ದಿನದಿನದ ಅನುಭವಗಳ ದೃಷ್ಟಿಯಿಂದಲೂ ನೋಡಬಹುದು.
(ಅ) ಜ್ವರವು ಉಗ್ರವಾಗಿ ಬಂದಾಗ ರೋಗಿಗೆ ಸನ್ನಿ ಬಡಿದಂತಾಗುತ್ತದೆ. ಮಾನ, ಅವಮಾನ, ಕೆಟ್ಟ ಮಾತು, ಒಳ್ಳೆಯ ಮಾತು ಇವುಗಳನ್ನು ತಾತ್ಕಾಲಿಕವಾಗಿ ಮರೆತು, ಬಡಬಡಿಸುತ್ತಾನೆ. ಕರಪಲ ಮಾಡುತ್ತಾನೆ, ಜ್ವರವು ಉಗ್ರವಾದಾಗ, ಬೇನೆಯ ತೀವ್ರ ವಿಷಯವು ಮೆದುಳಿಗೆ ಅಧಿಕ ಪ್ರಮಾಣದಲ್ಲಿ ಹರಡಿ ಮೆದುಳಿನ ಚಟುವಟಿಕೆಯಿಂದ ಉಂಟಾಗುವ ಮನಸ್ಸು ಎರಿಬಿರಿಯಾಗುತ್ತದೆ. ಬೇನೆಯು ಗುಣವಾದ ಮೇಲೆ ಮನಸ್ಸು ಸ್ವಾಸ್ಥ್ಯಸ್ಥಿತಿಯನ್ನು ಮರಳಿ ಪಡೆಯುತ್ತದೆ. ಅಂದರೆ ದೇಹದಲ್ಲಾಗುವ ಉಗ್ರ ವ್ಯತ್ಯಾಸಗಳು, ಮನಸ್ಸಿನ ಮೇಲೆ ಪ್ರಭಾವವನ್ನು ಹೂಡುತ್ತದೆ.