ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೩೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೨೯೨

ಮನಮಂಥನ

ಅಂದರೆ ದೇಹದ ವಿಧವಿಧ ಸ್ಥಿತಿಗಳು ಮನಸ್ಸಿನ ಮೇಲೆ ಸಾಕಷ್ಟು ಪರಿಣಾಮವನ್ನುಂಟುಮಾಡುತ್ತದೆ ಎಂಬುದು ಸ್ಪಷ್ಟವಾಯಿತು.

ಅದೇ ರೀತಿಯಲ್ಲಿ ಮನಸ್ಸಿನಲ್ಲಾಗುವ ಆತಂಕ, ದುಃಖ, ಸುಖ, ಇತ್ಯಾದಿಗಳು ದೇಹದ ಮೇಲೆ ಪರಿಣಾಮವನ್ನುಂಟುಮಾಡುತ್ತದೆಯೇ ? ಖಂಡಿತವಾಗಿಯೂ ಹೌದು.

ದಿನವೆಲ್ಲಾ ದೇಹಶ್ರಮದಿಂದ ದುಡಿದು ಬಂದ ಕಾರ್ಖಾನೆಯ ಕೆಲಸಗಾರ, ಮನೆಗೆ ಹಿಂತಿರುಗುವಾಗ 'ಸರ್ವಂಭಕ್ಷಯಾಮಿ' ಎನ್ನುವಂತೆ ಹಸಿದಿರುತ್ತಾನೆ. ಆದರೆ ಮನೆಗೆ ಬಂದಾಗ ಮಗುವಿಗೆ ಕೆಂಡಾಮಂಡಲ ಜ್ವರ ಬಂದಿದ್ದರೆ, ಊಟವನ್ನು ಮಾಡುವುದೇ ಇಲ್ಲ. ತೌರಿಗೆ ಹೆಂಡತಿಯು ಹೋದಾಗ, ಮೊದಲ ಹೆರಿಗೆಗೆ, ಅಡಿಗೆ ಮನೆಯಲ್ಲಿ ಒಬ್ಬನೇ ಕೂತು ಊಟಮಾಡುವಾಗ, ಎರಡೇ ತುತ್ತಿಗೆ ಸಾಕು ಎನಿಸುತ್ತದೆ. ಹಸಿವು ಮುಚ್ಚಿಹೋಗುತ್ತದೆ. ತೌರಿಂದ ಹೆಂಡತಿಯು ಹಿಂತಿರುಗಿದ ಮೇಲೆ ಝಝಣದ, ಹಿನ್ನೆಲೆಯಲ್ಲಿ ಆಕೆಯು ಉಪ್ಪಿಲ್ಲದ ಅಡಿಗೆಯನ್ನು ಬಡಿಸಿದರೂ, ನಾಲ್ಕು ತುತ್ತು ಹೆಚ್ಚು ತಿನ್ನುತ್ತಾನೆ. ವರಮಾನ ತೆರಿಗೆಯ ಲೆಕ್ಕವನ್ನು ನಂಬುವಂತೆ ಬರೆಯಲು ಕುಳಿತ ಸಾಹುಕಾರನಿಗೆ, ಹಸಿವಾಗುವುದೇ ಇಲ್ಲ. ಹೆಂಡತಿಯ ಕಾಟಕ್ಕೆ ಎರಡು ರೊಟ್ಟಿಯನ್ನು ತಿಂದು ಮುಗಿಸಿ, ಕಟ್ಟುಕತೆಯನ್ನು ಲೆಕ್ಕದಲ್ಲಿ ಹೇಗೆ ಬರೆದು ನಂಬಿಸಬಹುದು ಎಂಬ ಆತಂಕದಲ್ಲಿ ಮಗ್ನನಾಗಿರುತ್ತಾನೆ. ಚುನಾವಣೆಗಳಲ್ಲಿ ಠೇವಣಿ ಹಣವನ್ನು ಕಳೆದುಕೊಂಡ ಅಭ್ಯರ್ಥಿಯು ಒಂದೆರಡು ವಾರ ತದನಂತರ ಊಟವನ್ನು ಮಾಡುತ್ತಾನಾದರೂ, ಸವಿಯುವುದಿಲ್ಲ. ಮನಸ್ಸು ಕಹಿಯಾದಂತೆ, ಆಗ ಅವನ ನಾಲಿಗೆಯೂ ಕಹಿಯಿಂದ ಲೇಪಿಸಿದಂತಾಗುತ್ತದೆ.

ಕಾಮಾತುರನಾದವನು, ಇಷ್ಟಾರ್ಥವು ಲಭಿಸಿ ಕಾರ್ಯಗತವಾಗುವ ತನಕ, ಅನ್ನ ನೀರುಗಳನ್ನು ನಿರ್ಲಕ್ಷಿಸಿ ಕೃಶನಾಗುತ್ತಾನೆ, ಕ್ಷಯಿಸುತ್ತಾನೆ, ಕೃಷ್ಣಪಕ್ಷದ ಚಂದಿರನಂತೆ. ದೀಪಾವಳಿಗೆಂದು ಮೊದಲ ಬಾರಿಗೆ ಬಂದ ಅಳಿಯನಿಗೆ, ಅತ್ತೆಯು ಬಡಿಸಿದ ಪರಮಾನ್ನದ ಮೇಲೆ ದೃಷ್ಟಿಯೂ ಇರುವುದಿಲ್ಲ.

ಪಿಶಾಚಿ, ದೆವ್ವ, ಭೂತ, ಇತ್ಯಾದಿ ಜಾನಪದ ನಂಬಿಕೆಗಳಲ್ಲಿ ಮಾನಸಿಕ ಅಲ್ಲೋಲಕಲ್ಲೋಲದಿಂದ, ದೇಹದ ಮೇಲೆ ಆಗುವ ಪರಿಣಾಮಗಳನ್ನು ಸ್ಪಷ್ಟವಾಗಿ ಕಾಣಬಹುದು.

ಮೋಹಿನಿ ಎನ್ನುವ, ಬಿಳಿ ಸೀರೆಯನ್ನುಟ್ಟು, ಬಿಳಿ ಸೆರಗನ್ನು ಹಾರಿಸುತ್ತ, ಕಪ್ಪಂಕತ್ತಲೆಯಲ್ಲಿ ಬೆಳ್ಳಂಬೆಳದಿಂಗಳನ್ನು ಹರಡುತ್ತ, ಪಿಶಾಚಿಯು ಅರೆಗೋಚರವಾಗಿ ತೇಲಾಡುತ್ತದಂತೆ. ಕಾಮಾತುರನಾದ, ಆದರೂ ಸಮಾಜದ ಕಟ್ಟುಪಾಡುಗಳಿಗೆ